ಬಿಜೆಪಿ ಭ್ರಷ್ಟಾಚಾರಕ್ಕೆ ಶಾಸಕನ ಮನೆಯಲ್ಲಿ ಸಿಕ್ಕ ನೋಟಿನ ರಾಶಿಯೇ ಸಾಕ್ಷಿ ; ಪೋಸ್ಟರ್ ಭ್ರಷ್ಟರಿಗೆ ಬಿಜೆಪಿಯೇ ಭರವಸೆ ಎಂದಾಗಬೇಕು ! 

04-03-23 03:00 pm       Mangalore Correspondent   ಕರಾವಳಿ

ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಶಾಸಕರ ಮನೆಯಲ್ಲಿ ಸಿಕ್ಕಿರುವ ನೋಟಿನ ರಾಶಿಯೇ ಸಾಕ್ಷಿ. ಈಗ ಬಿಜೆಪಿಯೇ ಭರವಸೆ ಅಲ್ಲ, ಭ್ರಷ್ಟಾಚಾರಿಗಳಿಗೆ ಬಿಜೆಪಿಯೇ ಭರವಸೆ ಎಂದು ಹೇಳಬೇಕು.

ಮಂಗಳೂರು, ಮಾ.4 : ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಶಾಸಕರ ಮನೆಯಲ್ಲಿ ಸಿಕ್ಕಿರುವ ನೋಟಿನ ರಾಶಿಯೇ ಸಾಕ್ಷಿ. ಈಗ ಬಿಜೆಪಿಯೇ ಭರವಸೆ ಅಲ್ಲ, ಭ್ರಷ್ಟಾಚಾರಿಗಳಿಗೆ ಬಿಜೆಪಿಯೇ ಭರವಸೆ ಎಂದು ಹೇಳಬೇಕು. ಪದೇ ಪದೇ ರಾಜ್ಯಕ್ಕೆ ಬರ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ತಮ್ಮ ಪಕ್ಷದ ಶಾಸಕನ ಭ್ರಷ್ಟಾಚಾರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಆಗ್ರಹಿಸಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರತೀ ಬಾರಿ ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳ್ತಾ ಇದ್ದರು.  ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ದೂರು ಹೇಳಿಕೊಂಡರೂ ಸಾಕ್ಷಿ ಕೊಡಿ ಎಂದಿದ್ದರು.‌ ಈಗ ತಮ್ಮದೇ ಪಕ್ಷದ ಶಾಸಕರ ಭ್ರಷ್ಟಾಚಾರಕ್ಕೆ ಸಾಕ್ಷ್ಯ ಸಿಕ್ಕಿದೆ.‌ ಇದರ ಜೊತೆಗೆ ಗ್ಯಾಸ್ ಬೆಲೆ ಹೆಚ್ಚಿಸಿ ಜನರನ್ನ ಸಂಕಷ್ಟಕ್ಕೆ ತಳ್ಳಿದ್ದಾರೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗೆ 350 ರು. ತೆರಿಗೆ ಹಾಕಿದ್ದಾರೆ. 

ದೇಶದ ಇತಿಹಾಸದಲ್ಲಿ ಎಡಿಜಿಪಿ ಜೈಲಿಗೆ ಹೋದ ಉದಾಹರಣೆ ಇರಲಿಲ್ಲ. ಕರ್ನಾಟಕ ಸರ್ಕಾರದ ಬಿಜೆಪಿ ಅವಧಿಯಲ್ಲಿ ಎಡಿಜಿಪಿಯೂ ಜೈಲಿಗೆ ಹೋಗುವಂತಾಯ್ತು. ಹಿಂದೆಲ್ಲ ಬಿಹಾರ, ಉತ್ತರ ಪ್ರದೇಶದ ಭ್ರಷ್ಟಾಚಾರದ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಈಗ ಕರ್ನಾಟಕ ಭ್ರಷ್ಟಾಚಾರ ವಿಚಾರದಲ್ಲಿ ಚರ್ಚೆಯ ವಸ್ತುವಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಮೋದಿಗೆ‌ ಪತ್ರ ಬರೆದಿದ್ದರು. ಆದರೆ ಪ್ರಧಾನಿ ಈ ಬಗ್ಗೆ ಯಾವುದೇ ತನಿಖೆಗೂ ಸೂಚನೆ ನೀಡಿಲ್ಲ. ಭ್ರಷ್ಟಾಚಾರ ವಿರೋಧಿಸುತ್ತೇನೆ ಎನ್ನುವ ಮೋದಿ ಮೌನ ವಹಿಸಿದ್ದು ಏನನ್ನು ಸೂಚಿಸುತ್ತದೆ ಎಂದು ಖಾದರ್ ಪ್ರಶ್ನೆ ಮಾಡಿದರು. 

Man in fancy dress...': Congress' swipe at PM Modi over Aero India event in  Bengaluru | India News – India TV

ರಾಜ್ಯದ ಬಿಜೆಪಿ ನಾಯಕರು ಪ್ರತಿ ಬಾರಿ ನೀವು ಸಾಕ್ಷಿ ಕೊಡಿ ಅಂತಿದ್ರು. ಆದರೆ ಈಗ ಸಾಕ್ಷಿ ನಮ್ಮ ಕೈಗೆ ಸಿಕ್ಕಿದೆ, ಪ್ರಧಾನಿ ರಾಜ್ಯಕ್ಕೆ ಬಂದಾಗ ಈ ಬಗ್ಗೆ ಮಾತನಾಡಲಿ. ರಸ್ತೆಯ ಹೆಸರು ಬದಲಿಸೋದು, ಸರ್ಕಲ್ ಹೆಸರು ಬದಲಿಸೋದರಿಂದ ಜನರ ಹೊಟ್ಟೆ ತುಂಬೋದಿಲ್ಲ. ಇವರ ಕೋಟ್ಯಂತರ ಆಸ್ತಿಯನ್ನು ನೋಡಿದರೆ ಇವರದು 40% ಕಮಿಷನ್ ಅಲ್ಲ, ಅದು ಇನ್ನೂ ಜಾಸ್ತಿಯಾಗಬಹುದು ಎನ್ನುವ ಸ್ಥಿತಿ ಬಂದಿದೆ.‌ ಮತ್ತೆ ಬಿಜೆಪಿ ಸರ್ಕಾರ ಬಂದ್ರೆ ಇದು 100% ಆಗುತ್ತೆ. ತೆರಿಗೆಯ ದುಡ್ಡನ್ನು ಪೂರ್ತಿ ನುಂಗಿ ಹಾಕುತ್ತಾರೆ. 

ಜನರ ಟ್ಯಾಕ್ಸ್ ನಿಂದ ‌ಸರ್ಕಾರ ಬದುಕುತ್ತಿದೆ ಅನ್ನೋದು ತಿಳಿದಿರಬೇಕು. ‌ಅದು ಬಿಟ್ಟು ಸಿಕ್ಕಿದ್ದಕ್ಕೆಲ್ಲ ಜನರ ಮೇಲೆ ಟ್ಯಾಕ್ಸ್ ಹಾಕಿ ಭ್ರಷ್ಟಾಚಾರ ಮಾಡ್ತಾ ಇದಾರೆ. ಒಂದು ಕಡೆ ಟ್ಯಾಕ್ಸ್ ಹಾಕೋದು, ಮತ್ತೊಂದು ಕಡೆ ತೆರಿಗೆ ದುಡ್ಡನ್ನೇ ಹೊಟ್ಟೆಗಿಳಿಸೋದು ಆಗಿದೆ.‌ ಹೀಗಾಗಿ ಬಿಜೆಪಿ ಭ್ರಷ್ಟಾಚಾರದ ಚಿಲುಮೆಯಾಗಿದೆ ಎಂದು ಹೇಳಲು ಬಯಸುತ್ತೇನೆ. ಗುತ್ತಿಗೆದಾರರ ಸಂಘದ ಕಮಿಷನ್ ಆರೋಪ, ಪಿಎಸ್ಐ ಹಗರಣ ಸೇರಿ ಎಲ್ಲದರ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು. ಪ್ರಕರಣ ಸಂಬಂಧಿಸಿ ಶಾಸಕರು, ಕೈಗಾರಿಕಾ ಮಂತ್ರಿ ಮತ್ತು ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಹೇಳಿದರು.‌

ಕಾಂಗ್ರೆಸ್ ಸರ್ಕಾರ ಇವೆಲ್ಲ ಪ್ರಕರಣದ ಬಗ್ಗೆ ತನಿಖೆ ನಡೆಸ್ತೀರಾ ಎಂಬ ಪ್ರಶ್ನೆಗೆ, ಅನ್ಯಾಯಕ್ಕೆ ಒಳಪಟ್ಟವರ ದೂರು ನೀಡಿದರೆ ತನಿಖೆ ಮಾಡ್ತೇವೆ. ಈಗಾಗಲೇ ಪಕ್ಷದ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತನಿಖೆ ಮಾಡ್ತೀವಿ ಅಂದಿದ್ದಾರೆ ಎಂದರು. 

ಲೋಕಾಯುಕ್ತ ಬಲಗೊಳಿಸಿದ್ದು ನಾವು ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಯಾವತ್ತೂ ಲೋಕಾಯುಕ್ತ ನಿಷ್ಕ್ರಿಯ ಮಾಡಿಲ್ಲ.‌ ಎಸಿಬಿ ದೇಶದ 16 ರಾಜ್ಯಗಳಲ್ಲಿ ಇದೆ, ಹಾಗಾಗಿ ಎಸಿಬಿ ರಚನೆ ಮಾಡಿದ್ದೆವು. ಸಿದ್ದರಾಮಯ್ಯ ಕಾಲದಲ್ಲಿ ಲೋಕಾಯುಕ್ತ ಭಾಸ್ಕರ ರಾವ್, ಪುತ್ರರು ಭ್ರಷ್ಟಾಚಾರ ನಡೆಸಿದ್ದರು. ‌ಹಾಗಾಗಿ ಅವರನ್ನೇ ತನಿಖೆಗೆ ಒಳಪಡಿಸುವ ಉದ್ದೇಶದಿಂದ ಪ್ರತ್ಯೇಕ ಎಸಿಬಿ ಘಟಕ ರಚನೆ ಮಾಡಿದ್ದು.‌ ಹಾಗಂತ ಲೋಕಾಯುಕ್ತದ ಅಧಿಕಾರ ಕಿತ್ತುಕೊಂಡಿರಲಿಲ್ಲ. ನಮ್ಮ ಅವಧಿಯಲ್ಲಿ ವಿಶ್ವನಾಥ ಶೆಟ್ಟಿ ಲೋಕಾಯುಕ್ತರಾಗಿ ಚೆನ್ನಾಗಿ ನಿರ್ವಹಿಸಿದ್ದರು. ಈಗ ಲೋಕಾಯುಕ್ತ ನ್ಯಾಯಾಲಯ ಆದೇಶದಿಂದ ಮಾಡಿದ್ದು. ಬಿಜೆಪಿಯವರು ತಂದಿದ್ದಲ್ಲ. ಇವರ ಅಡ್ವೋಕೇಟ್ ಜನರಲ್ ಎಸಿಬಿ ರಚನೆ ಸರಿಯಿದೆ ಅಂತ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರು.‌ ಆದರೂ ಲೋಕಾಯುಕ್ತ ನ್ಯಾಯಾಂಗ ಅಲ್ಲ, ಸರ್ಕಾರದಿಂದ ನೇಮಕವಾಗಿದ್ದು. ಹೀಗಾಗಿ ಎಲ್ಲದರ ಬಗ್ಗೆಯೂ ಪ್ರತ್ಯೇಕ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದರು. 

ಕೋಮುವಾದಿಗಳಿಗೆ ಅವಕಾಶ ಕೊಡಲ್ಲ 

ಉಳ್ಳಾಲದಲ್ಲಿ ಎಸ್ ಡಿಪಿಐ ಅಭ್ಯರ್ಥಿ ಸ್ಪರ್ಧೆ ಕುರಿತ ಪ್ರಶ್ನೆಗೆ, ಯಾರಿಗೂ ಸ್ಪರ್ಧೆ ಮಾಡಬಹುದು. ನಮ್ಮ ಕಾರ್ಯಕರ್ತರು ‌ಮತ್ತು ಮತದಾರರನ್ನ ನೋಡಿ ನಾನು ಚುನಾವಣೆಗೆ ನಿಲ್ಲುವುದು. ಅಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನೋದ್ರ ಬಗ್ಗೆ ನನಗೇನು ಸಮಸ್ಯೆ ಇಲ್ಲ. ಉಳ್ಳಾಲದ ಜನ ಸೌಹಾರ್ದತೆ ಮತ್ತು ಸಾಮರಸ್ಯವನ್ನ ಗೆಲ್ಲಿಸ್ತಾರೆ. ಗಲಾಟೆ ಮಾಡುವ, ಸಾಮರಸ್ಯ ಕದಡೋರಿಗೆ, ಕೋಮುವಾದಿಗಳಿಗೆ ಅವಕಾಶ ಕೊಡಲ್ಲ ಎಂದರು. ಕಾಂಗ್ರೆಸ್ ಓಟ್ ವಿಭಜನೆ ಆಗುತ್ತೆ ಅಂತ ಹೇಗೆ ಹೇಳೋದು, ಬಿಜೆಪಿ ಓಟ್ ಕೂಡ ಹೋಗಬಹುದು. ಅವರು ಹೇಗೂ ಒಟ್ಟಿಗಿದ್ದಾರಲ್ಲಾ ಎಂದರು. ನಿಮ್ಮನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ ಎಂದು ಕೇಳಿದ್ದಕ್ಕೆ, ಮಾವಿನ ಕಾಯಿಗೆ ಕಲ್ಲು ಹೊಡೀತಾರೆ ಹೊರತು ಗೋಲಿ ಮರಕ್ಕೆ ಹೊಡೆಯಲ್ಲ ಎಂದು ವ್ಯಂಗ್ಯವಾಡಿದರು

Mangalore U T Khader demands clarification on corruption by BJP after BJP MLA sons caught red handed lokayukta. "BJP MLAs' sons have been caught red-handed taking bribes, and the price of gas has gone up, including commercial gas by Rs 350. The government is trying to collect taxes indirectly from people and is surviving on the taxpayers' money." "BJP leaders are turning a blind eye to the people's problems. We can see posters with the BJP slogan, which says 'BJP Baravase.' Now, they have changed it to 'BJP's assurance of corruption.'