ಮಂಗಳೂರು ದಕ್ಷಿಣ 'ಅಭಿವೃದ್ಧಿ ಪಥ' ಪುಸ್ತಕ ಬಿಡುಗಡೆ ; 4,500 ಕೋಟಿ ದಾಖಲೆಯ ಅನುದಾನ, 2026ರಲ್ಲಿ ನಗರದ ಚಿತ್ರಣ ಬದಲು - ವೇದವ್ಯಾಸ ಕಾಮತ್ 

24-04-23 06:14 pm       Mangalore Correspondent   ಕರಾವಳಿ

ಶಾಸಕನಾಗಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ 4500 ಕೋಟಿ ರೂ.ಗಳಿಗೂ ಅಧಿಕ ಅನುದಾನ ತಂದಿದ್ದೇನೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಅದು ಜನರ ಕಣ್ಣ ಮುಂದಿದೆ.

ಮಂಗಳೂರು, ಎ.24 : ಶಾಸಕನಾಗಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ 4500 ಕೋಟಿ ರೂ.ಗಳಿಗೂ ಅಧಿಕ ಅನುದಾನ ತಂದಿದ್ದೇನೆ. 2000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಅದು ಜನರ ಕಣ್ಣ ಮುಂದಿದೆ. 2026ರ ವೇಳೆಗೆ ಮಂಗಳೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ಐದು ವರ್ಷಗಳ ಅವಧಿಯಲ್ಲಿ ಮಾಡಲಾದ ಸಾಧನೆ ಹಾಗೂ ಅಭಿವೃದ್ಧಿಯ ಕುರಿತಾದ "ಅಭಿವೃದ್ಧಿ ಪಥ" ಪುಸ್ತಕ ಬಿಡುಗಡೆಗೊಳಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಜಲಸಿರಿ ಯೋಜನೆ ಅನುಷ್ಠಾನಗೊಳಿಸಿದ್ದು, 70- 80 ದಶಕದ ಹಳೆ ಪೈಪುಗಳನ್ನು ಬದಲಿಸಿ ಹೊಸ ಪೈಪುಗಳ ಜೋಡಣೆ ಮಾಡಲಾಗುತ್ತಿದೆ. ಅದಕ್ಕಾಗಿ 792 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ನೀರಿನ ಪೈಪುಗಳಲ್ಲಿ ಲೋಪ ಪತ್ತೆಯಾದಲ್ಲಿ ತಕ್ಷಣ ಪರಿಹರಿಸಲು ಪಾಲಿಕೆಯಲ್ಲಿ ಕಂಪ್ಯೂಟರಿಕೃತ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ನಮ್ಮ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 300 ಕೋಟಿ ರೂ. ಬಳಸಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.‌

ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯ 25ಕ್ಕೂ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡಿದ್ದು, 10-15 ಕೆರೆಗಳ ಅಭಿವೃದ್ಧಿ ಕೆಲಸ ಪೂರ್ತಿಯಾಗಿದೆ. 53 ಪಾರ್ಕುಗಳು ಅಭಿವೃದ್ಧಿ ಆಗುತ್ತಿದ್ದು, ಕೆಲವು ಹೊಸ ಉದ್ಯಾನವನಗಳು ತಲೆಎತ್ತಲಿವೆ.‌ ಇದೇ ಮೊದಲ ಬಾರಿಗೆ ನೀರಾವರಿ ಇಲಾಖೆಯಿಂದ 125 ಕೋಟಿ ರೂ. ಅನುದಾನ ಬಳಸಿ, ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ‌. 70 ಶೇಕಡಾ ತಡೆಗೋಡೆ ಕಾಮಗಾರಿ ಪೂರ್ತಿಯಾಗಿವೆ‌. 

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೂರು ಸರಕಾರಿ ಡಿಗ್ರಿ ಕಾಲೇಜುಗಳಿಗೆ ನ್ಯಾಕ್ ಎ ಸ್ಥಾನಮಾನ ಸಿಕ್ಕಿರುವುದು ಇಡೀ ರಾಜ್ಯದಲ್ಲಿ ವಿಶೇಷ. ನ್ಯಾಕ್ ಎ ಗ್ರೇಡ್ ಸಿಗಲು ಮಾನದಂಡಗಳನ್ನು ಪೂರೈಸಲು ಒಂದು ಕೋಟಿ ವೆಚ್ಚ ಮಾಡಿದ್ದು ಮುಂದಿನ ದಿನಗಳಲ್ಲಿ ಆ ಕಾಲೇಜುಗಳಿಗೆ 10 ರಿಂದ 15 ಕೋಟಿ ರೂ. ಅನುದಾನ ಕೇಂದ್ರ ಮತ್ತು ರಾಜ್ಯದಿಂದ ಬರುವ ವ್ಯವಸ್ಥೆ ಮಾಡಿದ್ದೇನೆ. ರಥಬೀದಿ ಡಿಗ್ರಿ ಕಾಲೇಜು, ಬಲ್ಮಠ ಡಿಗ್ರಿ ಕಾಲೇಜು, ವಿಶ್ವವಿದ್ಯಾನಿಲಯದ ಡಿಗ್ರಿ ಕಾಲೇಜು ಯೋಜನೆಯ ಲಾಭ ಪಡೆದಿವೆ. ಮಹಿಳಾ ಮತ್ತು ಪುರುಷರ ಐಟಿಐಗೆ ತಲಾ 36 ಕೋಟಿ, ಜರ್ಮನ್ ತಂತ್ರಜ್ಞಾನ ಅಳವಡಿಕೆಗೆ 21 ಕೋಟಿ ರೂ. ಅನುದಾನ ನೀಡಲಾಗಿದೆ.  

ವೆನ್ಲಾಕ್ ನಲ್ಲಿ 12 ಇದ್ದ ವೆಂಟಿಲೇಟರ್ ಸಂಖ್ಯೆ ಈಗ 165 ಆಗಿದೆ. 250 ಆಕ್ಸಿಜನ್ ಬೆಡ್, 50 ಕೋಟಿ ವೆಚ್ಚದಲ್ಲಿ ಸರ್ಜಿಕಲ್ ಬ್ಲಾಕ್, ಆಕ್ಸಿಜನ್ ಪ್ಲಾಂಟ್, 30 ಕೋಟಿ ರೂ. ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆ ನವೀಕರಣ, ನಾಲ್ಕು ನಮ್ಮ ಕ್ಲಿನಿಕ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿಗಿಂತ ಮಂಗಳೂರು ಪಾಲಿಕೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಆದಾಯ ಕಡಿಮೆ ಇದೆ. ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.‌ ಸ್ವಯಂಘೋಷಿತ ಆಸ್ತಿ ತೆರಿಗೆ, ಇ- ಖಾತಾ ಆನ್ ಲೈನ್ ಮಾಡಿದ್ದು, ಮುಂದಿನ ದಿನಗಳಲ್ಲಿ ನೀರಿನ ಬಿಲ್ ಮತ್ತು ಇತರ ಕಾರ್ಯಗಳು ಪಾಲಿಕೆಯಲ್ಲಿ ಆನ್ ಲೈನ್ ಆಗಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಚುನಾವಣಾ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ರೂಪಾ ಡಿ. ಬಂಗೇರ, ಸುರೇಂದ್ರ ಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

MLA Vedavyas Kamath releases Development book of Mangalore City, Rs 4500 Crores grant sanctioned in tenure. The Book contains developement made in city in the last 5 years as MLA.