ಮೋದಿ, ಯೋಗಿ ಮಾದರಿ ಆಡಳಿತಕ್ಕಾಗಿ ಅರುಣ್ ಪುತ್ತಿಲ ಬೆಂಬಲಿಸಿ ; ಇಂಥ ಭರವಸೆ ಚುನಾವಣೆಗೆ ಸೀಮಿತ ಯಾಕೆ ? ಅಕ್ಷಯ ಗೋಖಲೆ ಪ್ರಶ್ನೆ

29-04-23 03:30 pm       Mangaluru Correspondent   ಕರಾವಳಿ

ಯೋಗಿ ಮಾದರಿ, ಗುಜರಾತ್ ಮಾದರಿ, ಯುಪಿ ಮಾದರಿ ತರುತ್ತೇವೆ ಅನ್ನುತ್ತಾರೆ. ಆದರೆ ನಾವು ಪುತ್ತೂರಿನಲ್ಲಿ ಈವರೆಗೂ ಈ ಮಾದರಿಯನ್ನು ನೋಡಿಲ್ಲ. ನಮಗೆ ಪುತ್ತೂರಿನಲ್ಲಿ ಬುಲ್ಡೋಜರ್ ನೋಡಬೇಕೆಂಬ ಆಸೆಯಿದೆ. ಆ ಆಸೆಯನ್ನು ಅರುಣ್ ಕುಮಾರ್ ಪುತ್ತಿಲರಿಂದ ಮಾತ್ರ ಈಡೇರಿಸಲು ಸಾಧ್ಯ..

ಪುತ್ತೂರು, ಎ.29: ಪ್ರತಿ ಚುನಾವಣೆ ಬಂದಾಗಲೂ ಮೋದಿ ಮಾದರಿ, ಯೋಗಿ ಮಾದರಿ ಬಗ್ಗೆ ಮಾತನಾಡುತ್ತಾರೆ. ನಾವು ಅಂಥ ಮಾದರಿ ಆಡಳಿತವನ್ನು ತರುತ್ತೇವೆ ಎನ್ನುತ್ತಾರೆ. ಆದರೆ ನಾವು ಈವರೆಗೂ ಆ ಮಾದರಿಯ ಆಡಳಿತ ನೋಡಿಲ್ಲ. ಅಂಥ ಮಾದರಿಗಳನ್ನು ನೋಡಬೇಕಿದ್ದರೆ ಅರುಣ್ ಕುಮಾರ್ ಪುತ್ತಿಲ ಶಾಸಕರಾಗಿ ಬರಬೇಕು ಎಂದು ಧಾರ್ಮಿಕ ಭಾಷಣಗಾರ್ತಿ ಅಕ್ಷಯ ಗೋಖಲೆ ಹೇಳಿದ್ದಾರೆ.

 

ಪುತ್ತೂರಿನ ಸುಭದ್ರಾ ಸಭಾಭವನದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ನಡೆದ 'ಸೀತಾ ಪರಿವಾರ' ಎನ್ನುವ ಮಹಿಳಾ ಸಮಾವೇಶ ಉದ್ಧೇಶಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆ ವರೆಗೆ ಎಲ್ಲರೂ ನಾವು ಮೋದಿ ಮಾದರಿ, ಯೋಗಿ ಮಾದರಿ, ಗುಜರಾತ್ ಮಾದರಿ, ಯುಪಿ ಮಾದರಿ ತರುತ್ತೇವೆ ಅನ್ನುತ್ತಾರೆ. ಆದರೆ ನಾವು ಪುತ್ತೂರಿನಲ್ಲಿ ಈವರೆಗೂ ಈ ಮಾದರಿಯನ್ನು ನೋಡಿಲ್ಲ. ನಮಗೆ ಪುತ್ತೂರಿನಲ್ಲಿ ಬುಲ್ಡೋಜರ್ ನೋಡಬೇಕೆಂಬ ಆಸೆಯಿದೆ. ಆ ಆಸೆಯನ್ನು ಅರುಣ್ ಕುಮಾರ್ ಪುತ್ತಿಲರಿಂದ ಮಾತ್ರ ಈಡೇರಿಸಲು ಸಾಧ್ಯ ಎಂದು ಅವರು ಹೇಳಿದರು.

ಪುತ್ತೂರಿಗೆ ಪುತ್ತಿಲ ಎನ್ನುವ ಹೆಸರು ಅಚ್ಚೊತ್ತಿ ಆಗಿದೆ. ಅದಕ್ಕಾಗಿ ಮೇ 10ರ ವರೆಗಿನ ದಿನವನ್ನು ಪುತ್ತೂರಿನ ಜನ ಕಾಯುತ್ತಿದ್ದಾರೆ. ಕೇಸರಿ ಶಾಲು ಹಾಕಿದ ಸಾಮಾನ್ಯ ಕಾರ್ಯಕರ್ತನಂತೆ ಇರುವ ಅರುಣ್ ಪುತ್ತಿಲ, ಪುತ್ತೂರಿನಲ್ಲಿ ಅರುಣೋದಯ ಆಗಬೇಕಾಗಿದೆ. ಒಬ್ಬಳು ಹೆಣ್ಣು ಮನಸ್ಸು ಮಾಡಿದರೆ, ಇದು ಅಸಾಧ್ಯದ ಮಾತಲ್ಲ. ಒಬ್ಬಳು ಹೆಣ್ಣು ಮನಸ್ಸು ಮಾಡಿದರೆ, ಸಮಾಜವನ್ನು ಬದಲಿಸಬಹುದು ಅಂತಾಗಿದ್ದರೆ, ಅರುಣೋದಯ ಸಾಧ್ಯವಾಗಲಾರದೇ ಎಂದು ಅಕ್ಷಯ ಗೋಖಲೆ ಪ್ರಶ್ನೆ ಮಾಡಿದರು.

ಪ್ರತಿ ಚುನಾವಣೆಯಲ್ಲೂ ಮೋದಿ, ಯೋಗಿ ಮಾದರಿ ಕೇಳುತ್ತೇವೆ, ಆದರೆ ನಾವು ಯಾವತ್ತೂ ಈ ಮಾದರಿ ಆಡಳಿತವನ್ನು ನಮ್ಮೂರಿನಲ್ಲಿ ನೋಡಿಲ್ಲ. ನಾವು ಪುತ್ತಿಲರನ್ನು ಬೆಂಬಲಿಸಿದರೆ, ಗುಜರಾತ್, ಯುಪಿ ಮಾಡೆಲ್ ನೋಡಬಹುದು. ಅಂಥ ವಿಶ್ವಾಸ ನನಗಿದೆ. ಭ್ರಷ್ಟಾಚಾರ ರಹಿತ ಆಡಳಿತ, ನಾನು ಒಬ್ಬ ಹಿಂದು ಎಂದು ಎದೆತಟ್ಟಿ ಹೇಳಿಕೊಳ್ಳುವ ಶಕ್ತಿ ಬರುವುದು, ಇದರ ಜೊತೆಗೆ ಅಭಿವೃದ್ಧಿ ಯೋಗಿ ಮಾದರಿ ಆಡಳಿತ. ಇದಕ್ಕಾಗಿ ಕಾರ್ಯಕರ್ತರು ಜಾಗೃತರಾಗಿದ್ದಾರೆ. ಪುತ್ತೂರಿನ ಮೂಲಕ ಜಾಗೃತ ಹಿಂದು ಸಮಾಜ ಏನು ಅನ್ನುವುದನ್ನು ನಾವು ದೇಶಕ್ಕೆ ಸಾರಬೇಕಾಗಿದೆ.

ಪುತ್ತೂರಿನಲ್ಲಿ ಹಿಂದುತ್ವದ ಜಯಭೇರಿಯಾಗಲಿ

ರಾಮಾಯಣದಲ್ಲಿ ಹನುಮಂತನೂ ತಾನೊಬ್ಬ ಸಾಮಾನ್ಯ ಎನ್ನುವಂತಿದ್ದ. ಇಲ್ಲಿ ಅರುಣ್ ಪುತ್ತಿಲರೂ ಹಾಗೆಯೇ. ಸಾಮಾನ್ಯ ಕಾರ್ಯಕರ್ತ ಎಂದೇ ಹೇಳಿಕೊಂಡಿದ್ದರು. ಆದರೆ ಸಾವಿರಾರು ಕಾರ್ಯಕರ್ತರು ಸೇರಿ ಅರುಣ್ ಪುತ್ತಿಲರನ್ನು ಜಾಗೃತಗೊಳಿಸಿದ್ದಾರೆ. ಹನುಮಂತನ ರೂಪದಲ್ಲಿಯೇ ಪುತ್ತಿಲ ನಮಗೆ ಬಂದಿದ್ದಾರೆ. ಪುತ್ತೂರಿನಲ್ಲಿ ಎಲ್ಲ ಹೆಣ್ಣು ಮಕ್ಕಳು ಕೂಡ ಅರುಣ್ ನನ್ನ ಮಗ, ನನ್ನ ತಮ್ಮ, ನನ್ನ ಅಣ್ಣ ಎನ್ನುವ ಅನ್ನುವ ನಿರ್ಧಾರಕ್ಕೆ ಬರಬೇಕಾಗಿದೆ. ಹಾಗಾದಲ್ಲಿ ಪುತ್ತೂರಿನಲ್ಲಿ ಅರುಣ ಧ್ವಜ ಹಾರಾಡೋದು ಶತಸ್ಸಿದ್ಧ. ಇಲ್ಲಿ ಅರುಣ ಪುತ್ತಿಲ ಗೆಲುವು ಕೇವಲ ಬ್ಯಾಟ್ ಚಿಹ್ನೆಯ ಜಯವಲ್ಲ. ಅದು ಹಿಂದುತ್ವದ ಜಯ. ಪುತ್ತೂರಿನಲ್ಲಿ ವಿಜಯ ಧ್ವಜ ಹಾರಿಸುವುದೇ ಸೀತಾ ಪರಿವಾರದ ಉದ್ದೇಶ ನಮ್ಮದು ಎಂದರು ಅಕ್ಷಯಾ ಗೋಖಲೆ.

ನಾವು ಕುರಿ ಮಂದೆಗಳಲ್ಲ, ನೆನಪಿರಲಿ

ವಿವೇಕಾನಂದರು ಹೇಳಿದ್ದಾರೆ, ಭಾರತೀಯರಾದ ನಾವು ಕುರಿ ಮಂದೆಗಳಲ್ಲ. ಯಾರೋ ಹೆದರಿಸಿದರು ಅಂತ ಓಡಿ ಹೋಗುವ ಹೆದರು ಪುಕ್ಕಲರು ಅಲ್ಲ ಅನ್ನುವುದನ್ನು ಸಾರಿ ಹೇಳಬೇಕಾಗಿದೆ. ಪುತ್ತೂರಿನಲ್ಲಿ ನಮ್ಮತನವನ್ನು ಕಸಿಯುವಂತಹ, ಅಸಹಾಯಕ ರೀತಿಯಲ್ಲಿ ತಾಯಂದಿರು ಮಧ್ಯರಾತ್ರಿ ಇನ್ನೊಬ್ಬರಿಗೆ ಕರೆ ಮಾಡುವ ಸ್ಥಿತಿಯಿದೆ. ಇಂಥ ಅಸಹಾಯಕ ಸ್ಥಿತಿಯನ್ನು ಹೊಡೆದೋಡಿಸಲು ಅರುಣ್ ಪುತ್ತಿಲರೇ ನಮಗೆ ಬೇಕು. ಪುತ್ತೂರಿಗೆ ಮೋದಿ, ಯೋಗಿ ರೂಪದಲ್ಲಿ ನಮಗೆ ಅರುಣ ಪುತ್ತಿಲರನ್ನು ಮಹಾಲಿಂಗೇಶ್ವರನೇ ನೀಡಿದ್ದಾರೆ. ಬಾಯಲ್ಲಿ ಮಾತ್ರ ಯೋಗಿ ಮಾದರಿಯಲ್ಲ, ಪ್ರಾಯೋಗಿಕವಾಗಿ ಯೋಗಿ ಮಾದರಿ ಎನ್ನುವುದನ್ನು ತೋರಿಸಬಲ್ಲವರು ಅರುಣ ಪುತ್ತಿಲ. ಅದಕ್ಕಾಗಿ ಪುತ್ತಿಲರನ್ನು ನಾವು ಗೆಲ್ಲಿಸಬೇಕಾಗಿದೆ ಎಂದು ಅಕ್ಷಯಾ ಗೋಖಲೆ ಹೇಳಿದರು

Puttur Akshaya Gokhale says for a bulldozer model like Yogi, Arun Puthila should win against the BJP and Congress. The BJP has gone into damage control mode after witnessing the support Arun Puthila has garnered.