ಅಜಯ್ ದೇವಗನ್ ಹಿಟ್ ಸಿನಿಮಾ ‘’ಗಂಗಾಜಲ್’’ ರಿಯಲ್ ಹೀರೋ ಮಂಗಳೂರಿನ ಅಜಯ್ ಕುಮಾರ್! ಟಾಟಾ ಸಂಸ್ಥೆಯನ್ನು ರಕ್ಷಿಸಿದ್ದ ಐಪಿಎಸ್ ಐಧಿಕಾರಿಯೀಗ ಹುಟ್ಟೂರಿನಲ್ಲೇ ಕಾಂಗ್ರೆಸ್ ವೀಕ್ಷಕ !!

30-04-23 10:20 pm       Giridhar Shetty, Mangaluru Correspondent   ಕರಾವಳಿ

ಜಾರ್ಖಂಡಿನಲ್ಲಿ ಅಜಯ್ ಕುಮಾರ್ ಹೆಸರು ಜನಜನಿತ. ಯಾಕಂದ್ರೆ, ಅಜಯ್ ಕುಮಾರ್ ಅಲ್ಲಿ ಐಪಿಎಸ್ ಅಧಿಕಾರಿಯಾಗಿದ್ದರು. ಇಂಥ ಮೇರು ಸಾಧನೆಯ ವ್ಯಕ್ತಿಯೀಗ ಮಂಗಳೂರಿನಲ್ಲಿದ್ದಾರೆ. ಅಷ್ಟೇ ಅಲ್ಲ, ತಾನೊಬ್ಬ ಮಂಗಳೂರು ಮೂಲದ ವ್ಯಕ್ತಿ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಮಂಗಳೂರು, ಎ.30: ಒಂದು ಕಾಲದಲ್ಲಿ ಬಿಹಾರದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿ ಮೆರೆದಾಡಿದ್ದ ಐಪಿಎಸ್ ಅಧಿಕಾರಿ, ಜಮ್ಶೆಡ್ ಪುರದಲ್ಲಿ ಕೋಮು ದಳ್ಳುರಿ, ಮಾಫಿಯಾಗಳ ಹಿಡಿತದಿಂದಾಗಿ ಟಾಟಾ ಸಂಸ್ಥೆಯೇ ನಲುಗಿ ಹೋಗಿದ್ದ ಸಂದರ್ಭದಲ್ಲಿ ಒಂದೇ ತಿಂಗಳಲ್ಲಿ ಕೋಮು ಹಿಂಸೆಯ ಸ್ಥಿತಿಯನ್ನು ಹತೋಟಿಗೆ ತಂದಿದ್ದ ಅಧಿಕಾರಿ, ಕೇವಲ ಒಂಬತ್ತೇ ವರ್ಷ ಐಪಿಎಸ್ ಅಧಿಕಾರಿಯಾಗಿದ್ದರೂ, ನಿಷ್ಠುರ ನಡೆ, ದಕ್ಷತೆಯಿಂದಾಗಿ ಇಡೀ ಬಿಹಾರದಲ್ಲಿ ಮನೆಮಾತಾಗಿದ್ದ ಅಧಿಕಾರಿ. ಅಷ್ಟೇ ಅಲ್ಲ, ತನ್ನ ಜೀವನ ಸಾಧನೆಯೇ ಅಜಯ್ ದೇವಗನ್ ನಟನೆಯ ‘ಗಂಗಾಜಲ್’ ಅನ್ನುವ ಹಿಟ್ ಸಿನಿಮಾಕ್ಕೆ ಪ್ರೇರಣೆಯಾಗಿತ್ತು. ಹೌದು.. ಇಂಥ ಅಧಿಕಾರಿಯಾಗಿದ್ದವರು ಬೇರೆ ಯಾರೂ ಅಲ್ಲ, ಅದು ಡಾ. ಅಜಯ್ ಕುಮಾರ್.

ಈ ಹೆಸರನ್ನು ದಕ್ಷಿಣ ಭಾರತೀಯರು ಹೆಚ್ಚಾಗಿ ಕೇಳಿರಲಿಕ್ಕಿಲ್ಲ. ಆದರೆ ಬಿಹಾರ, ಜಾರ್ಖಂಡಿನಲ್ಲಿ ಅಜಯ್ ಕುಮಾರ್ ಹೆಸರು ಜನಜನಿತ. ಯಾಕಂದ್ರೆ, ಅಜಯ್ ಕುಮಾರ್ ಅಲ್ಲಿ ಐಪಿಎಸ್ ಅಧಿಕಾರಿಯಾಗಿದ್ದರು. ಇಂಥ ಮೇರು ಸಾಧನೆಯ ವ್ಯಕ್ತಿಯೀಗ ಮಂಗಳೂರಿನಲ್ಲಿದ್ದಾರೆ. ಅಷ್ಟೇ ಅಲ್ಲ, ತಾನೊಬ್ಬ ಮಂಗಳೂರು ಮೂಲದ ವ್ಯಕ್ತಿ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಸುಪೀರಿಯರ್ ಟೀಮ್ ಆಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿಯ ಸದಸ್ಯ, ರಾಷ್ಟ್ರೀಯ ವಕ್ತಾರನಾಗಿರುವ ಡಾ.ಅಜಯ್ ಕುಮಾರ್ ಮೂಲತಃ ಮಂಗಳೂರಿನವರು ಎಂದರೆ ಯಾರೂ ನಂಬಲಿಕ್ಕಿಲ್ಲ.

ಅಜಯ ಕುಮಾರ್ ಅವರ ತಂದೆ ದಿ. ಕೆ.ಎಸ್ ಭಂಡಾರಿ ಮಂಗಳೂರಿನ ಕವತ್ತಾರು ಮೂಲದವರು. ಐಎಫ್ಎಸ್ ಅಧಿಕಾರಿಯಾಗಿದ್ದ ಭಂಡಾರಿ ಜಗತ್ತು ಸುತ್ತಿದ್ದೇ ಹೆಚ್ಚು. ಕೊನೆಯ ಬಾರಿಗೆ ಜೋರ್ಡಾನಲ್ಲಿದ್ದು ನಿವೃತ್ತಿಯಾಗಿದ್ದರು. ಇವರ ಪತ್ನಿ ವತ್ಸಲಾ ಮಂಗಳೂರಿನ ಮರೋಳಿಯವರು. ಅಜಯ್ ಕುಮಾರ್ ಮಂಗಳೂರಿನಲ್ಲೇ ಹುಟ್ಟಿದ್ದರೂ, ಬೆಳೆದಿದ್ದು ತಂದೆ- ತಾಯಿ ಜೊತೆಗೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಜಪಾನ್, ಮಾಸ್ಕೋದಲ್ಲಿ ಮಾಡಿದ್ದ ಅಜಯ್ ಕುಮಾರ್ ಪಾಂಡಿಚೇರಿಯಲ್ಲಿ ಎಂಬಿಬಿಎಸ್ ಪೂರೈಸಿದ್ದರು. ಇವರೆಂದೂ ಐಪಿಎಸ್ ಅಧಿಕಾರಿಯಾಗಬೇಕೆಂಬ ಇಚ್ಚೆ ಹೊಂದಿರಲಿಲ್ಲ. ಆರ್ಥೋಪೆಡಿಕ್ ಸರ್ಜನ್ ಆಗಬೇಕೆಂದಿದ್ದ ಅಜಯ ಕುಮಾರ್ ತಮ್ಮ 23ರ ವಯಸ್ಸಿನಲ್ಲಿ ತಂದೆಯ ಸಲಹೆಯಂತೆ ಯುಪಿಎಸ್ಸಿ ಎಕ್ಸಾಂ ಬರೆದಿದ್ದರು. ತಂದೆ ವಿದೇಶ ಸೇವೆಗೆ ಸೇರಬೇಕೆಂದು ಹೇಳಿದ್ದರೂ, ಅಚಾನಕ್ಕಾಗಿ ಇವರು ಸೇರಿದ್ದು ಪೊಲೀಸ್ ಸೇವೆಗೆ.

ಬಿಹಾರ ಕೇಡರ್ ಸೇವೆಯನ್ನು ಆಯ್ದುಕೊಂಡ ಅಜಯ್ ಕುಮಾರ್ ಮೊದಲಿಗೆ ಪಾಟ್ನಾದಲ್ಲಿ ಎಎಸ್ಪಿ ಆಗಿ ಪ್ರೊಬೇಶನರಿ ಮಾಡಿದ್ದರು. ಆನಂತರ, ನಾಲ್ಕು ವರ್ಷದಲ್ಲಿ ಪಾಟ್ನಾ ನಗರದ ಎಸ್ಪಿ ಆಗಿ ಭಡ್ತಿ ಪಡೆದಿದ್ದರು. ಇಂಥ ಸಂದರ್ಭದಲ್ಲಿಯೇ ಜಮ್ಶೆಡ್ ಪುರದಲ್ಲಿ ಕೋಮು ದಳ್ಳುರಿ, ಮಾಫಿಯಾ ರುದ್ರನರ್ತನ ನಡೆದಿತ್ತು. ಟಾಟಾ ಕಂಪನಿಯ ಪ್ರಧಾನ ಕಚೇರಿ ಅಲ್ಲಿಯೇ ಇದ್ದುದರಿಂದ ಹಿಂಸೆ ಟಾಟಾ ಕಂಪನಿ ವಿರುದ್ಧ ತಿರುಗಿತ್ತು. ಕಂಪನಿಯ ಮುಖ್ಯ ಮ್ಯಾನೇಜರ್ ಒಬ್ಬರು ಕೋಮು ದಳ್ಳುರಿಗೆ ಬಲಿಯಾಗಿದ್ದರು. ಆಗ ರತನ್ ಟಾಟಾ ಅವರು ನೇರವಾಗಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಲಾಲೂ ಯಾದವ್ ಅವರನ್ನು ಭೇಟಿಯಾಗುತ್ತಾರೆ. ಮಾಫಿಯಾಗಳ ಜೊತೆಗೆ ಮಾತುಕತೆ ನಡೆಸಿ, ನನ್ನ ಕಂಪನಿಯನ್ನು ಉಳಿಸಿಕೊಡಿ ಎಂದು ಅಂಗಲಾಚುತ್ತಾರೆ. ಲಾಲೂ ಅದೇ ದಿನ ರಾತ್ರಿಯಲ್ಲಿ ಡಾ.ಅಜಯ್ ಕುಮಾರ್ ಅವರನ್ನು ಜಮ್ಶೆಡ್ ಪುರಕ್ಕೆ ಪೋಸ್ಟ್ ಮಾಡಿದ್ದರು. ಟಾಟಾ ಅವರಿಗೆ ದಕ್ಷ ಅಧಿಕಾರಿಯನ್ನು ಕಳಿಸಿಕೊಟ್ಟಿದ್ದೇನೆ, ಚಿಂತೆ ಬಿಟ್ಟುಬಿಡಿ ಎಂದು ಲಾಲೂ ಫೋನಾಯಿಸಿದ್ದರು.

ಕೋಮು ಹಿಂಸೆಯ ಹುಟ್ಟಡಗಿಸಿದ್ದ ಅಧಿಕಾರಿ

ಅಜಯ್ ಕುಮಾರ್ ನಗರಕ್ಕೆ ಬಂದವರೇ ಎಲ್ಲ ಠಾಣೆಯ ಪೊಲೀಸ್ ಅಧಿಕಾರಿಗಳನ್ನೂ ಕರೆದು ಮೀಟಿಂಗ್ ನಡೆಸಿದರು. ಯಾವುದೇ ಕಾರಣಕ್ಕೂ ನಿಮ್ಮನ್ನು ವಿನಾಕಾರಣ ವರ್ಗ ಆಗದಂತೆ ನೋಡಿಕೊಳ್ಳುತ್ತೇನೆ. ನಗರದಲ್ಲಿ ಪೊಲೀಸಿಂಗ್ ಅಂದರೇನು ಅನ್ನೋದನ್ನು ತೋರಿಸಿಕೊಡಬೇಕು. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಎಸ್ಐ, ಇನ್ಸ್ ಪೆಕ್ಟರ್ ಗಳನ್ನು ಕರೆದು ಆಸ್ಥೆ ತೋರಿದ್ದರು. ಕೆಲಸ ವಹಿಸಿಕೊಂಡ ಹೊತ್ತಲ್ಲಿ ನಗರದಲ್ಲಿ ಸಂಜೆ 6 ಗಂಟೆಯಾಗುತ್ತಿದ್ದಂತೆ ಜನರು ಭಯ ಬೀಳುತ್ತಿದ್ದರು. ಹೊರಗೆ ಬಂದರೆ ಎಲ್ಲಿ ಹೆಣ ಬೀಳುತ್ತೋ ಅನ್ನುವ ಭಯದಲ್ಲಿ ಜನರು ಹೊರಗೆ ಬರುತ್ತಲೇ ಇರಲಿಲ್ಲ. ಅಜಯ್ ಕುಮಾರ್ ಆವತ್ತೇ, ಪೊಲೀಸರಿಗೆ ಟಾಸ್ಕ್ ಕೊಟ್ಟಿದ್ದರು. ಇನ್ನೊಂದು ತಿಂಗಳಲ್ಲಿ ಇದೇ ನಗರದಲ್ಲಿ ರಾತ್ರಿ ಎರಡು ಗಂಟೆಗೆ ಜನರು ಐಸ್ ಕ್ರೀಮ್ ತಿನ್ನುವುದನ್ನು ನಾನು ನೋಡಬೇಕು ಎಂದಿದ್ದರು.

ಪೊಲೀಸಿಂಗ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಚಾಲ್ತಿಗೆ ತಂದರು ಅಂದರೆ, ಟಾಟಾ ಕಂಪನಿಯವರು ಊಹಿಸುವುದಕ್ಕೂ ಆಗದಂತೆ ನಗರ ಶಾಂತವಾಗಿತ್ತು. ಒಂದೇ ತಿಂಗಳಲ್ಲಿ ರಾತ್ರಿ ಹೊತ್ತಿಗೆ ಜನರು ಭಯ ಇಲ್ಲದೆ ಅಡ್ಡಾಡುವುದನ್ನು ಕಾಣುವಂತಾಗಿತ್ತು. ತಿಂಗಳ ಅಂತರದಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಅಜಯ ಕುಮಾರ್ ಜೈಲಿಗೆ ತಳ್ಳಿದ್ದರು. ಕಮಕ್ ಕಿಮಕ್ ಅಂದವರನ್ನು ಸದ್ದಿಲ್ಲದೆ ಒಳಗೆ ತಳ್ಳಿದ್ದು ಜನರು ಅಜಯ್ ಕುಮಾರ್ ಮೇಲೆ ವಿಶ್ವಾಸ ಇಡುವಂತಾಗಿತ್ತು. 1994ರ ಹೊತ್ತಿಗೆ ನಡೆದಿದ್ದ ಈ ಘಟನೆಯನ್ನು ಈಗಲೂ ಅಲ್ಲಿನ ಜನರು ನೆನಪಿಸುತ್ತಾರೆ. ಅಷ್ಟೇ ಅಲ್ಲ, ಇವರ ರಫ್ ಅಂಡ್ ಟಫ್ ವ್ಯಕ್ತಿತ್ವ, ಆಗಿನ ಕಾಲದಲ್ಲಿ ದೇಶದ ದೊಡ್ಡ ಮನುಷ್ಯರಾಗಿದ್ದ ಟಾಟಾ ಅವರನ್ನು ಆಕರ್ಷಿಸಿದ್ದು ಸಿನಿಮಾ ಕತೆಯೂ ಆಗಿತ್ತು. ಅಜಯ್ ದೇವಗನ್ ನಟನೆಯ ಗಂಗಾಜಲ್ ಸಿನಿಮಾ 20 ವರ್ಷಗಳ ಹಿಂದೆ ಸದ್ದು ಮಾಡಿದ್ದರೆ, ಅದರ ರಿಯಲ್ ಹೀರೋ ಅಜಯ್ ಕುಮಾರ್ ಅವರೇ ಆಗಿದ್ದರು.

ಕಾಲು ನೋವು, ಐಪಿಎಸ್ ಆಗಿಸಿದ್ದ ಪ್ರೀತಿ !  

ಅಜಯ್ ಕುಮಾರ್ 1985ರಲ್ಲಿ ಟ್ರೈನಿಂಗ್ ಸಮಯದಲ್ಲಿದ್ದಾಗ ಇಂಡೋ – ಟಿಬೆಟ್ ಗಡಿಯ ಮುಸ್ಸೋರಿಗೆ ಟ್ರಕ್ಕಿಂಗ್ ಹೋಗಿದ್ದರು. ತಂಡದಲ್ಲಿದ್ದ ರೀನಾ ಆರ್ಯ ಎಂಬ ಉತ್ತರ ಪ್ರದೇಶದ ಆಲಿಗಢ್ ಮೂಲದ ಹುಡುಗಿಗೆ ಕಾಲು ನೋವು ಕಾಣಿಸಿಕೊಂಡಿತ್ತು. ಪರ್ವತಗಳ ನಡುವೆ ಟ್ರಕ್ಕಿಂಗ್ ಆಗಿದ್ದರಿಂದ ಆಕೆಯನ್ನು ಬಿಟ್ಟು ಹೋಗುವಂತೆಯೂ ಇರಲಿಲ್ಲ. ಈ ವೇಳೆ, ವೈದ್ಯಕೀಯ ಕಲಿತಿದ್ದ ಅಜಯ್ ಕುಮಾರ್, ರೀನಾಗೆ ಆಸರೆಯಾಗಿದ್ದರು. ಹುಡುಗಿ ಕಾಲಿನ ಮಂಡಿಯಲ್ಲಿ ನೀರು ಶೇಖರಗೊಂಡಿದ್ದನ್ನು ಕಂಡುಕೊಂಡ ಅಜಯ್ ಕುಮಾರ್, ತಾನು ಕಲಿತಿದ್ದ ಆರ್ಥೋ ಚಿಕಿತ್ಸೆಯನ್ನು ಆಕೆಯ ಮೇಲೆ ಪ್ರಯೋಗಿಸಿದ್ದರು. ಅಂದು ಅರ್ಧಕ್ಕೆ ಹಿಂತಿರುಗಬೇಕಿದ್ದ ಆಕೆಯನ್ನು ಟ್ರಕ್ಕಿಂಗ್ ಮುಗಿಸುವಂತೆ ಮಾಡಿದ್ದು ಅಜಯ್ ಕುಮಾರ್. ಈ ರೀತಿ ಬೆಳೆದ ಇವರ ನಂಟು ನಿಧಾನಕ್ಕೆ ಅವರನ್ನು ಪ್ರೇಮಿಗಳನ್ನಾಗಿಸಿತ್ತು. ಈ ನಡುವೆ, ಐಎಫ್ಎಸ್ ಅಥವಾ ಐಪಿಎಸ್ ನಡುವೆ ಆಯ್ಕೆ ಬಂದಾಗ, ಪೊಲೀಸ್ ಅಧಿಕಾರಿಯಾಗಲು ಪ್ರೇರಣೆ ನೀಡಿದ್ದು ರೀನಾ ಆರ್ಯ ಎಂಬುದನ್ನು ಸಂದರ್ಶನ ಒಂದರಲ್ಲಿ ಅಜಯ್ ಕುಮಾರ್ ಸ್ಮರಿಸಿದ್ದಾರೆ. ಯಾಕಂದ್ರೆ, ರೀನಾ ಆರ್ಯ ಮಾವನೂ ಐಪಿಎಸ್ ಅಧಿಕಾರಿಯಾಗಿದ್ದು ಅದಕ್ಕೂ ಮೊದಲೇ ಉಗ್ರರಿಂದ ಹತರಾಗಿದ್ದರು. ಹೈದ್ರಾಬಾದ್ ಐಪಿಎಸ್ ಅಕಾಡೆಮಿಯಲ್ಲಿ ಅವರ ಮೂರ್ತಿ ಸ್ಥಾಪನೆ ಮಾಡಲಾಗಿತ್ತು.

ಆನಂತರ, ರೀನಾ ಆರ್ಯ ಐಎಎಸ್ ತೇರ್ಗಡೆಯಾಗಿ ಭಾರತ ಸರಕಾರದ ಐಟಿ ಇಲಾಖೆಯಲ್ಲಿ ಅಧಿಕಾರಿಯಾದರೆ, ಅಜಯ್ ಕುಮಾರ್ ಪೊಲೀಸ್ ಸೇವೆಗೆ ಸೇರಿದ್ದರು. ಅದೃಷ್ಟ ಅಂದರೆ, ಇವರಿಬ್ಬರು ಕೂಡ ಪ್ರೊಬೇಶನರಿ ಅವಧಿಯನ್ನು ಪಾಟ್ನಾದಲ್ಲಿಯೇ ಪೂರೈಸಿದ್ದರು. ಅಜಯ್ ಕುಮಾರ್ ದಾನಾಪುರದಲ್ಲಿ ಎಎಸ್ಪಿ ಪ್ರೊಬೇಷನರಿಯಲ್ಲಿದ್ದಾಗಲೇ ಪೊಲೀಸ್ ಮೆಡಲ್ ಪಡೆದಿದ್ದರು. ಆನಂತರ, ರಾಜ್ ಪುರ್ ನಲ್ಲಿ ಎಎಸ್ಪಿಯಾಗಿದ್ದಾಗ ಅಲ್ಲಿ ಕರೆಂಟೂ ಇರಲಿಲ್ಲ. ನೀರೂ ಇರಲಿಲ್ಲ. ಬಾತ್ ರೂಮ್ ಕೂಡ ಇರಲಿಲ್ಲ. ಅಜಯ್ ಕುಮಾರ್ ಗೆ ಶೌಚಕ್ಕಾಗಿ ಬಯಲಿಗೆ ಹೋಗುವ ಸ್ಥಿತಿ ಎದುರಾಗಿತ್ತು. ಮಾಫಿಯಾ ಡಾನ್ ಗಳು ಕುದುರೆಯಲ್ಲಿ ಓಡಾಡುತ್ತಿದ್ದರೆ, ಪೊಲೀಸರು ನಿಕೃಷ್ಟ ಜೀವನ ನಡೆಸುವಂತಹ ಸ್ಥಿತಿ ಇತ್ತು. ಒಂದು ಹಂತದಲ್ಲಿ ಪೊಲೀಸರನ್ನೇ ಡಾನ್ ಗಳು ಸುತ್ತುವರಿದು ನಿಂತಾಗ, ಅಜಯ್ ಕುಮಾರ್ ಅಲ್ಲಿನ ಮಾಫಿಯಾ ಲೀಡರನ್ನೇ ಕೊಂದು ಹಾಕಿದ್ದು ಆಗಿನ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು.  

ನಿವೃತ್ತಿ ಬಳಿಕ ಕರೆದುಕೊಂಡಿತ್ತು ಟಾಟಾ ಸಂಸ್ಥೆ

1988ರಲ್ಲಿ ಅಜಯ್ - ರೀನಾ ಮದುವೆಯಾಗಿದ್ದು, ತಮ್ಮ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಇಬ್ಬರು ಕೂಡ ಮಾದರಿ ಅನ್ನುವಂತಹ ಸಾಧನೆ ಮಾಡಿದ್ದಾರೆ. ಅಜಯ್ ಕುಮಾರ್ ಕೇವಲ 9 ವರ್ಷಗಳ ಸೇವೆಯ ಬಳಿಕ 1996ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರೆ, ರೀನಾ ಆರ್ಯ ಇತ್ತೀಚೆಗೆ ನಿವೃತ್ತಿ ಆಗುವ ಹೊತ್ತಿಗೆ ದೆಹಲಿಯಲ್ಲಿ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ವಿಭಾಗದಲ್ಲಿ ಎಡಿಶನಲ್ ಡೈರೆಕ್ಟರ್ ಜನರಲ್ ಆಗಿದ್ದರು. ಜಿಎಸ್ಟಿ ಇನ್ನಿತರ ನೀತಿ ನಿರೂಪಣೆಯ ಹಿಂದೆ ಇವರದ್ದೂ ಬುದ್ಧಿಮತ್ತೆ ಅಡಗಿದೆಯಂತೆ. 96ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ಅಜಯ್ ಕುಮಾರ್ ಅವರನ್ನು ಟಾಟಾ ಸಂಸ್ಥೆಯವರು ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿ ನೇಮಿಸಿಕೊಂಡಿದ್ದರು. ಸುದೀರ್ಘ ಕಾಲ ಟಾಟಾ ಸಂಸ್ಥೆಯಲ್ಲಿದ್ದ ಅಜಯ್ ಕುಮಾರ್ ಬಳಿಕ ಅಲ್ಲಿಂದ ಹೊರಬಂದು ಸ್ವಂತ ಕಂಪನಿಯನ್ನು ಸ್ಥಾಪಿಸಿದ್ದರು. ಅಷ್ಟೇ ಅಲ್ಲ, ಜೆವಿಎಂ ಪಕ್ಷಕ್ಕೆ ಸೇರಿ 2014ರಲ್ಲಿ ಜಮ್ಶೆಡ್ ಪುರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಆ ಹೊತ್ತಿಗೆ ಜಮ್ಶೆಡ್ ಪುರ, ಬಿಹಾರದಿಂದ ಕಳಚಿಕೊಂಡು ಜಾರ್ಖಂಡ್ ರಾಜ್ಯಕ್ಕೆ ಸೇರಿತ್ತು. ಆನಂತರ, ಆಮ್ ಆದ್ಮಿ ಪಕ್ಷದತ್ತ ಆಕರ್ಷಿತರಾಗಿದ್ದರು. 2019ರಲ್ಲಿ ಕಾಂಗ್ರೆಸ್ ಸೇರಿದ್ದ ಅಜಯ್ ಕುಮಾರ್ ಎರಡೇ ವರ್ಷದಲ್ಲಿ ಪಕ್ಷದ ಹೈಕಮಾಂಡ್ ಮಟ್ಟಕ್ಕೆ ಏರಿದ್ದಾರೆ.

ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಸಿಡಬ್ಲ್ಯುಸಿ ಕಮಿಟಿಯನ್ನು ಹೊಸತಾಗಿ ಮಾಡಲಾಗಿತ್ತು. ಪಕ್ಷದ ಉನ್ನತ ಮಂಡಳಿಗೆ ಜಾರ್ಖಂಡಿನಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದರು ಅಜಯ್ ಕುಮಾರ್. ತನ್ನ ಹುಟ್ಟೂರು ಮಂಗಳೂರಿನ ನಂಟನ್ನು ಸಂಪೂರ್ಣ ಕಡಿದುಕೊಂಡಿದ್ದರೂ, ಪಕ್ಷದ ಹೈಕಮಾಂಡ್ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಗೆ ವೀಕ್ಷಕರಾಗಿ ಬಂದಿದ್ದಾರೆ. ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಒಬ್ಬರಾಗಿರುವ ಅಜಯ ಕುಮಾರ್ ಮಂಗಳೂರಿನಲ್ಲಿ ಎಂಎಲ್ಪಿ ಮಂಜುನಾಥ ಭಂಡಾರಿ ಜೊತೆಗೆ ಪಕ್ಷದ ಕೆಲಸದಲ್ಲಿ ವ್ಯಸ್ತರಾಗಿದ್ದಾರೆ. ತಂದೆ- ತಾಯಿ ತುಳುವರಾಗಿದ್ದರಿಂದ ಅಲ್ಪಸ್ವಲ್ಪ ಕನ್ನಡ, ತುಳು ಭಾಷೆಯನ್ನೂ ಕಲಿತುಕೊಂಡಿದ್ದಾರೆ. ದೊಡ್ಡ ಅಧಿಕಾರಿ, ಒಂದು ಕಾಲದ ರಿಯಲ್ ಹೀರೋ, ಸಿನಿಮಾ ಕತೆಯಾಗಿದ್ದ ಅಜಯ ಕುಮಾರ್ ಮಂಗಳೂರಿನಲ್ಲಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯರಂತೆ ಓಡಾಡುತ್ತಿದ್ದಾರೆ. ಅಂದಹಾಗೆ, ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ಭಂಡಾರಿ ಸಮಾಜಕ್ಕೆ ಸೇರಿದವರು ಅನ್ನುವುದು ಆ ಸಮಾಜಕ್ಕೆ ಮತ್ತು ನಮ್ಮ ಜಿಲ್ಲೆಗೊಂದು ಹೆಗ್ಗಳಿಕೆ.

Ajay Devgn Hindi movie Gangaajal connected to Mangalore Native IPS officer Amit Kumar who was a IPS who wroked at Bihar is now Congress Spectator his native Mangalore. A special Exclusive story by Headline Karnataka.