ಮಂಗಳೂರು ಬಿಜೆಪಿಗೆ ಬಿಗ್ ಶಾಕ್ ; ಮೋದಿಯನ್ನು ಮಂಗಳೂರಿಗೆ ಕರೆಸಿದ್ದ ಬಿಜೆಪಿ ಪಾಲಿನ ಸಿಪಾಯಿ ಸತೀಶ್ ಪ್ರಭು ಕಾಂಗ್ರೆಸಿಗೆ, ಬಿಜೆಪಿಯಿಂದ ಜನಹಿತ ಅಸಾಧ್ಯ ಎಂದ ಜಿಎಸ್ ಬಿ ಹಿರಿಯ !

07-05-23 09:56 pm       Mangalore Correspondent   ಕರಾವಳಿ

ಮಂಗಳೂರಿನ ಮಟ್ಟಿಗೆ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಸುದೀರ್ಘ ಕಾಲ ಆರೆಸ್ಸೆಸ್, ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊಂದಿದ್ದ ಸತೀಶ್ ಪ್ರಭು ಬಿಜೆಪಿ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ. ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸತೀಶ್ ಪ್ರಭು ಕಾಂಗ್ರೆಸ್ ಸೇರಿದ್ದಾರೆ.

ಮಂಗಳೂರು, ಮೇ 7: ಮಂಗಳೂರಿನ ಮಟ್ಟಿಗೆ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಸುದೀರ್ಘ ಕಾಲ ಆರೆಸ್ಸೆಸ್, ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊಂದಿದ್ದ ಸತೀಶ್ ಪ್ರಭು ಬಿಜೆಪಿ ತೊರೆದು ಕಾಂಗ್ರೆಸ್ ಕೈಹಿಡಿದಿದ್ದಾರೆ. ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸತೀಶ್ ಪ್ರಭು ಕಾಂಗ್ರೆಸ್ ಸೇರಿದ್ದಾರೆ.

ಇದೇ ವೇಳೆ ಮಾತನಾಡಿದ ಸತೀಶ್ ಪ್ರಭು, 32 ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಜನಹಿತ ಕೆಲಸಕ್ಕಾಗಿ ಭಾರತೀಯ ಜನತಾ ಪಾರ್ಟಿಯನ್ನು ಆಯ್ದುಕೊಂಡಿದ್ದೆನು. ಯಾವುದೇ ಅಧಿಕಾರಕ್ಕಾಗಿ ಪಕ್ಷದಲ್ಲಿ ಇದ್ದುದಲ್ಲ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಜನಹಿತ ಕಾರ್ಯ ಅಸಾಧ್ಯವೆಂದು ಮನಗಂಡಿದ್ದರಿಂದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ಪಕ್ಷವನ್ನು ದೂರಲು ಹೋಗುವುದಿಲ್ಲ. ಆದರೆ ಈಗಿನ ಬಿಜೆಪಿಯಲ್ಲಿ ಜನಹಿತ ಕೆಲಸ ಸಾಧ್ಯವಿಲ್ಲ ಎಂಬ ನಿಲುವಿನಿಂದ ಕಾಂಗ್ರೆಸ್ ಸೇರಿದ್ದೇನೆ, ಅಷ್ಟೇ ಎಂದು ಹೇಳಿದರು.

ಆರೆಸ್ಸೆಸ್, ಮೋದಿ ಕುರಿತ ಪ್ರಶ್ನೆಗೆ, ನಾನು ಶಾಲೆಗೆ ಹೋಗುವ ಮೊದಲೇ ಆರೆಸ್ಸೆಸ್ ಶಾಖೆಗೆ ಹೋದವನು. ಸಣ್ಣಂದಿನಿಂದಲೇ ಸ್ವಯಂಸೇವಕನಾಗಿದ್ದೆ ಎಂದು ಹೇಳಿದ ಅವರು, ಜನಹಿತ ಕೆಲಸ ಮಾಡುವ ವ್ಯಕ್ತಿಯ ಜೊತೆಗೆ ನಾನಿದ್ದೇನೆ. ಮೋದಿಯವರು ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾಗ ನಾನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನಮ್ಮ ಟೀಮ್ ಮೋದಿಯವರನ್ನು ಕರೆಸಿಕೊಂಡಿತ್ತು. ಜನಹಿತ ಮಾಡುವ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದರೂ ಅವರ ಪರವಾಗಿದ್ದೇನೆ. ಮೋದಿಯವರ ಬಗ್ಗೆ ನನ್ನ ತಕರಾರಿಲ್ಲ. ಅವರು ಕೊಟ್ಟ ಯೋಜನೆಗಳನ್ನು ಜನರಿಗೆ ತಲುಪಿಸಲು ಯೋಗ್ಯತೆ ಇರುವ, ಜನಪರ ಆಗಿರುವ ಮತ್ತು ಪ್ರಾಮಾಣಿಕ ವ್ಯಕ್ತಿ ಜನಪ್ರತಿನಿಧಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು. ನಾನು ಜಾತಿವಾದಿ ಅಲ್ಲ. ಆದರೆ ಈ ಜಿಲ್ಲೆಯಲ್ಲಿ ಜಿಎಸ್ ಬಿ ಸಮುದಾಯದ ವ್ಯಕ್ತಿಗಳು ಕಾಂಗ್ರೆಸ್ನಲ್ಲಿದ್ದು ಈ ಹಿಂದೆ ದೊಡ್ಡ ಸಾಧನೆ ಮಾಡಿದವರಿದ್ದಾರೆ. ಜನಹಿತ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದರು ಸತೀಶ್ ಪ್ರಭು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಮಂಗಳೂರು ದಕ್ಷಿಣ ಅಭ್ಯರ್ಥಿ ಜೆ.ಆರ್.ಲೋಬೊ, ಸಂತೋಷ್ ಶೆಟ್ಟಿ ಹೂಹಾರ ಹಾಕಿ ಸತೀಶ್ ಪ್ರಭು ಅವರನ್ನು ಸ್ವಾಗತಿಸಿದರು. 

ಬಿಜೆಪಿಯಲ್ಲಿ ಸೈಡ್ ಲೈನ್ ಆಗಿದ್ದ ಜಿಎಸ್ ಬಿ ಮುಖಂಡ

ಕಳೆದ ನಾಲ್ಕು ವರ್ಷಗಳಿಂದ ಸತೀಶ್ ಪ್ರಭು, ಮಂಗಳೂರಿನ ಬಿಜೆಪಿ ಬಗ್ಗೆ ಹೊಂದಿದ್ದರು. ಮಂಗಳೂರಿನ ಆರೆಸ್ಸೆಸ್ ಕಚೇರಿ ಸಂಘನಿಕೇತನ, ಅಲ್ಲಿನ ಗಣೇಶೋತ್ಸವದಲ್ಲಿ ಸಕ್ರಿಯವಾಗಿದ್ದ ಮತ್ತು ಗಣೇಶೋತ್ಸವ ಸಮಿತಿಯಲ್ಲಿ ಟ್ರಸ್ಟಿಯೂ ಆಗಿದ್ದ ಸತೀಶ್ ಪ್ರಭು ಅವರನ್ನು ಬಿಜೆಪಿಯಲ್ಲಿ ಬದಿಗೆ ಸರಿಸಲಾಗಿತ್ತು. ಒಂದು ವರ್ಷದ ಹಿಂದೆ ಜಿಎಸ್ ಬಿ ಸಮುದಾಯಕ್ಕೆ ಸೇರಿದ ರಥಬೀದಿಯ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಹುದ್ದೆಗಳಿಗೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಶಾಸಕರ ವಿರುದ್ಧ ಪಾಳಯದಲ್ಲಿ ನಿಂತು ಸತೀಶ್ ಪ್ರಭು ಜಯಿಸಿದ್ದು ಜಿಎಸ್ ಬಿ ನಾಯಕರು, ಸಮುದಾಯದ ಒಳಗೆ ಸಂಚಲನ ಸೃಷ್ಟಿಸಿತ್ತು. ಇದೀಗ ಚುನಾವಣೆ ಹೊತ್ತಲ್ಲಿ ಸತೀಶ್ ಪ್ರಭು ತನ್ನ ನಾಲ್ವರು ಬೆಂಬಲಿಗರೊಂದಿಗೆ ಪಕ್ಷವನ್ನೇ ಬಿಟ್ಟು ಕಾಂಗ್ರೆಸ್ ಸೇರಿದ್ದು, ಅದೇ ಸಮುದಾಯದ ಶಾಸಕ ವೇದವ್ಯಾಸ ಕಾಮತ್ ಅವರಿಗೆ ನಷ್ಟವಾಗುತ್ತಾ ಅನ್ನುವ ಕುತೂಹಲ ಉಂಟಾಗಿದೆ.

Mangalore RSS BJP member Sathish Prabhu trustee of Sri Venkataramana Temple joins Congress, shocks BJP. Sathish Prabhu plays major role in getting Modi to Mangalore.