ಸೋಮೇಶ್ವರ ರುದ್ರಪಾದೆಯಿಂದ ಜಾರಿ ಬಿದ್ದ ವಿದ್ಯಾರ್ಥಿನಿ ಸಮುದ್ರಪಾಲು ; ಬಾಲ್ಯ ಸ್ನೇಹಿತೆಯ ಎದುರೇ ಸಾವು! 

10-05-23 05:49 pm       Mangalore Correspondent   ಕರಾವಳಿ

ರಾಜ್ಯದೆಲ್ಲೆಡೆ ಚುನಾವಣೆ ನಡೆಯುತ್ತಿದ್ದ ವೇಳೆ ಸೋಮೇಶ್ವರ ರುದ್ರಪಾದೆಯಲ್ಲಿ ಹದಿಹರೆಯದ ಯುವತಿಯೋರ್ವಳು ತನ್ನ ಬಾಲ್ಯ ಸ್ನೇಹಿತೆಯೆದುರೇ ಆಯತಪ್ಪಿ ಜಾರಿ ಬಿದ್ದು ಸಮುದ್ರಪಾಲಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಉಳ್ಳಾಲ, ಮೇ 10 : ರಾಜ್ಯದೆಲ್ಲೆಡೆ ಚುನಾವಣೆ ನಡೆಯುತ್ತಿದ್ದ ವೇಳೆ ಸೋಮೇಶ್ವರ ರುದ್ರಪಾದೆಯಲ್ಲಿ ಹದಿಹರೆಯದ ಯುವತಿಯೋರ್ವಳು ತನ್ನ ಬಾಲ್ಯ ಸ್ನೇಹಿತೆಯೆದುರೇ ಆಯತಪ್ಪಿ ಜಾರಿ ಬಿದ್ದು ಸಮುದ್ರಪಾಲಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಲ್ಲಿ ಬಿಕಾಂ ಕಲಿಯುತ್ತಿರುವ ಮೂಲತಃ ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲೂಕು ತೆಗ್ಗಿ ಗ್ರಾಮದ ನಿವಾಸಿ ಕಾವೇರಿ(20) ಮೃತಪಟ್ಟ ಯುವತಿ. ಕಾವೇರಿ ನಿನ್ನೆ ಹುಟ್ಟುಹಬ್ಬ ಆಚರಿಸಿದ್ದು ಇಂದು ತನ್ನ ಬಾಲ್ಯ ಸ್ನೇಹಿತೆ ಕಾವೇರಿಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದಳು. ಸ್ನೇಹಿತೆಯರಿಬ್ಬರು ಸಮುದ್ರ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಾವೇರಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾಳೆ. 

ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕ ಸಿಬ್ಬಂದಿ ಮೋಹನ್ ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್ , ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ್ ಮತ್ತು ಸ್ಥಳೀಯರು ಸೇರಿ ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನ ದಡಕ್ಕೆ ಎಳೆ ತಂದರೂ ಅಷ್ಟರಲ್ಲಿ ಕಾವೇರಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕಾವೇರಿ ಪೋಷಕರು ಕೂಲಿ ಕೆಲಸಗಾರರಾಗಿದ್ದು ಮಂಗಳೂರಿನ ಉರ್ವಾ ಸ್ಟೋರಲ್ಲಿ ಕಳೆದ ಅನೇಕ ವರುಷಗಳಿಂದ ನೆಲೆಸಿದ್ದರು. ತಮ್ಮ ಏಕೈಕ ಮಗಳನ್ನ ಕಷ್ಟ ಪಟ್ಟು ಮಂಗಳೂರು ನಗರದ ಸ್ವಸ್ತಿಕ್ ಕಾಲೇಜಲ್ಲಿ ಬಿಕಾಂ ಓದಿಸುತ್ತಿದ್ದರು. ಪ್ರತಿಭಾನ್ವಿತೆಯಾಗಿದ್ದ ಕಾವೇರಿ ಬಿಕಾಂ ವ್ಯಾಸಂಗದ ಜೊತೆಗೆ ಸಿಎ ಕೂಡ ಅಧ್ಯಯನ ನಡೆಸುತ್ತಿದ್ದಳಂತೆ.
ಮೃತ ಕಾವೇರಿ ಜೊತೆ ಬಂದಿದ್ದ ಬಾಲ್ಯ ಸ್ನೇಹಿತೆಯೂ ಕೂಡ ಮಂಗಳೂರು ನಗರದ ಕಾಲೇಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಮೃತ ಕಾವೇರಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Mangalore 20 year old girl from Badami drowns at Someshwar Beach In Ullal. The deceased has been identified as Kaveri. She was pursing B.com at a Private college in the city.