ನಡುರಾತ್ರಿ ಹೆದ್ದಾರಿ ತಡೆಬೇಲಿಗೆ ಕಾರು ಡಿಕ್ಕಿ ; ಓಮ್ನಿಯಲ್ಲಿ ಸಿಲುಕಿದ್ದ ಮೂವರನ್ನ ಆಸ್ಪತ್ರೆಗೆ ಸಾಗಿಸಿದ ಟ್ರಾಫಿಕ್ ಸಿಬ್ಬಂದಿ, 85ರ ವೃದ್ಧೆ ಸಾವು 

21-05-23 10:12 am       Mangalore Correspondent   ಕರಾವಳಿ

ಹೆದ್ದಾರಿ ಬದಿಯ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಓಮ್ನಿ‌ ಕಾರು ಡಿಕ್ಕಿ ಹೊಡೆದ ಪರಿಣಾಮ 85ರ ವೃದ್ಧೆಯೋರ್ವರ ದೇಹ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಉಚ್ಚಿಲ ಎಂಬಲ್ಲಿ ನಸುಕಿನ ಜಾವ ಸಂಭವಿಸಿದೆ. 

ಉಳ್ಳಾಲ, ಮೇ 21 : ಹೆದ್ದಾರಿ ಬದಿಯ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಓಮ್ನಿ‌ ಕಾರು ಡಿಕ್ಕಿ ಹೊಡೆದ ಪರಿಣಾಮ 85ರ ವೃದ್ಧೆಯೋರ್ವರ ದೇಹ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಉಚ್ಚಿಲ ಎಂಬಲ್ಲಿ ನಸುಕಿನ ಜಾವ ಸಂಭವಿಸಿದೆ. 

ಕಾಸರಗೋಡು ಜಿಲ್ಲೆಯ ಮಂಜೇಶ್ವರ , ಕುಂಜತ್ತೂರು ನಿವಾಸಿ ಬಿ.ಫಾತಿಮಾ(85) ಮೃತಪಟ್ಟ ವೃದ್ಧೆ. ಫಾತಿಮಾ ಅವರು ತನ್ನ ಮಗ ಮೂಸ(50), ಮೊಮ್ಮಗ ಮಸ್ತಫಾ(24) ಜೊತೆ ನಿನ್ನೆ ಸಂಜೆ ಮಂಗಳೂರಿನ ಅಡ್ಡೂರಿಗೆ ತೆರಳಿ ಸಂಬಂಧಿಕರೋರ್ವರ ಶವಸಂಸ್ಕಾರದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಫಾತಿಮಾ ಓಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. 

ಘಟನೆಯನ್ನ ಕಂಡ ವಾಹನ ಸವಾರರೊಬ್ಬರು ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಟ್ರಾಫಿಕ್ ಪೊಲೀಸರಲ್ಲಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬ್ಬಂದಿಗಳಾದ ಮಹೇಶ್ ಆಚಾರ್ಯ ಮತ್ತು ವಿಠ್ಠಲ್ ದಾಸ್ ಅವರು ಕಬ್ಬಿಣದ ಸಲಾಕೆಯೆಡೆಯಲ್ಲಿ ಸಿಲುಕಿ ಛಿಧ್ರಗೊಂಡಿದ್ದ ಫಾತಿಮಾರನ್ನ ಹೊರಗೆಳೆದು ರಕ್ತದ ಮಡುವಲ್ಲಿದ್ದ ಮೂವರನ್ನ ತಮ್ಮ ಇಲಾಖಾ ವಾಹನದಲ್ಲಿ ತುಂಬಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ದೇಹ ಛಿದ್ರಗೊಂಡು ಗಂಭೀರ ಗಾಯಗೊಂಡಿದ್ದ ಫಾತಿಮಾ ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ದೇಹದ ಮಾಂಸ ಖಂಡಗಳು ಕಾರಿನಲ್ಲೇ ಉಳಿದಿವೆ. ಕಾರು ಚಲಾಯಿಸುತ್ತಿದ್ದ ಮುಸ್ತಾಫನ ಕಾಲು ಮುರಿದಿದೆ ಎನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Omni car accident at Uchila in Mangalore, 85 year old killed, three hospitalised. The three were shifited by Traffic police constable in the early morning.