Mangalore Police VS Court: ಪೋಕ್ಸೋ ಪ್ರಕರಣದಲ್ಲಿ ಮತ್ತೆ ಮಂಗಳೂರು ಪೊಲೀಸರ ಎಡವಟ್ಟು ; ತೋಟದ ಮಾಲೀಕನ ಬಿಟ್ಟು ಕಾರ್ಮಿಕರನ್ನು ಜೈಲಿಗಟ್ಟಿದ ಮೂವರು ಅಧಿಕಾರಿಗಳಿಗೆ 5 ಲಕ್ಷ ದಂಡ, ಕೋರ್ಟ್ ಛೀಮಾರಿ ! 

27-06-23 07:48 pm       Mangalore Correspondent   ಕರಾವಳಿ

ಪೋಕ್ಸೋ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮತ್ತೊಮ್ಮೆ ಎಡವಿದ್ದು ಕೋರ್ಟಿನಿಂದ ಛೀಮಾರಿ ಮತ್ತು ದಂಡಕ್ಕೆ ಒಳಗಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಪೋಕ್ಸೋ ಪ್ರಕರಣ ಒಂದರಲ್ಲಿ ನಿರಪರಾಧಿಯನ್ನು ಜೈಲಿಗೆ ಹಾಕಿದ್ದೀರಿ ಎಂದು ಮಹಿಳಾ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಮಂಗಳೂರಿನ ಕೋರ್ಟ್ ದಂಡ ವಿಧಿಸಿತ್ತು.

ಮಂಗಳೂರು, ಜೂನ್ 27: ಪೋಕ್ಸೋ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮತ್ತೊಮ್ಮೆ ಎಡವಿದ್ದು ಕೋರ್ಟಿನಿಂದ ಛೀಮಾರಿ ಮತ್ತು ದಂಡಕ್ಕೆ ಒಳಗಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಪೋಕ್ಸೋ ಪ್ರಕರಣ ಒಂದರಲ್ಲಿ ನಿರಪರಾಧಿಯನ್ನು ಜೈಲಿಗೆ ಹಾಕಿದ್ದೀರಿ ಎಂದು ಮಹಿಳಾ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ಮಂಗಳೂರಿನ ಕೋರ್ಟ್ ದಂಡ ವಿಧಿಸಿತ್ತು. ಇದೀಗ ಅಂತಹದ್ದೇ ಮತ್ತೊಂದು ಪ್ರಸಂಗ ನಡೆದಿದ್ದು, ಪೋಕ್ಸೋ ಪ್ರಕರಣದಲ್ಲಿ ನೈಜ ಆರೋಪಿಯನ್ನು ಹಿಡಿಯದೇ ಕರ್ತವ್ಯ ಲೋಪ ಎಸಗಿದ್ದೀರಿ ಎಂದು ಮೂವರು ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಿನ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ 5 ಲಕ್ಷ ರೂ. ದಂಡ ವಿಧಿಸಿದೆ.

ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಲೋಕೇಶ್ ಎ.ಸಿ, ಎಸ್ಐ ಆಗಿದ್ದ ಶ್ರೀಕಲಾ ಮತ್ತು ಪುಷ್ಪಾರಾಣಿ ದಂಡ ವಿಧಿಸಲ್ಪಟ್ಟವರು. ಕಳೆದ 15-07-2022ರಂದು ಮೂಡುಬಿದ್ರೆ ಮೂಲದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಹಿಳಾ ಠಾಣೆಗೆ ದೂರು ನೀಡಿದ್ದಳು. ತನ್ನನ್ನು ಸ್ನೇಹಿತ ಪ್ರಸಾದ್ ಎನ್ನುವಾತ ಅತ್ಯಾಚಾರ ನಡೆಸಿದ್ದು, ಅದರಿಂದಾಗಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಳು. ಪೊಲೀಸರು ತನಿಖೆ ನಡೆಸಿ, ಆರೋಪಿ ಪ್ರಸಾದ್ ನನ್ನು ಬಂಧಿಸಿದ್ದರು. ಬಾಲಕಿಯು ತಂದೆ, ತಾಯಿ ಜೊತೆ ವಾಸವಿದ್ದು, ಇವರು ಶಿವಮೊಗ್ಗ ಮೂಲದವರಾಗಿದ್ದು, ಮೂಡುಬಿದ್ರೆಯ ಶಿರ್ತಾಡಿಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದರು. ಅಲ್ಲಿಗೆ ಕಾರ್ಮಿಕನಾಗಿ ಬರುತ್ತಿದ್ದ ಪ್ರಸಾದ್, ಪ್ರೀತಿಸುತ್ತೇನೆಂದು ಹೇಳಿ ಆಕೆಯನ್ನು ತಿರುಗಾಟಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ದೂರಿನಲ್ಲಿ ಹೇಳಿದ್ದಳು.

ಆನಂತರ, ಪೊಲೀಸರ ಮುಂದೆ ಮತ್ತು ನ್ಯಾಯಾಲಯದಲ್ಲಿ 164 ಅಡಿ ಬಾಲಕಿ ಹೇಳಿಕೆ ನೀಡಿದ್ದಾಗ, ಹೆಚ್ಚುವರಿ ವಿಚಾರಗಳನ್ನು ಹೇಳಿದ್ದಳು. ತನ್ನನ್ನು ತೋಟದ ಮಾಲೀಕ ಸಂದೇಶ್ ಎಂಬಾತ ಬೇರೆ ಕಡೆಗೆ ಕೆಲಸಕ್ಕೆಂದು ಕರೆದೊಯ್ದಿದ್ದು, ಆ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಹೊಟೇಲಿಗೆ ಕರೆದೊಯ್ದು ಬೀಯರ್ ಕುಡಿಸಿದ್ದಾನೆ. ಊಟ ತೆಗೆಸಿಕೊಟ್ಟು ಅಲ್ಲಿ ಅರೆಪ್ರಜ್ಞೆ ಅವಸ್ಥೆಗೆ ಹೋಗಿದ್ದ ಸಂದರ್ಭದಲ್ಲಿಯೂ ದುರ್ಬಳಕೆ ಮಾಡಿದ್ದಾನೆಂದು ಹೇಳಿಕೆಯಲ್ಲಿ ತಿಳಿಸಿದ್ದಳು. ಇದಲ್ಲದೆ, ತಂದೆ ಚಂದ್ರಪ್ಪ ಕುಡಿತದ ಚಟ ಹೊಂದಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದೂ ಹೇಳಿದ್ದಳು. ಪೊಲೀಸರು ಈ ಹೇಳಿಕೆ ಆಧರಿಸಿ ಚಂದ್ರಪ್ಪನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಸಂದೇಶ್ ವಿರುದ್ಧ ಪೊಲೀಸರು ಯಾವುದೇ ಕೇಸು ದಾಖಲಿಸಿರಲಿಲ್ಲ.

ಆರೋಪಿ ಪ್ರಸಾದ್ ಎರಡು ತಿಂಗಳಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರೆ, ಚಂದ್ರಪ್ಪನಿಗೆ ಜಾಮೀನು ನೀಡಲು ಯಾರೂ ಬರದೇ ಇದ್ದುದರಿಂದ ಜೈಲಿನಲ್ಲೇ ಉಳಿಯುವಂತಾಗಿತ್ತು. ಪ್ರಕರಣದಲ್ಲಿ ಮಹಿಳಾ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್, ಆರೋಪಿಗಳೆಂದು ಪ್ರಸಾದ್, ಚಂದ್ರಪ್ಪ, ರತ್ನಪ್ಪ ಎಂಬವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಪರ್ಯಾಸ ಅಂದರೆ, ಆರೋಪಿಗಳ ಡಿಎನ್ಎ ಪರೀಕ್ಷೆ ವರದಿ ಬರುವ ಮೊದಲೇ ಆರೋಪ ಪಟ್ಟಿ ಸಲ್ಲಿಸಿದ್ದರು. ಡಿಎನ್ಎ ವರದಿಯಲ್ಲಿ ಬಾಲಕಿಯ ಗರ್ಭಕ್ಕೆ ಬಂಧಿಸಿದ್ದ ಆರೋಪಿಗಳು ಕಾರಣ ಅಲ್ಲ ಎಂಬ ಅಂಶ ದಾಖಲಾಗಿತ್ತು. ಹೀಗಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರು.

ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರಾಗಿದ್ದ ವಾಸುದೇವ ಗೌಡ, ಪೊಲೀಸರು ಕ್ಯತ್ಯದ ಬಗ್ಗೆ ನಿರ್ಲಕ್ಷ್ಯ ಮತ್ತು ಲೋಪ ಎಸಗಿದ್ದನ್ನು ಬೊಟ್ಟು ಮಾಡಿದ್ದಾರೆ. ಆರೋಪಿಗಳೆಂದು ತೋರಿಸಿರುವ ಚಂದ್ರಪ್ಪ ಮತ್ತು ಪ್ರಸಾದ್ ಮೇಲಿನ ಆರೋಪ ಸಾಬೀತಾಗಿಲ್ಲ. ಅಲ್ಲದೆ, ಡಿಎನ್ಎ ವರದಿಯಲ್ಲೂ ಆರೋಪಿಗಳಿಗೂ, ಬಾಲಕಿಗೂ ಸಂಪರ್ಕ ಇರುವುದು ಕಂಡುಬಂದಿಲ್ಲ. ಹೀಗಾಗಿ ನೈಜ ಆರೋಪಿಯನ್ನು ಬಿಟ್ಟು ಪೊಲೀಸರು ನಿರಪರಾಧಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಬಾಲಕಿಯು ಹೇಳಿಕೆಯಲ್ಲಿ ಸಂದೇಶನಿಗೆ ಹೆದರಿ, ಪ್ರಸಾದ್ ಮೇಲೆ ಆರೋಪ ಹೊರಿಸಿದ್ದಾಗಿ ನುಡಿದಿರುವುದನ್ನು ನ್ಯಾಯಾಧೀಶರ ಮುಂದಿಟ್ಟಿದ್ದಾರೆ.

ಪ್ರಕರಣದಲ್ಲಿ ಪೊಲೀಸರು ಗಂಭೀರ ಲೋಪ ಎಸಗಿರುವುದನ್ನು ಮನಗಂಡ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ, ಮೂವರು ಅಧಿಕಾರಿಗಳ ವಿರುದ್ಧ ಛೀಮಾರಿ ಹಾಕಿದ್ದಾರೆ. ಅಲ್ಲದೆ, 5 ಲಕ್ಷ ರೂ. ದಂಡ ವಿಧಿಸಿದ್ದು, ದಂಡದ ಹಣವನ್ನು ಇವರ ಸಂಬಳದ ಹಣದಿಂದ ಭರಿಸಬೇಕು. ಆ ಹಣವನ್ನು ಒಂದು ವರ್ಷ ಕಾಲ ಜೈಲು ವಾಸ ಅನುಭವಿಸಿದ ಚಂದ್ರಪ್ಪ ಅವರಿಗೆ ನೀಡಬೇಕು. ಒಂದು ಲಕ್ಷ ರೂ.ವನ್ನು ಇನ್ನೊಬ್ಬ ಆರೋಪಿ ಪ್ರಸಾದ್ ಗೆ ನೀಡಬೇಕು ಎಂದು ಆದೇಶ ಮಾಡಿದ್ದಾರೆ. ಇದಲ್ಲದೆ, ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಇನ್ಸ್ ಪೆಕ್ಟರ್ ಲೋಕೇಶ್, ಎಸ್ಐಗಳಾದ ಶ್ರೀಕಲಾ ಮತ್ತು ಪುಷ್ಪಾರಾಣಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

Mangalore Police, five police staffs of woman police station fined of 5 lakhs by court for arresting innocent IN Posco case of 2022. The court has also asked for a detailed report by Mangalore Police Commissioner Kuldeep Kumar Jain.