CM Siddaramaiah Mangalore, Sea Erosion Ullal: ಉಳ್ಳಾಲ ಕಡಲ್ಕೊರೆತ ಪ್ರದೇಶಕ್ಕೆ ಸಿಎಂ ಸಿದ್ದು ಭೇಟಿ ; ಜನರ ಸಮಸ್ಯೆ ಆಲಿಸದೆ ತೆರಳಿದ ಮುಖ್ಯಮಂತ್ರಿ ಬಗ್ಗೆ ಸ್ಥಳೀಯರ ಆಕ್ರೋಶ, ಕಾಂಗ್ರೆಸ್ ನಾಯಕರಿಗೆ ತರಾಟೆ 

01-08-23 08:25 pm       Mangalore Correspondent   ಕರಾವಳಿ

ಉಚ್ಚಿಲ, ಬಟ್ಟಪ್ಪಾಡಿ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಕಾಟಾಚಾರದ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನೂ ಆಲಿಸದೆ ತುರ್ತು ನಿರ್ಗಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಉಳ್ಳಾಲ (ಮಂಗಳೂರು) ಆ.1: ಉಚ್ಚಿಲ, ಬಟ್ಟಪ್ಪಾಡಿ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಕಾಟಾಚಾರದ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನೂ ಆಲಿಸದೆ ತುರ್ತು ನಿರ್ಗಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಅಸಮಧಾನಗೊಂಡ ಸ್ಥಳೀಯರು ಸ್ಪೀಕರ್ ಯು.ಟಿ ಖಾದರ್ ಅವರಲ್ಲಿ ನಮಗೆ ನೀವೇ ಗತಿ. ಕಡಲ ಕೊರೆತಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.‌ 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಸಿಎಂ ಸಿದ್ಧರಾಮಯ್ಯ ಅವರು ಮಂಗಳವಾರ ಸಂಜೆ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿಯ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು. ಸ್ಪೀಕರ್ ಯು.ಟಿ.ಖಾದರ್ ಅವರು ಕಡಲ್ಕೊರೆತದ ಬಗ್ಗೆ ಸಿಎಂ ಗೆ ವಿವರಿಸಿದರು. ಆದರೆ ಅವಸರದಲ್ಲಿದ್ದ ಸಿಎಂ ಸಾಹೇಬರು ಸ್ಥಳೀಯರ ಅಹವಾಲನ್ನ ಆಲಿಸದೆ ತುರ್ತಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಉಡುಪಿ, ಕಾರವಾರ ಹಾಗೂ ದ.ಕ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರದಿಂದ ಅಪಾರ ಹಾನಿಯುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಹೇಳಿದರು. 

ತಮ್ಮ ಸಮಸ್ಯೆಯನ್ನ ಆಲಿಸದೆ ತೆರಳಿದ ಮುಖ್ಯಮಂತ್ರಿಗಳ ವಿರುದ್ಧ ಅಸಮಧಾನಗೊ‌ಂಡ ಸ್ಥಳೀಯ ನಿವಾಸಿಗಳು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರನ್ನ ತರಾಟೆಗೆತ್ತಿದ್ದಾರೆ. ಬಿಜೆಪಿ ಸರಕಾರ ಇರುವಾಗ ನೀವು ನಮ್ಮ ಸರಕಾರ ಬರಲಿ, ಶಾಶ್ವತವಾಗಿ ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತೀವಿ ಎಂದು ಹೇಳಿದ್ದೀರಿ. ಈಗ ಸಿಎಂ ಬಂದು ಹಾಗೇ ಹೋಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಮಧ್ಯ ಪ್ರವೇಶಿಸಿದ ಸ್ಪೀಕರ್ ಖಾದರ್ ಅವರಲ್ಲಿ ನಾವು ನಿಮ್ಮನ್ನೇ ನಂಬಿದ್ದೇವೆ ಸರ್. ನಮಗೆ ಶಾಶ್ವತ ಪರಿಹಾರ ಕೊಡಿಸಿ. ನೀವು ಸಾಕಷ್ಟು ಕೆಲಸ ಮಾಡಿದ್ದೀರಿ, ಇಲ್ಲ ಅನ್ನಲ್ಲ. ನೀವು ಮಾಡಿದ ಕೆಲಸದಿಂದ ನಮ್ಮ ಮನೆ ಉಳಿದಿದೆ. ಆದರೆ ಈಗ ಸಮಸ್ಯೆ ಹೆಚ್ಚಾಗಿದೆ, ತಕ್ಷಣ ಏನಾದ್ರು ಕ್ರಮ ವಹಿಸಿ ಎಂದು ಮನವಿ ಮಾಡಿದರು. 

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಳೆದ ವರುಷ ಜುಲೈ 12 ರಂದು ಇದೇ ಬಟ್ಟಪ್ಪಾಡಿ ಪ್ರದೇಶಕ್ಕೆ ಸೂರ್ಯ ಮುಳುಗಿದ ನಂತರ ರಾತ್ರಿ ವೇಳೆ ಭೇಟಿ ನೀಡಿದ್ದರು. ಸೀ ವೇವ್ ಬ್ರೇಕರ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಶಾಶ್ವತ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದೆಂದು ಬೊಗಳೆ ಬಿಟ್ಟು ತೆರಳಿದ್ದರು. ಆಗ ಬಂದರು ಸಚಿವರಾಗಿದ್ದ ಎಸ್.ಅಂಗಾರ, ಕೇರಳ ಮಾದರಿ ತಂತ್ರಜ್ಞಾನ ಅಳವಡಿಸಲಾಗುವುದು ಎಂದಿದ್ದರು.

CM Siddaramaiah visits sea erosion-affected areas at Ullal in Mangalore. Siddaramaiah visited sea erosion-affected area near Padubidri. He said that widespread damage has occurred in the district due to rain and cyclone.