ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಬ್ಬರು ಮಹಿಳೆಯರು ನಾಪತ್ತೆ ; ಬೆಂಗಳೂರಿನ ಮಹಿಳೆ ಮಗುವಿನೊಂದಿಗೆ ಮಿಸ್ಸಿಂಗ್ 

02-08-23 09:15 pm       Mangalore Correspondent   ಕರಾವಳಿ

ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಒಬ್ಬ ಮಹಿಳೆ ಮಗುವಿನ ಜೊತೆ ದೇವಸ್ಥಾನಕ್ಕೆ ಬಂದು ನಾಪತ್ತೆಯಾಗಿದ್ದರೆ ಮತ್ತೊಬ್ಬರು ದಂತ ಚಿಕಿತ್ಸೆಗೆಂದು ಹೋದವರು ಮರಳಿ ಮನೆ ಸೇರಿಲ್ಲ.

ಸುಳ್ಯ, ಆಗಸ್ಟ್ 2: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರು ನಾಪತ್ತೆಯಾಗಿದ್ದಾರೆ. ಒಬ್ಬ ಮಹಿಳೆ ಮಗುವಿನ ಜೊತೆ ದೇವಸ್ಥಾನಕ್ಕೆ ಬಂದು ನಾಪತ್ತೆಯಾಗಿದ್ದರೆ ಮತ್ತೊಬ್ಬರು ದಂತ ಚಿಕಿತ್ಸೆಗೆಂದು ಹೋದವರು ಮರಳಿ ಮನೆ ಸೇರಿಲ್ಲ.

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯದ ನಿವಾಸಿ ಮಾಯಿಲಪ್ಪ ಅವರ ಪುತ್ರಿ ತೀರ್ಥಲತಾ ಎಂಬವರನ್ನು ಗದಗ ಮೂಲದ ಶಿವರಾಜ್ ಎಂಬವರಿಗೆ ಮದುವೆ ಮಾಡಲಾಗಿತ್ತು. ಇತ್ತೀಚೆಗೆ ಮನೆಗೆ ಬಂದ ತೀರ್ಥಲತಾ ಜುಲೈ 31ರಂದು ಹಲ್ಲು ನೋವಿನ ಕಾರಣದಿಂದ ದಂತ ವೈದ್ಯರ ಬಳಿ ಚಿಕಿತ್ಸೆಗೆಂದು ಹೋದವರು ಮನೆಗೆ ವಾಪಸಾಗಿಲ್ಲ. ಸಾಕಷ್ಟು ಹುಡುಕಾಟ ನಡೆಸಿದ್ರೂ ತೀರ್ಥಲತಾ ಕಾಣದ ಕಾರಣದಿಂದ ಅವರ ತಂದೆ ಮಾಯಿಲಪ್ಪ ಗೌಡ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಬೆಂಗಳೂರಿನ ಮಹಿಳೆ ಮಗುವಿನೊಂದಿಗೆ ಮಿಸ್ಸಿಂಗ್‌ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಶೇಖರ್ ಎಂಬವರು ತನ್ನ ಪತ್ನಿ ಹರ್ಷಿತಾ ಮತ್ತು ಮೂರು ವರ್ಷ ಪ್ರಾಯದ ಮಗು ಭರತ್​ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ದೇವರ ದರ್ಶನದ ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿದ್ದು ಅಲ್ಲಿದ್ದಾಗ ಪತ್ನಿ ಹಾಗೂ ಮಗು ಕಾಣೆಯಾಗಿದ್ದಾಗಿ ದೂರು ನೀಡಿದ್ದಾರೆ. ಎಲ್ಲ ಕಡೆ ಹುಡುಕಾಡಿದರೂ ಪತ್ನಿ ಹಾಗೂ ಮಗು ಸಿಗದ ಕಾರಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಜಶೇಖರ್‌ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಮೆಷಿನ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ನೇಹಿತರ ಕುಟುಂಬದ ಜತೆ ಧರ್ಮಸ್ಥಳಕ್ಕೆ ಬಂದಿದ್ದು ಆಗಸ್ಟ್‌ 1ರಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಬ್ರಹ್ಮಣ್ಯ ತಲುಪಿದ್ದರು. ದೇವರ ದರ್ಶನ ಮುಗಿಸಿ ಮಧ್ಯಾಹ್ನ ಹೊತ್ತಿಗೆ ಖರೀದಿಗೆಂದು ತೆರಳಿದ್ದರು. ಈ ವೇಳೆ, ಹರ್ಷಿತಾ ಮತ್ತು ಮಗು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಬಸ್ ನಿಲ್ದಾಣ, ದೇವಸ್ಥಾನದ ಆವರಣದ ಅಂಗಡಿಗಳಲ್ಲಿ ಹಾಗೂ ಕ್ಷೇತ್ರದ ಪ್ರಮುಖ ಸ್ಥಳದ ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

Two women go missing after visiting Kukke Subramanya Temple in Mangalore.