ಪಾಕೆಟ್ ಮನಿ ಕೊಡದ್ದಕ್ಕೆ ಬಡ ಪೋಷಕರಲ್ಲಿ ಮುನಿಸು !  ಡಿಪ್ಲೊಮಾ ಸೇರಿದ ಎರಡೇ ದಿನಕ್ಕೆ ವಿದ್ಯಾರ್ಥಿ ಆತ್ಮಹತ್ಯೆ 

03-08-23 05:56 pm       Mangalore Correspondent   ಕರಾವಳಿ

ನಗರದ ಕದ್ರಿ ಕೆಪಿಟಿಯಲ್ಲಿ ಪಾಲಿಟೆಕ್ನಿಕ್ ಡಿಪ್ಲೊಮಾ ವ್ಯಾಸಂಗಕ್ಕೆ ಸೇರ್ಪಡೆಗೊಂಡ ಎರಡೇ ದಿನಕ್ಕೆ ಪೋಷಕರು ಪಾಕೆಟ್ ಮನಿ ಕೊಟ್ಟಿಲ್ಲವೆಂದು ಮುನಿಸಿಕೊಂಡ ವಿದ್ಯಾರ್ಥಿಯೊಬ್ಬ ಮನೆಯೊಳಗೆ ನೇಣಿಗೆ ಶರಣಾದ ಘಟನೆ ಕುತ್ತಾರ್ ಸಮೀಪದ ಸುಭಾಸ್ ನಗರದಲ್ಲಿ ನಡೆದಿದೆ. 

ಉಳ್ಳಾಲ, ಆ.3: ನಗರದ ಕದ್ರಿ ಕೆಪಿಟಿಯಲ್ಲಿ ಪಾಲಿಟೆಕ್ನಿಕ್ ಡಿಪ್ಲೊಮಾ ವ್ಯಾಸಂಗಕ್ಕೆ ಸೇರ್ಪಡೆಗೊಂಡ ಎರಡೇ ದಿನಕ್ಕೆ ಪೋಷಕರು ಪಾಕೆಟ್ ಮನಿ ಕೊಟ್ಟಿಲ್ಲವೆಂದು ಮುನಿಸಿಕೊಂಡ ವಿದ್ಯಾರ್ಥಿಯೊಬ್ಬ ಮನೆಯೊಳಗೆ ನೇಣಿಗೆ ಶರಣಾದ ಘಟನೆ ಕುತ್ತಾರ್ ಸಮೀಪದ ಸುಭಾಸ್ ನಗರದಲ್ಲಿ ನಡೆದಿದೆ. 

ಸುಭಾಷ್ ನಗರ ನಿವಾಸಿಗಳಾದ ಭಾಸ್ಕರ ಪೂಜಾರಿ ಮತ್ತು ದಾಕ್ಷಾಯಿಣಿ ಎಂಬವರ ಪುತ್ರ ಸುಶಾಂತ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸುಶಾಂತ್ ಪ್ರಥಮ ಪಿಯುಸಿಯನ್ನು ಪಂಪ್ವೆಲ್ ಕಪಿತಾನಿಯೋ ಕಾಲೇಜಿನಲ್ಲಿ ಮುಗಿಸಿದ್ದ. ಆನಂತರ ಕದ್ರಿ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ನಡೆಸುವ ಆಸಕ್ತಿ ವಹಿಸಿದ್ದರಿಂದ ಪೋಷಕರು ನಿನ್ನೆ 500 ರೂಪಾಯಿ ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಇಂದು ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ. 500 ಕೊಡುವಂತೆ ಕೇಳಿದಾಗ ಪೋಷಕರು ನೀಡಿರಲಿಲ್ಲ. ಇದರಿಂದ ಮುನಿಸಿಕೊಂಡು ಮನೆಯಲ್ಲೇ ಉಳಿದುಕೊಂಡಿದ್ದ ಸುಶಾಂತ್ ತಂದೆ ಮನೆ ಹೊರಗಡೆ  ಹಾಗೂ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭ ಕೋಣೆಯೊಳಗಿನ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಸುಶಾಂತ್ ಏಕೈಕ ಸಹೋದರಿಯನ್ನ ಅಗಲಿದ್ದು ಆತನ ತಂದೆ ಭಾಸ್ಕರ್ ಕೂಲಿ ಕೆಲಸ ಮಾಡುತ್ತಿದ್ದಾರೆ.

ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

17 year old student commit suicide for not giving pocket money at Kuthar in Mangalore.