Mangalore Soumya Bhat rape: ಸೌಮ್ಯಾ ಭಟ್ ಕೊಲೆಗೆ 26 ವರ್ಷ ; ಎರಡೆರಡು ಬಾರಿ ಮಂಗಳೂರು ಜೈಲಿನ ಎದುರು ಬಾಗಿಲಲ್ಲೇ ತಪ್ಪಿಸಿಕೊಂಡಿದ್ದ ಮಿಲಿಟ್ರಿ ಅಶ್ರಫ್! ಕಳ್ಳನೋಟು ಜಾಲದ ಪಂಟರ್ ಭಾಸ್ಕರ್ ನಾಯರ್ ನಂಟು, ಸೌಮ್ಯಾ ಕೊಲೆಯಲ್ಲಿ ಪೊಲೀಸರು ಎಡವಿದ್ದೆಲ್ಲಿ..?   

08-08-23 09:30 pm       Giridhar Shetty, Mangaluru   ಕರಾವಳಿ

ಧರ್ಮಸ್ಥಳದ ಸೌಜನ್ಯಾಳನ್ನು ಅತ್ಯಾಚಾರಗೈದು ಪೈಶಾಚಿಕವಾಗಿ ಕೊಲೆಗೈದ ಪ್ರಕರಣ ಜನಮಾನಸದಲ್ಲಿ ಸೇಡಿನ ಕಿಡಿ ಎಬ್ಬಿಸಿದ್ದರೆ, ಅದೇ ರೀತಿಯಲ್ಲಿ ಪುತ್ತೂರಿನಲ್ಲಿ 26 ವರ್ಷಗಳ ಹಿಂದೆ, ಅಂದರೆ 1997ರ ಆಗಸ್ಟ್ 7ರಂದು ಕೊಲೆಯಾಗಿದ್ದ ಸೌಮ್ಯಾ ಭಟ್ ಎಂಬ ಬಿಎಸ್ಸಿ ವಿದ್ಯಾರ್ಥಿನಿಯ ಸಾವು ಮತ್ತು ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಿಲಿಟ್ರಿ ಅಶ್ರಫ್ ನಿಗೂಢ ನಾಪತ್ತೆಯಾಗಿದ್ದ ಪ್ರಕರಣ ಜನರ ಮನಸ್ಸನ್ನು ಆವರಿಸುವಂತೆ ಮಾಡಿದೆ.

ಮಂಗಳೂರು, ಆಗಸ್ಟ್ 8: ಧರ್ಮಸ್ಥಳದ ಸೌಜನ್ಯಾಳನ್ನು ಅತ್ಯಾಚಾರಗೈದು ಪೈಶಾಚಿಕವಾಗಿ ಕೊಲೆಗೈದ ಪ್ರಕರಣ ಜನಮಾನಸದಲ್ಲಿ ಸೇಡಿನ ಕಿಡಿ ಎಬ್ಬಿಸಿದ್ದರೆ, ಅದೇ ರೀತಿಯಲ್ಲಿ ಪುತ್ತೂರಿನಲ್ಲಿ 26 ವರ್ಷಗಳ ಹಿಂದೆ, ಅಂದರೆ 1997ರ ಆಗಸ್ಟ್ 7ರಂದು ಕೊಲೆಯಾಗಿದ್ದ ಸೌಮ್ಯಾ ಭಟ್ ಎಂಬ ಬಿಎಸ್ಸಿ ವಿದ್ಯಾರ್ಥಿನಿಯ ಸಾವು ಮತ್ತು ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಿಲಿಟ್ರಿ ಅಶ್ರಫ್ ನಿಗೂಢ ನಾಪತ್ತೆಯಾಗಿದ್ದ ಪ್ರಕರಣ ಜನರ ಮನಸ್ಸನ್ನು ಆವರಿಸುವಂತೆ ಮಾಡಿದೆ. ಇಷ್ಟಕ್ಕೂ ಸೌಮ್ಯಾ ಭಟ್ ಕೊಲೆಗಾರ ಒಂದಲ್ಲ ಎರಡೆರಡು ಬಾರಿ ಮಂಗಳೂರಿನ ಜೈಲಿನಿಂದ ರಾಜಾರೋಷವಾಗಿ ತಪ್ಪಿಸಿಕೊಂಡು ಹೋಗಿದ್ದೇ ರೋಚಕ ಕತೆ.

ಪುತ್ತೂರಿನ ಕಬಕ ಬಳಿಯ ಕೆದಿಲ ನಿವಾಸಿ ಗಣಪತಿ ಭಟ್ಟರ ಮಗಳು, ಸೌಮ್ಯಾ ಭಟ್ ಎಂಬ ಮುಗ್ಧ, ಅಮಾಯಕ ಹೆಣ್ಮಗಳ ಸಾವು ಇಡೀ ಕರಾವಳಿಯನ್ನು ಅದೆಷ್ಟು ಕದಡಿಸಿತ್ತು ಎಂದರೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಕೆಲವು ದಿನಗಳ ಕಾಲ ಸೆಕ್ಷನ್, ಕರ್ಫ್ಯೂ ಹೇರುವಂತಾಗಿತ್ತು. ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದುತ್ತಿದ್ದ ಸೌಮ್ಯಾ 1997ರ ಆಗಸ್ಟ್ 7ರಂದು ಕಾಲೇಜು ಮುಗಿಸಿ ಸಂಜೆ 5 ಗಂಟೆ ಸುಮಾರಿಗೆ ಕಬಕದಲ್ಲಿ ಬಸ್ಸಿಳಿದು ನಡೆದು ಹೋಗುತ್ತಿದ್ದಳು. ಈ ವೇಳೆ, ಕಬಕದಿಂದಲೇ ಹಿಂಬಾಲಿಸಿದ್ದ ಆರೋಪಿ ಅಶ್ರಫ್, ಆಗ ಡಾಮರು ಕಂಡಿರದ ಮಣ್ಣಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸೌಮ್ಯಾಳನ್ನು ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದ. ತಪ್ಪಿಸಿಕೊಂಡು ಓಡಿದ್ದ ಸೌಮ್ಯಾಳನ್ನು ಅತ್ಯಾಚಾರಕ್ಕೆ ಸಹಕರಿಸದ ಕಾರಣಕ್ಕೆ ಕೈಯಲ್ಲಿದ್ದ ಚೂರಿಯಿಂದ 18 ಬಾರಿ ತಿವಿದು ಬರ್ಬರವಾಗಿ ಸಾಯಿಸಿದ್ದ.

ಅಂದು ರಾತ್ರಿಯೇ ಪೊಲೀಸರಿಗೆ ಅಶ್ರಫ್ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದರು. ಆದರೆ, ಆಗಿನ ಕಾಲದಲ್ಲಿ ಆರೋಪಿ ಅರೆಸ್ಟ್ ಆಗಿರುವುದು ಜನರಿಗೆ ಅದೇ ದಿನ ತಲುಪಿರಲಿಲ್ಲ. ಯಾರೋ ಮುಸ್ಲಿಂ ಯುವಕ ಅಡ್ಡಹಾಕಿ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಅನ್ನುವ ಸುದ್ದಿ ಹರಡಿದ್ದರಿಂದ ಸಂಘ ಪರಿವಾರದ ಕಾರ್ಯಕರ್ತರು ಮರುದಿನ ಪುತ್ತೂರಿನಲ್ಲಿ ಸೇರಿದ್ದರು. ಪೋಸ್ಟ್ ಮಾರ್ಟಂ ನಡೆದು ಶವವನ್ನು ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಒಯ್ಯಲಾಗಿತ್ತು. ಪೋಸ್ಟ್ ಆಫೀಸ್ ವರೆಗೆ ಮೆರವಣಿಗೆಯಲ್ಲಿದ್ದ ಕಲ್ಲಡ್ಕ ಭಟ್ಟರು ಅಲ್ಲಿಂದ ಬಳಿಕ ಮರೆಯಾಗಿದ್ದರು. ಭಟ್ಟರು ಹಿಂತಿರುಗುತ್ತಲೇ ಕಲ್ಲುಗಳು ಪೊಲೀಸರತ್ತ ತೂರಿ ಬಂದಿದ್ದವು. ಭದ್ರತೆಗಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟಗೊಂಡು ಹಲವಾರು ಮಂದಿ ಗಾಯಗೊಂಡಿದ್ದರು. ಆನಂತರ ಲಾಠಿಚಾರ್ಜ್, ನಿಷೇಧಾಜ್ಞೆ ಜಾರಿಗೊಳಿಸಿ ಉದ್ರಿಕ್ತ ವಾತಾವರಣ ಶಮನಗೊಳಿಸಲಾಗಿತ್ತು.

ಪುತ್ತೂರಿನಲ್ಲಿ ಆಗ ಜೆ.ಪಾಪಯ್ಯ ಇನ್ ಸ್ಪೆಕ್ಟರ್ ಆಗಿದ್ದರು. ಟಿ.ಆರ್ ಜಗನ್ನಾಥ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದರು. ಕಬಕದಲ್ಲಿ ಬಸ್ಸಿಳಿದು ಸೌಮ್ಯಾ ಭಟ್ ನಡೆದುಕೊಂಡು ಹೋದ ಬೆನ್ನಲ್ಲೇ ಮಿಲಿಟ್ರಿ ಅಶ್ರಫ್ ಹೋಗಿದ್ದ ಅನ್ನುವ ಸುಳಿವು ಸಿಗುತ್ತಲೇ ಪೊಲೀಸರು ಆತನ ಮನೆಗೆ ತೆರಳಿದ್ದರು. ಮನೆಯಲ್ಲಿ ಕುಳಿತಿದ್ದ ಅಶ್ರಫ್ ನನ್ನು ಪ್ರಶ್ನೆ ಮಾಡಿದಾಗ, ತನಗೇನೂ ಗೊತ್ತಿಲ್ಲ ಎಂದಿದ್ದ. ಹಾಕ್ಕೊಂಡಿದ್ದ ಬಟ್ಟೆಯಲ್ಲಿ ರಕ್ತದ ಕಲೆಗಳಿದ್ದುದರಿಂದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಪೊಲೀಸ್ ಶೈಲಿಯಲ್ಲಿ ಟ್ರೀಟ್ಮೆಂಟ್ ಸಿಕ್ಕಾಗಲೇ ತನ್ನ ತಪ್ಪು ಒಪ್ಪಿಕೊಂಡಿದ್ದ. ಹಾಗೆ ಬಂಧಿತನಾಗಿದ್ದ ಅಶ್ರಫ್ ನನ್ನು ಮಂಗಳೂರಿನ ಹಳೆ ಜೈಲಿನಲ್ಲಿ ಹಾಕಲಾಗಿತ್ತು. ಇತ್ತ ಪೊಲೀಸರು ಚಾರ್ಜ್ ಶೀಟ್ ರೆಡಿ ಮಾಡುತ್ತಿದ್ದರು. ಹಾಗಿರುವಾಗಲೇ ತನಿಖೆ ಸಿಓಡಿಗೆ ಹೋಗಿತ್ತು. ಅದಾಗಿ ಎರಡು ತಿಂಗಳಲ್ಲಿ ಆರೋಪಿ ಮಿಲಿಟ್ರಿ ಅಶ್ರಫ್ ಮತ್ತು ಇತರ ನಾಲ್ವರು ಕಳ್ಳರು ಮಂಗಳೂರಿನ ಜೈಲಿನಿಂದ ತಪ್ಪಿಸಿಕೊಂಡಿದ್ದರು.

ಜೈಲಿನ ಎದುರು ಬಾಗಿಲಲ್ಲೇ ಹೊರಬಿದ್ದರು

ಇವರೇನು ಕಿಟಕಿ ಹಾರಿ ಹೋಗಿದ್ದಲ್ಲ. ನೇರವಾಗಿ ಜೈಲಿನ ಎದುರು ಬಾಗಿಲಿನಲ್ಲಿಯೇ ಬೆಳಗ್ಗಿನ ಹೊತ್ತಲ್ಲಿ ರಾಜಾರೋಷ ನಡೆದು ಹೋಗಿದ್ದರು. ಬೆಳಗ್ಗೆ ಎಂದಿನಂತೆ ಜೈಲರ್ ಸೆಲ್ ಬೀಗ ತೆರೆದು ಕೈದಿಗಳನ್ನು ದೈನಂದಿನ ಕೆಲಸಕ್ಕಾಗಿ ಬಿಟ್ಟಿದ್ದ. ಉದ್ದಕ್ಕೆ ಸೆಲ್ ಓಪನ್ ಮಾಡುತ್ತಿರುವಾಗಲೇ ಮಿಲಿಟ್ರಿ ಅಶ್ರಫ್, ಇನ್ನೊಬ್ಬ ಲಕ್ಷ್ಮಣ ಮತ್ತು ಇತರ ಇಬ್ಬರು ಕಳ್ಳರು ನೇರವಾಗಿ ತೆರೆದುಕೊಂಡಿದ್ದ ಎದುರಿನ ಬಾಗಿಲಲ್ಲೇ ಹೊರ ನಡೆದಿದ್ದರು. ಆದರೆ, ಕೈಯಲ್ಲಿ ಕಾಸಿಲ್ಲದೇ ಅತ್ತ ಬಸ್ಸಿಗೂ ಹೋಗಲಾಗದೆ ರಸ್ತೆಯಲ್ಲಿ ನಡೆದುಕೊಂಡೇ ಸಾಗಿದ್ದರು. ಅದರಲ್ಲಿ ಒಬ್ಬ ಕಳ್ಳನಿಗೆ ಬಜ್ಪೆಯ ರೌಡಿ ಆಲ್ವಿನ್ ಪಿಂಟೋ ಎಂಬಾತನ ಪರಿಚಯ ಇತ್ತು. ಆತನಿಂದ ಹಣ ಪಡೆಯುವ ಉದ್ದೇಶದಲ್ಲಿ ಜೊತೆಯಾಗಿಯೇ ಗುರುಪುರ, ಕೈಕಂಬ ಮೂಲಕ ಬಜ್ಪೆಗೆ ನಡೆದುಕೊಂಡೇ ತೆರಳಿದ್ದರು. ಬಜ್ಪೆ ತಲುಪಿದಾಗ, ಆಲ್ವಿನ್ ಪಿಂಟೋ ಬೇರೆ ಯಾವುದೋ ಕೇಸಿಗಾಗಿ ಮಂಗಳೂರಿನ ಕೋರ್ಟಿಗೆ ಬಂದಿದ್ದ. ಅಲ್ಲಿಗೆ ಮುಟ್ಟಿದಾಗ ಮಧ್ಯಾಹ್ನ ಆಗಿದ್ದರಿಂದ ತೀವ್ರ ಬಳಲಿಕೆ ಮತ್ತು ಹೊಟ್ಟೆ ಹಸಿವು ಜೋರಾಗಿತ್ತು. ಮರಳಿ ಕೈಕಂಬ, ಪೊಳಲಿ ದ್ವಾರದ ಮೂಲಕ ನಡೆದು ಹೋಗುತ್ತಿರುವಾಗಲೇ ದಾರಿಯಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಅನ್ನದಾನ ನಡೆಯುತ್ತಿತ್ತು. ನಾಲ್ವರೂ ಅಲ್ಲಿ ಕುಳಿತು ಗಡದ್ದಾಗಿ ಊಟ ಮಾಡಿದ್ದಲ್ಲದೆ, ಅದರಲ್ಲಿ ಒಬ್ಬಾತ ಅಲ್ಲಿಯೇ ನಿಲ್ಲಿಸಿದ್ದ ಕಾರಿನ ಸ್ಟೀರಿಯೋ ಒಂದನ್ನು ಕಳವು ಮಾಡಿದ್ದ.

ಮಾರ್ನಬೈಲಿನ ಬಾರ್ ಹೋಗಿ ಸಿಕ್ಕಿಬಿದ್ದರು 

ಆನಂತರ, ಅಲ್ಲಿಂದಲೇ ಮುಂದಕ್ಕೆ ಹೋಗಿ ಬಂಟ್ವಾಳಕ್ಕೆ ಹೋಗುವ ರೈಲ್ವೇ ಹಳಿಯಲ್ಲಿ ನಡೆಯುತ್ತ ಸಾಗಿದ್ದರು. ಬಿಸಿ ರೋಡ್ ಬಳಿಯ ಮಾರ್ನಬೈಲ್ ತಲುಪಿದಾಗ ಸಂಜೆಯಾಗಿತ್ತು. ಅಲ್ಲಿಯೇ ಸುರಭಿ ಬಾರ್ ಅಂಡ್ ರೆಸ್ಟೋರೆಂಟಿಗೆ ಹೋಗಿ, ಒಂದು ಕಾರ್ ಸ್ಟೀರಿಯೋ ಇದೆ, ಇದನ್ನು ತಗೊಳ್ಳಿ.. ಊಟಕ್ಕೇನೂ ಇಲ್ಲ. ಹಣ ಬೇಕಿತ್ತು ಎಂದು ಅದರ ಮಾಲಕ ಸಂಜೀವ ಪೂಜಾರಿ ಬಳಿ ಬೇಡಿಕೊಂಡರು. ಒಳಗೆ ಡೈಲಿ ಸಿಟ್ಟಿಂಗಲ್ಲಿದ್ದ ವಿಟ್ಲದ ಪೊಲೀಸ್ ಅಲೆಕ್ಸ್ ಬಳಿ ಹೋದ ಸಂಜೀವ ಪೂಜಾರಿ, ಒಬ್ಬ ಕಾರು ಸ್ಟೀರಿಯೋ ಹಿಡ್ಕೊಂಡು ಬಂದಿದ್ದಾನೆ, ನಿಮಗೇನಾದ್ರೂ ಬೇಕಾ ಎಂದು ಕೇಳಿದ್ದಾರೆ. ಕ್ಯಾಶಿಯರ್ ಬಳಿ ತೆರಳಿದ ಅಲೆಕ್ಸ್, ಕಾರು ಸ್ಟೀರಿಯೋ ಜೊತೆಗೆ ಬಂದವನನ್ನು ಗಮನಿಸಿದ್ದಾರೆ. ಎಷ್ಟು ಮಂದಿ ಇದ್ದೀರಿ ಎಂದಾಗ, ನಾಲ್ವರಿದ್ದೇವೆ. ಊಟಕ್ಕೆ ಹಣ ಬೇಕು ಎಂದು ಆತ ಹೇಳಿದ್ದಾನೆ. ಹೊರಗಿದ್ದವರನ್ನು ಒಳಗೆ ಕರೆದುಕೊಂಡು ಬರುವಂತೆ ಅಲೆಕ್ಸ್ ಹೇಳಿದ್ದಾರೆ. ಪೊಲೀಸ್ ಸಿಬಂದಿಯಾಗಿದ್ದ ಅಲೆಕ್ಸ್ ಗೆ ಮಂಗಳೂರಿನಲ್ಲಿ ಜೈಲ್ ಬ್ರೇಕ್ ಆಗಿದ್ದು ಮತ್ತು ನಾಲ್ವರು ಪರಾರಿಯಾಗಿದ್ದು ಮೊದಲೇ ತಿಳಿದಿದ್ದಲ್ಲದೆ, ಕಳ್ಳರ ಪೈಕಿ ಲಕ್ಷ್ಮಣ ಮತ್ತು ಸೌಮ್ಯಾ ಭಟ್ ಕೊಲೆಗಾರ ಮಿಲಿಟ್ರಿ ಅಶ್ರಫ್ ಪರಿಚಯವೂ ಇತ್ತು.

ನಾಲ್ವರಲ್ಲಿ ಮಿಲಿಟ್ರಿ ಅಶ್ರಫ್ ಇರೋದನ್ನು ಗಮನಿಸಿದ ಅಲೆಕ್ಸ್, ಅವನೇ ಸೌಮ್ಯಾ ಭಟ ಕೊಲೆಗಾರ. ನಾಲ್ವರನ್ನೂ ಹಿಡಿಯಿರಿ ಎಂದು ಬಾರ್ ಸಿಬಂದಿಗೆ ಹೇಳುತ್ತಲೇ ಖದೀಮರು ಓಟಕ್ಕೆ ಶುರು ಮಾಡಿದ್ದರು. ಆಗ ಬಾರ್ ಸಿಬಂದಿಯ ಕೈಗೆ ಒಬ್ಬ ಸಿಕ್ಕಿಬಿದ್ದರೆ, ಇತರ ಮೂವರು ಗುಡ್ಡದತ್ತ ಓಡಿ ಕತ್ತಲಲ್ಲಿ ತಪ್ಪಿಸಿಕೊಂಡಿದ್ದಾರೆ. ಮಿಲಿಟ್ರಿ ಅಶ್ರಫ್ ಇದ್ದಾನೆಂಬ ವಿಷಯ ತಿಳಿದ ಮಾರ್ನಬೈಲು ಪರಿಸರದ ಯುವಕರೆಲ್ಲ ಗುಡ್ಡದಲ್ಲಿ ಹುಡುಕಾಟ ನಡೆಸಿದ್ದು ರಾತ್ರಿಯೇ ಇತರ ಮೂವರನ್ನು ಹಿಡಿದಾಕಿದ್ದಾರೆ. ಬಂಟ್ವಾಳ ಠಾಣೆಯಲ್ಲಿ ಕೈದಿಗಳನ್ನು ಇರಿಸಿ ಪೊಲೀಸರು ಮತ್ತೊಮ್ಮೆ ಚಳಿ ಬಿಡಿಸಿದ್ದಲ್ಲದೆ, ಮತ್ತೆ ಮಂಗಳೂರಿನ ಜೈಲಿಗೆ ರವಾನೆ ಮಾಡಿದ್ದರು. 

ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಅಶ್ರಫ್

ಆನಂತರ, ಸೌಮ್ಯಾ ಭಟ್ ಪ್ರಕರಣ ಸಿಓಡಿ ತನಿಖೆಯಾಗಿ ಮಂಗಳೂರಿನ ಸೆಷನ್ಸ್ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಕೋರ್ಟಿನಲ್ಲಿ ತುರ್ತು ವಿಚಾರಣೆ ನಡೆದು ಕೇವಲ ಒಂದೂವರೆ ವರ್ಷದಲ್ಲಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಶ್ರಫ್ ಖುಲಾಸೆಗೊಂಡಿದ್ದ. ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿಲ್ಲದೇ ಇರುವುದು, ಸಾಂದರ್ಭಿಕ ಸಾಕ್ಷಿಗಳಿಂದ ಆರೋಪ ಸಾಬೀತು ಮಾಡಲು ಸಾಧ್ಯವಾಗದೇ ಇದ್ದುದರಿಂದ ಕೇಸ್ ಬಿದ್ದೋಗಿತ್ತು. ಅಂದಿನ ಕಾಲದಲ್ಲಿ ಈಗಿನಂತೆ ತಾಂತ್ರಿಕ ಸಾಕ್ಷ್ಯಕ್ಕಾಗಿ ಫಾರೆನ್ಸಿಕ್ ಪರೀಕ್ಷೆ ನಡೆಸುತ್ತಿರಲಿಲ್ಲ. ಉಗುರಿನಲ್ಲಿ ಸಿಕ್ಕಿಕೊಂಡ ಚರ್ಮ, ಇನ್ನಿತರ ರಕ್ತದ ಕಲೆಗಳು ಫಾರೆನ್ಸಿಕ್ ವರದಿಯಲ್ಲಿ ಬರುತ್ತಿದ್ದರೆ, ಕೇಸ್ ಅಷ್ಟು ಸುಲಭದಲ್ಲಿ ಬಿದ್ದು ಹೋಗುತ್ತಿರಲಿಲ್ಲ. ಆದರೆ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡರೂ, ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣ ಇದ್ದುದರಿಂದ ಮಿಲಿಟ್ರಿ ಅಶ್ರಫ್ ಜೈಲಿನಿಂದ ಹೊರಗೆ ಬಂದಿರಲಿಲ್ಲ.

ಕಳ್ಳನೋಟು ಜಾಲದ ಭಾಸ್ಕರ್ ನಾಯರ್ ನಂಟು

ಅದಾಗಲೇ ಎರಡು ವರ್ಷ ಜೈಲು ವಾಸ ಅನುಭವಿಸಿದ್ದ ಅಶ್ರಫ್ ಗೆ, ಅಲ್ಲಿ ಭಾಸ್ಕರನ್ ನಾಯರ್ ಎಂಬ ಕಳ್ಳನೋಟು ಜಾಲದ ಮಹಾ ಚಾಣಾಕ್ಷನೊಬ್ಬ ಪರಿಚಯ ಆಗಿದ್ದ. ಭಾಸ್ಕರ್ ನಾಯರ್ ಎಷ್ಟು ಕತರ್ನಾಕ್ ಆಗಿದ್ದಂದ್ರೆ, ಕೇರಳ, ತಮಿಳುನಾಡಿನಲ್ಲಿ ಆತನ ವಿರುದ್ಧ ಒಂದೂವರೆ ಸಾವಿರಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದವು. 1982ರಲ್ಲಿ ಚಿಕ್ಕಮಗಳೂರಿನಲ್ಲಿ ಖೋಟಾ ನೋಟು ಜಾಲದಲ್ಲಿ ಸಿಕ್ಕಿಬಿದ್ದು ಅಲ್ಲಿನ ಜೈಲಿನಿಂದಲೂ ತಪ್ಪಿಸಿಕೊಂಡಿದ್ದ ನಾಯರ್ ಹತ್ತು ವರ್ಷ ಕಾಲ ತಲೆಮರೆಸಿಕೊಂಡಿದ್ದ. ಬಳಿಕ 1994ರಲ್ಲಿ ಮಂಗಳೂರಿನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಜೈಲಿನ ಒಳಗೆ ಭಾಸ್ಕರ್ ನಾಯರ್ ಮತ್ತು ಮಿಲಿಟ್ರಿ ಅಶ್ರಫ್ ಸ್ನೇಹಿತರಾಗಿದ್ದರು.

ಭಾಸ್ಕರ್ ನಾಯರ್ ಇದಕ್ಕೂ ಹಿಂದೊಮ್ಮೆ ತಮಿಳುನಾಡಿನಲ್ಲಿ ಸಿಕ್ಕಿಬಿದ್ದು ಕೊಯಂಬತ್ತೂರು ಜೈಲಿನಲ್ಲಿದ್ದಾಗ ಜೈಲಿನ ಒಳಗಡೆ ಇದ್ದುಕೊಂಡೇ ಕಳ್ಳನೋಟುಗಳನ್ನು ಪ್ರಿಂಟ್ ಮಾಡಿಸುತ್ತಿದ್ನಂತೆ. ಅಷ್ಟು ಚಾಣಾಕ್ಷ ಮತ್ತು ಪ್ರಭಾವಿಯಾಗಿದ್ದರಿಂದ ಮಂಗಳೂರಿನಲ್ಲಿ ಜೈಲಿನಲ್ಲಿದ್ದರೂ ಆತನನ್ನು ಭೇಟಿಯಾಗಲು ಕೇರಳದಿಂದ ಹಲವಾರು ಮಂದಿ ಬರುತ್ತಿದ್ದರು. ಹಣಕಾಸು ನೆರವನ್ನೂ ಕೊಡುತ್ತಿದ್ದರಂತೆ. ಹೀಗಾಗಿ ಮಂಗಳೂರಿನ ಜೈಲು ಸಿಬಂದಿಗೂ ಗಿಂಬಳ ಕೊಡಿಸುತ್ತ ರಾಜಾರೋಷ ಜೀವನ ಮಾಡಿಕೊಂಡಿದ್ದ. ಈತನ ಕಾರುಬಾರು ಎಷ್ಟಿತ್ತು ಎಂದರೆ, 1999ರಲ್ಲಿ ಜೈಲಿನ ಸಿಬಂದಿಯನ್ನೇ ದೋಸ್ತಿ ಮಾಡ್ಕೊಂಡು, ತನಗೆ ಕಾರ್ಕಳದಲ್ಲಿ ಜಾಗ ಇದೆ, ಅದನ್ನು ಮಾರಾಟ ಮಾಡಲಿಕ್ಕಿದೆ. ಪಾರ್ಟಿಗೆ ಜಾಗ ತೋರಿಸಲು ಒಯ್ಯಬಹುದೇ ಎಂದು ಕೇಳಿಕೊಂಡಿದ್ದ. ಇಂತಿಷ್ಟು ಹಣ ಸಿಕ್ಕರೆ ಓಕೆ ಎಂದು ಹೇಳಿ ಕೈದಿಯಾಗಿದ್ದ ಭಾಸ್ಕರ್ ನಾಯರ್ ನನ್ನು ಜೈಲಿನ ಜೀಪಿನಲ್ಲೇ ಕಾರ್ಕಳಕ್ಕೆ ಕರೆದೊಯ್ದಿದ್ದರು. ಭಾಸ್ಕರ್ ನಾಯರ್ ತಪ್ಪಿಸಿಕೊಂಡು ಹೋಗಲು ಪ್ಲಾನ್ ಹಾಕಿದ್ದು ತಿಳಿಯುತ್ತಲೇ ನೇರವಾಗಿ ಜೀಪು ನಿಲ್ಲಿಸದೆ ರಿಟರ್ನ್ ಬಂದಿದ್ದರು.

ಎರಡನೇ ಬಾರಿಗೆ ಜೈಲ್ ಬ್ರೇಕ್ ಮಾಡಿ ನಾಪತ್ತೆ  

ಮಂಗಳೂರು ಹಳೇ ಜೈಲಿನ ಸಿಬಂದಿ ಎಷ್ಟು ದಂಡ ಪಿಂಡಗಳಾಗಿದ್ದರು ಅಂದ್ರೆ, ಮಿಲಿಟರಿ ಅಶ್ರಫ್ ಎರಡನೇ ಬಾರಿಗೆ ಅದೇ ಜೈಲ್ ಬ್ರೇಕ್ ಮಾಡಿದ್ದ. ಬೆಳಗ್ಗೆ ಎಂದಿನಂತೆ ಸೆಲ್ ನಿಂದ ಹೊರಬಂದಿದ್ದ ಭಾಸ್ಕರ್ ನಾಯರ್ ಮತ್ತು ಮಿಲಿಟ್ರಿ ಅಶ್ರಫ್ ನೇರವಾಗಿ ನಡೆದುಕೊಂಡೇ ಜೈಲಿನ ಮುಂಬಾಗಿಲಿನಿಂದಲೇ ಹೊರಗೆ ಬಂದು ತಪ್ಪಿಸಿಕೊಂಡಿದ್ದಾರೆ. ಹಾಗೆ ತಪ್ಪಿಸಿಕೊಂಡ ಈ ಇಬ್ಬರು ಆಸಾಮಿಗಳು ಈವರೆಗೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಅಂದರೆ, ಪೊಲೀಸರು ಕೂಡ ಅವರನ್ನು ಹಿಡಿಯಬೇಕೆಂದು ಕಾರ್ಯಾಚರಣೆ ನಡೆಸಿದ್ದೇ ಇಲ್ಲ. ಅಶ್ರಫ್ ಮತ್ತು ಭಾಸ್ಕರ್ ನಾಯರ್ ಇಬ್ಬರೂ ಕೇರಳದಲ್ಲಿಯೇ ಅವಿತುಕೊಂಡಿರುವ ಸಾಧ್ಯತೆ ಇದೆಯೆಂದು ಅಂದಿನ ಕಾಲದ ಕ್ರೈಮ್ ಸ್ಟೋರಿಯನ್ನು ಸ್ಮರಿಸಿದ್ದಾರೆ, ಮಂಗಳೂರಿನ ಹಿರಿಯ ಕ್ರೈಮ್ ಪತ್ರಕರ್ತ ಮೋಹನ್ ಬೋಳಂಗಡಿ.

ಇಷ್ಟಕ್ಕೂ ಮಿಲಿಟ್ರಿ ಅಶ್ರಫ್, ಸೌಮ್ಯಾ ಭಟ್ ಕೊಲೆ ನಡೆಸುವ ಹೊತ್ತಿಗೆ 22 ವರ್ಷದ ತರುಣ. ಎಸ್ಸೆಸ್ಸೆಲ್ಸಿ ಮುಗಿಸಿ ಆರ್ಮಿ ಸೇರಿ ಮೂರು ವರ್ಷ ಆಗಿದ್ದಷ್ಟೇ. ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದ ಅಶ್ರಫ್, ವಾರದ ಹಿಂದೆ ಮನೆ ಪಕ್ಕದ ಅಪ್ರಾಪ್ತ ಹುಡುಗಿಯೊಬ್ಬಳ ಮೇಲೆ ಕೈಮಾಡಿ ಪೊಲೀಸ್ ಕೇಸು ಆಗಿತ್ತು. ಆದರೆ ಮನೆಮಂದಿ ಆತ ಮಿಲಿಟರಿಯಲ್ಲಿದ್ದಾನೆ, ಕೇಸು ಮಾಡಬೇಡಿ. ಹಾಗೇನೂ ಮಾಡಿಲ್ಲ ಎಂದು ಗೋಗರೆದಿದ್ದರಿಂದ ಇನ್ಸ್ ಪೆಕ್ಟರ್ ಪಾಪಯ್ಯ ಪ್ರಕರಣ ದಾಖಲಿಸದೆ ಬಿಟ್ಟಿದ್ದರು. ಆದರೆ, ನಾಲ್ಕೇ ದಿನದಲ್ಲಿ ಮತ್ತೊಬ್ಬ ಮನೆ ಹತ್ತಿರದ ಗಣಪತಿ ಭಟ್ಟರ ಮಗಳ ಮೇಲೆ ಕಣ್ಣು ಹಾಕಿದ್ದ. ಆಗಸ್ಟ್ 7ರಂದು ಕೃತ್ಯ ನಡೆಸುವುದಕ್ಕೂ ಮುನ್ನ ಮನೆಗೆ ಬಂದಿದ್ದ ಅಶ್ರಫ್, ಮಗಳ ಬಗ್ಗೆ ವಿಚಾರಿಸಿದ್ದ. ಏನೋ ಕ್ಲಾಸ್ ಮೇಟ್ ಇರಬೇಕೆಂದು ಆಕೆ ಬಿಎಸ್ಸಿ ಓದುತ್ತಿದ್ದಾಳೆಂದು ನಿಜ ಹೇಳಿದ್ದರು. ಎರಡೇ ದಿನದಲ್ಲಿ ಅಶ್ರಫ್, ಸೌಮ್ಯಾಳನ್ನು ಹಿಂಬಾಲಿಸಿ ಬಂದು ಕೊಲೆ ಮಾಡಿದ್ದಾನೆ. ಆತನ ಉದ್ದೇಶ ಕಾಮತೃಷೆ ತೀರಿಸುವುದೇ ಆಗಿತ್ತು. ಆದರೆ, ಆಕೆ ಬಿಟ್ಟಿಲ್ಲ ಎಂದು ಚೂರಿ ತೋರಿಸಿ ಬೆದರಿಸಲು ಯತ್ನಿಸಿದ್ದಾನೆ. ಅದಕ್ಕೂ ಬೆದರದಿದ್ದಾಗ ಚೂರಿಯಿಂದ ತಿವಿದು ಕೊಂದು ಹಾಕಿದ್ದ. ಸರಿಯಾಗಿ 26 ವರ್ಷಗಳ ಹಿಂದೆ ನಡೆದಿದ್ದ ಘಟನೆ ಸೌಜನ್ಯಾ ಪರ ಹೋರಾಟದ ಕಾವು ಏರಿರುವಾಗಲೇ ಮತ್ತೆ ಕರಾವಳಿ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Puttur Soumya Bhat rape and murder case 26 years ago, exclusive story by Headline Karnataka. Whereabouts of Ashraf, accused in the murder case of Vadya Soumya Bhat, who was brutally raped and murdered 26 years ago, are still not known. He had escaped from the custody of police. Ashraf heinously murdered Sowmya, who was final year BSc student of Puttur Vivekananda College.