ಪುತ್ತೂರಿನಲ್ಲಿ ಹತ್ತಕ್ಕೂ ಅಧಿಕ ಸಾಕು ನಾಯಿಗಳ ಮಾರಣಹೋಮ ; ಚೀಲದಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋದ ದುಷ್ಕರ್ಮಿಗಳು, ಪೊಲೀಸರಿಗೆ ದೂರು !

08-08-23 11:07 pm       Mangalore Correspondent   ಕರಾವಳಿ

ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಅಡೆಂಚಿನಡ್ಕ- ಕುಂಟ್ಯಾನ ರಸ್ತೆಯಲ್ಲಿ ಸದಾಶಿವ ಕಾಲೊನಿ ಪರಿಸರದಲ್ಲಿ ಸುಮಾರು ಹತ್ತಕ್ಕಿಂತಲೂ ಅಧಿಕ ಸಾಕು ನಾಯಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿ ಬಿಸಾಡಲಾಗಿದೆ.

ಪುತ್ತೂರು, ಆಗಸ್ಟ್ 8: ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಅಡೆಂಚಿನಡ್ಕ- ಕುಂಟ್ಯಾನ ರಸ್ತೆಯಲ್ಲಿ ಸದಾಶಿವ ಕಾಲೊನಿ ಪರಿಸರದಲ್ಲಿ ಸುಮಾರು ಹತ್ತಕ್ಕಿಂತಲೂ ಅಧಿಕ ಸಾಕು ನಾಯಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿ ಬಿಸಾಡಲಾಗಿದೆ.

ಅಡೆಂಚಿನಡ್ಕ, ಕುಂಟ್ಯಾನ, ಸದಾಶಿವ ಕಾಲೋನಿಯಲ್ಲಿನ ನಿವಾಸಿಗಳು ಸಾಕಿರುವ ನಾಯಿಗಳೇ ಇವಾಗಿದ್ದು, ಇವುಗಳು ಸಾಮಾನ್ಯವಾಗಿ ಹೊರಗಡೆ ಅಡ್ಡಾಡುವಾಗ, ಅವುಗಳಿಗೆ ಸಾಮೂಹಿಕವಾಗಿ ಊಟ ನೀಡಲಾಗಿದೆ. ಅವುಗಳಿಗೆ ನೀಡಲಾಗಿದ್ದ ನೀರಿನಲ್ಲೋ ಅಥವಾ ಊಟದಲ್ಲೋ ವಿಷವಿಕ್ಕಿ ಯಾರೋ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ ಎಂಬ ಊಹೆ ವ್ಯಕ್ತವಾಗಿದೆ.

ಈ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ಸಾಕು ನಾಯಿಗಳ ಮಾರಣ ಹೋಮ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರಾದ ರಾಜೇಶ್‌ ಬನ್ನೂರು ಮತ್ತು ಶಶಿಧರ ವಿ.ಎನ್‌. ಪುತ್ತೂರು ಸಹಾಯಕ ಆಯುಕ್ತರು ಹಾಗೂ ಪುತ್ತೂರು ನಗರ ಪೊಲೀಸ್‌ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.

ರಸ್ತೆ ಬದಿಯ ಪೊದೆಗಳಲ್ಲಿ ಹತ್ತಕ್ಕೂ ಅಧಿಕ ನಾಯಿಗಳ ಕಳೇಬರಗಳು ಪತ್ತೆಯಾಗಿವೆ. ವಿಷ ಪ್ರಾಶನ ಮಾಡಿಸಿ ಸಾಮೂಹಿಕ ಹತ್ಯೆ ಮಾಡಿರಬಹುದೆಂಬ ಅನುಮಾನ ಕಾಡುತ್ತಿದೆ. 1960ರ ಸಾಕುಪ್ರಾಣಿಗಳ ಸಂರಕ್ಷಣಾ ಕಾಯಿದೆಯ ಪ್ರಕಾರ ಸಾಕು ಪ್ರಾಣಿಗಳನ್ನು ವಧೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಪೊಲೀಸ್‌ ಇಲಾಖೆ ಪ್ರಕರಣ ದಾಖಲಿಸಿಕೊಂಡು ನಾಯಿಗಳನ್ನು ಸಾಮೂಹಿಕ ಹತ್ಯೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸತ್ತ ನಾಯಿಗಳ ಮರಣೋತ್ತರ ಶವ ಪರೀಕ್ಷೆ ನಡೆಸಿ ಸಾವಿನ ಕಾರಣ ತಿಳಿದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇವು ಹೀಗೆ ಗುಂಪಾಗಿ ಓಡಾಡುತ್ತಿರುವಾಗಲೇ ಯಾರೋ ಇವುಗಳನ್ನು ಕರೆದು ಊಟವಿಟ್ಟಂತೆ ಮಾಡಿ ವಿಷಹಾಕಿದ್ದಾರೆ. ಆನಂತರ ಅವುಗಳನ್ನು ಕಾಲುಗಳನ್ನು ಕಟ್ಟಿ ಬ್ಯಾಗ್ ಗಳಲ್ಲಿ ತುಂಬಿ ಅಂಡೆಂಚಿಲಡ್ಕ ರಸ್ತೆಯ ಪಕ್ಕದಲ್ಲಿರುವ ಪೊದೆಗಳಲ್ಲಿ ಎಸೆದು ಹೋಗಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಎಲ್ಲರ ಅನುಮಾನವಾಗಿದೆ. ಕೆಲವರು ಈ ನಾಯಿಗಳಿಗೆ ನಿಗೂಢ ರೋಗ ಕಾಣಿಸಿಕೊಂಡಿದ್ದು, ಆ ಕಾರಣದಿಂದಾಗಿಯೇ ಅವುಗಳನ್ನು ಕೊಂದಿರಬಹುದು ಎಂದು ಕೆಲವರು ಅನುಮಾನಿಸಿದ್ದಾರೆ. ಸೂಕ್ತ ತನಿಖೆಯಿಂದಲೇ ಇದರ ಹಿಂದಿನ ಸತ್ಯ ಹೊರಬೀಳಲಿದೆ.

ಎರಡು ದಿನಗಳ ಹಿಂದೆ ಈ ಶ್ವಾನಗಳು ಏಕಾಏಕಿ ಮಾಯವಾಗಿದ್ದವು. ಹಾಗಾಗಿ, ಈ ನಾಯಿಗಳನ್ನು ಸಾಕಿದ್ದವರು ಇವುಗಳ ಬರುವಿಕೆಗೆ ಒಂದು ದಿನ ಕಾಯ್ದು ಆನಂತರ ಹುಡುಕಾಟ ನಡೆಸಿದ್ದರು. ಆದರೆ, ಆ. 6ರಂದು ರಸ್ತೆ ಬದಿಯಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಆ ಪೊದೆಗಳ ಬಳಿ ಹೋದಾಗ ನಾಯಿಗಳ ಶವ ಸಿಕ್ಕಿವೆ ಎಂದು ಹೇಳಲಾಗಿದೆ.

More than 10 breed dogs killed, throw at road side at Puttur. A case has been regsitered at Puttur Police Station.