ಅಧಿಕಾರಿಗಳಿಂದಲೇ ರಾಜ್ಯಪಾಲರಿಗೆ ಕಮಿಷನ್ ದೂರು ;  ಕಾಂಗ್ರೆಸಿನದ್ದು ಈಗ ಎಷ್ಟು ಪರ್ಸೆಂಟ್ ಸರಕಾರ ? ಶಾಸಕ ಕಾಮತ್ ಪ್ರಶ್ನೆ 

09-08-23 11:51 am       Mangalore Correspondent   ಕರಾವಳಿ

ರಾಜ್ಯದ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ಅಧಿಕೃತವಾಗಿ ರಾಜ್ಯಪಾಲರಿಗೆ ಲಿಖಿತವಾಗಿ ದೂರು ನೀಡಿದ್ದು, ಇದು ರಾಜ್ಯ ಸರಕಾರದ ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಮಂಗಳೂರು, ಆಗಸ್ಟ್ 9: ರಾಜ್ಯದ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಅಧಿಕಾರಿಗಳು ಅಧಿಕೃತವಾಗಿ ರಾಜ್ಯಪಾಲರಿಗೆ ಲಿಖಿತವಾಗಿ ದೂರು ನೀಡಿದ್ದು, ಇದು ರಾಜ್ಯ ಸರಕಾರದ ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಚೆಲುವರಾಯಸ್ವಾಮಿ 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಜಿಲ್ಲೆಯ ಏಳು ಸಹಾಯಕ ಕೃಷಿ ಅಧಿಕಾರಿಗಳು, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಲ್ಲಿಂದ ನಾವು ಮಾಡುತ್ತಿದ್ದ ಭ್ರಷ್ಟಾಚಾರ ಆರೋಪವನ್ನು ಅಲ್ಲಗೆಳೆಯುತ್ತಿದ್ದ ಕಾಂಗ್ರೆಸ್ ಸರಕಾರ ಈಗ ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ. 

Graft charges, Cheluvarayaswamy terms letter as fake | Cheluvarayaswamy:  ತನ್ನ ವಿರುದ್ಧ ರಾಜ್ಯಪಾಲರಿಗೆ ದೂರು ಯೋಜಿತ ಸಂಚಿನ ಭಾಗ, ನಕಲಿ ವ್ಯಕ್ತಿಗಳ ಕೃತ್ಯ ; ಸಚಿವ  ಚೆಲುವರಾಯಸ್ವಾಮಿ ...

ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೂಲಕ 40 % ಕಮಿಷನ್ ಆರೋಪ ಮಾಡಲಾಗಿತ್ತು. ಈ ಬಗ್ಗೆ ಅಧಿಕೃತವಾಗಿ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಆಗ ಮುಖ್ಯಮಂತ್ರಿಯೇ ಸೂಚನೆ ನೀಡಿದ್ದರೂ ಕಾಂಗ್ರೆಸ್ ನಾಯಕರು ಯಾವುದೇ ದೂರು ನೀಡಿರಲಿಲ್ಲ. ಹಾಗಿದ್ದರೂ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಹೋದಲ್ಲೆಲ್ಲ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದರು. ಪೇ ಸಿಎಂ ಎಂಬ ಅಭಿಯಾನವನ್ನೂ ಮಾಡಿ ಎಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸಿದ್ದರು. ಅಂದು ಬೊಬ್ಬೆ ಹೊಡೆದ ಕಾಂಗ್ರೆಸ್ ಈಗ ಅಧಿಕಾರಿಗಳೇ ದೂರು ನೀಡಿರುವ ಪ್ರಕರಣಕ್ಕೆ ಉತ್ತರ ನೀಡಬೇಕು.

ಸಾರಿಗೆ ಇಲಾಖೆಯ ನೌಕರನ ಆತ್ಮಹತ್ಯೆ ಯತ್ನ ಪ್ರಕರಣವೂ ಇದೇ ಮಾದರಿಯ ಕಿರುಕುಳದಿಂದ ಆಗಿರುವುದು ಕಂಡುಬರುತ್ತಿದೆ. ಆ ಘಟನೆಯಲ್ಲೂ ಇದೇ ಸಚಿವರ ವಿರುದ್ಧ ಆರೋಪ ಕೇಳಿಬಂದಿತ್ತು. ಆದರೆ ಇಡೀ ಸರಕಾರವೇ ಸಚಿವರ ಪರವಾಗಿ ನಿಂತು ಮಾತನಾಡಿತ್ತು. ಈಗ ಈ ಪ್ರಕರಣದಲ್ಲೂ ಅವರ ಪರ ವಕಾಲತ್ತು ನಡೆಸಿದರೆ ಅದರಲ್ಲೇನೂ ಅಚ್ಚರಿ ಇಲ್ಲ. ಭ್ರಷ್ಟಾಚಾರವನ್ನು ಸಹಿಸಲ್ಲ ಎಂದು ಅಧಿಕಾರಕ್ಕೆ ಬಂದಲ್ಲಿಂದ ಹೋದಲ್ಲೆಲ್ಲ ಹೇಳುತ್ತಿರುವ ಮುಖ್ಯಮಂತ್ರಿಗೆ ತಮ್ಮ ಕಾಲ ಬುಡದಲ್ಲೇ ಭ್ರಷ್ಟಾಚಾರ ನಡೆಯುತ್ತಿರುವುದು ಕಾಣಿಸುತ್ತಿಲ್ಲವೇ ? 

ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರವೇ ಮುಂದೆ ನಿಂತಿದ್ದು, ಉಡುಪಿ ವಿಡಿಯೋ ರೆಕಾರ್ಡಿಂಗ್ ಪ್ರಕರಣದಂತೆ ಕಾಟಾಚಾರಕ್ಕೆ ಸಮಿತಿಯೊಂದನ್ನು ರಚಿಸಿ ಈ ಪತ್ರವೇ ನಕಲಿ ಎಂದು ಬಿಂಬಿಸಲು ಶತ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಕಾಮತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Karnataka polls: No Modi factor, expect Muslims to back Congress, says  Siddaramaiah- The New Indian Express

ವರ್ಗಾವಣೆಯಲ್ಲೂ ಭ್ರಷ್ಟಾಚಾರ 

ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಲ್ಲಿಂದ ವರ್ಗಾವಣೆ ದಂಧೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರತಿನಿತ್ಯ ಒಂದಲ್ಲ ಒಂದು ಇಲಾಖೆಯ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬೀಳುತ್ತಿದೆ. ಇವೆಲ್ಲದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಅನುಮಾನಗಳಿವೆ. ಆದ್ದರಿಂದ ಸಚಿವ ಚೆಲುವರಾಯಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸೇರಿದಂತೆ ಎಲ್ಲ ವರ್ಗಾವಣೆ ದಂಧೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.

ಅಬ್ಬಕ್ಕ, ಅಗ್ನಿವೀರ ತರಬೇತಿ ಕೇಂದ್ರದ ಹಾಸ್ಟೆಲ್ ಸ್ಥಗಿತ 

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಸಲ್ಪಡುತ್ತಿರುವ ಕದ್ರಿಯಲ್ಲಿರುವ ರಾಣಿ ಅಬ್ಬಕ್ಕ, ಅಗ್ನಿವೀರ ತರಬೇತಿ ಕೇಂದ್ರದ ಹಾಸ್ಟೆಲ್ ನ್ನು ಅನುದಾನದ ಕೊರತೆಯ ನೆಪದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಹಾಸ್ಟೆಲಿನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರಿಗೆ ಕಳೆದ 3-4 ತಿಂಗಳಿನಿಂದ ವೇತನ ನೀಡಿಲ್ಲ. ಕೇಂದ್ರ ಸರಕಾರದ‌ ಅಗ್ನಿವೀರ್ ಯೋಜನೆಯನ್ನು ವಿಫಲಗೊಳಿಸಲು ರಾಜ್ಯ ಸರಕಾರ ಇಂತಹ ಕೆಲಸ ಮಾಡುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. 

Wenlock District Hospital - Wikipedia

ವೆನ್ಲಾಕ್ ಡಯಾಲಿಸಿಸ್ ಕೇಂದ್ರ ಅವ್ಯವಸ್ಥೆ 

ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ವಿಚಾರದಲ್ಲಿ ಗಮನ ಹರಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಗಾಢ ನಿದ್ರೆಗೆ ಜಾರಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ 21 ಡಯಾಲಿಸಿಸ್ ಯಂತ್ರಗಳಿದ್ದು ಇದರಲ್ಲಿ 12 ಯಂತ್ರಗಳು ಹಾಳಾಗಿವೆ. ವೆನ್ಲಾಕ್ ಆಸ್ಪತ್ರೆಯಲ್ಲಿ 90ಕ್ಕೂ ಅಧಿಕ ಹೊರ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು ಯಂತ್ರಗಳನ್ನು ತ್ವರಿತವಾಗಿ ದುರಸ್ತಿ ಮಾಡುವ ಅವಶ್ಯಕತೆಯಿದೆ. ಸರಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ಬರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕುರಿತು ಸರಕಾರ ಗಮನ ಹರಿಸಬೇಕಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಉಂಟಾದ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು ಆರೋಗ್ಯ ಸಚಿವರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ. ‌

The agriculture officials have officially lodged a written complaint with the governor against state agriculture minister Cheluvarayaswamy, which is a mirror to the corrupt administrative system of the state government. Seven assistant agriculture officers of mandya district have written to the governor alleging that Cheluvarayaswamy, who is also the minister in-charge of Mandya district, had demanded a bribe of Rs 6 to 8 lakh.