150 MBBS admissions seats illegal at GR Medical College in Mangalore: ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜು ಹೆಸರಲ್ಲಿ 150 ಸೀಟು ಎಂಬಿಬಿಎಸ್ ಸೀಟು ಅಕ್ರಮ ; ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!!  ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರಕ್ಕೆ ಸೂಚನೆ 

09-08-23 01:31 pm       Mangalore Correspondent   ಕರಾವಳಿ

ನಗರದ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಹೊಸತಾಗಿ ಆರಂಭಗೊಂಡ ಜಿಆರ್ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರಿನಲ್ಲಿ ಸರ್ಕಾರದ ಅನುಮತಿ ಇಲ್ಲದೆಯೂ 150 ಮಂದಿಗೆ ಎಂಬಿಬಿಎಸ್ ಸೀಟು ನೀಡಲಾಗಿದ್ದು ಈ ರೀತಿಯ ನಡೆ ಅಕ್ರಮ ಮತ್ತು ಕಾನೂನುಬಾಹಿರ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ.

ಮಂಗಳೂರು, ಆಗಸ್ಟ್ 9: ನಗರದ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಹೊಸತಾಗಿ ಆರಂಭಗೊಂಡ ಜಿಆರ್ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸೆಂಟರಿನಲ್ಲಿ ಸರ್ಕಾರದ ಅನುಮತಿ ಇಲ್ಲದೆಯೂ 150 ಮಂದಿಗೆ ಎಂಬಿಬಿಎಸ್ ಸೀಟು ನೀಡಲಾಗಿದ್ದು ಈ ರೀತಿಯ ನಡೆ ಅಕ್ರಮ ಮತ್ತು ಕಾನೂನುಬಾಹಿರ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೇಳಿದೆ. ಇದರಿಂದಾಗಿ ಈ ಕಾಲೇಜಿನಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. 

ಮಂಗಳೂರಿನ ಜಿ.ಆರ್ ಮೆಡಿಕಲ್ ಕಾಲೇಜಿನಲ್ಲಿ 2022-23ನೇ ಸಾಲಿನಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದ್ದು ಇದು ಕಾನೂನುಬಾಹಿರ ಕ್ರಮ. ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಕಾರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 2021-22ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೆಡಿಕಲ್ ಅಸೆಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್(ಎಂಎಆರ್ ಬಿ) ಅಧಿಕಾರಿಗಳು, 150 ಸೀಟುಗಳ ಸಾಮರ್ಥ್ಯದೊಂದಿಗೆ ಕಾಲೇಜು ಆರಂಭಿಸಲು ಜಿ.ಆರ್. ಮೆಡಿಕಲ್ ಕಾಲೇಜು ಹೆಸರಲ್ಲಿ ಅನುಮತಿ ನೀಡಿದ್ದರು. ಆನಂತರ 2022ರ ಸೆಪ್ಟೆಂಬರ್ 5 ಮತ್ತು 6ರಂದು ಕಾಲೇಜಿನ ಮಾನ್ಯತೆ ಬಗ್ಗೆ ಪರಿಶೀಲನೆ ನಡೆಸಲು ಎಂಎಆರ್ ಬಿ ತಂಡದ ಸದಸ್ಯರು ಕಾಲೇಜು ಕ್ಯಾಂಪಸಿಗೆ ಭೇಟಿ ನೀಡಿದ್ದಾಗ, ನುರಿತ ಸಿಬಂದಿ ಮತ್ತು ರಿಸರ್ಚ್ ಸೆಂಟರಿನಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಎರಡನೇ ಬ್ಯಾಚ್ ಮುಂದುವರಿಸಲು ಕಾಲೇಜಿಗೆ ಅವಕಾಶ ನೀಡಿರಲಿಲ್ಲ. ಹಾಗಿದ್ದರೂ, ಕಾಲೇಜಿನ ಆಡಳಿತವು 2022-23ರಲ್ಲಿ 2ನೇ ಬ್ಯಾಚ್ ನಲ್ಲಿ ಮತ್ತೆ 150 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕಾನೂನು ಬಾಹಿರವಾಗಿ ಅಡ್ಮಿಶನ್ ಮಾಡಿಕೊಂಡಿತ್ತು. ಆಮೂಲಕ ಕೋಟ್ಯಂತರ ರೂಪಾಯಿ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿತ್ತು. 

ಆದಾಗ್ಯೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಎರಡು ಬಾರಿ ಸೂಚನೆ ನೀಡಲಾಗಿತ್ತು. ಆದರೆ ಇಲಾಖೆಯಿಂದ ಯಾವುದೇ ಸ್ಪಂದನೆ ಲಭಿಸಿಲ್ಲ. ಈಗ ರಾಜ್ಯ ಸರ್ಕಾರ, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಪತ್ರದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೇಳಿಕೊಂಡಿದೆ. ಅಲ್ಲದೆ, 2023-24ರಲ್ಲಿ ಕಾಲೇಜಿನಲ್ಲಿ ಹೊಸತಾಗಿ ಪ್ರವೇಶಾತಿ ಮಾಡುವುದಕ್ಕೆ ಅನುಮತಿ ನೀಡಲಾಗಿಲ್ಲ ಎಂದು ಹೇಳಿದೆ. ಆದರೆ ಕಾಲೇಜಿನ ವಕ್ತಾರರು ಈ ಬಗ್ಗೆ ನಾವು ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದೇವೆ. ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ಪ್ರವೇಶ ಪ್ರಕ್ರಿಯೆ ಮಾಡಿಕೊಂಡಿದ್ದೇವೆ. ಇದರಿಂದಾಗಿ ಅಕ್ರಮ ಎಂದು ಹೇಳಲು ಆಗುವುದಿಲ್ಲ. ಈ ಬಗ್ಗೆ ರಾಷ್ಟ್ರೀಯ ಆಯೋಗಕ್ಕೆ ಅನುಮತಿ ರದ್ದು ನಿರ್ಣಯವನ್ನು ಪುನರ್ ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಕೆಇಎ ಕಡೆಯಿಂದ ಎಕ್ಸಿಕ್ಯುಟಿವ್ ಡೈರೆಕ್ಟರ್ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದು ನಾವು ಸರ್ಕಾರದ ಮಾರ್ಗಸೂಚಿಯಂತೆ ಸೀಟ್ ಅಲಾಟ್ ಮಾಡಿದ್ದೇವೆ. ಎಲ್ಲ ಕಾಲೇಜುಗಳಿಗೂ ಅಗತ್ಯ ಪರವಾನಗಿ ಇದೆಯೇ ಎಂದು ಪರಿಶೀಲಿಸುವುದು ನಮ್ಮ ಡ್ಯೂಟಿಯಲ್ಲ. ಸರ್ಕಾರದ ಸೀಟ್ ಮ್ಯಾಟ್ರಿಕ್ಸ್ ಏನಿದೆ ಅದರ ಪ್ರಕಾರ ಸೀಟು ಅಲಾಟ್ ಮಾಡುತ್ತೇವೆ ಎಂದಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಡೈರೆಕ್ಟರ್ ಸುಜಾತಾ ರಾಠೋಡ್, ತಮಗೆ ಕಾಲೇಜಿನ ಅನುಮತಿ ರದ್ದಾಗಿರುವ ಮಾಹಿತಿಯೇ ಇರಲಿಲ್ಲ. ವೈದ್ಯಕೀಯ ಆಯೋಗದಿಂದ ಕಳೆದ ವರ್ಷ ಯಾವುದೇ ಮಾಹಿತಿ ನೀಡಿರಲಿಲ್ಲ. ವೆಬ್ ಸೈಟ್ ನಲ್ಲಿಯೂ ಕಾಲೇಜು ಲಿಸ್ಟ್ ನಲ್ಲಿ ಉಲ್ಲೇಖ ಮಾಡಿರಲಿಲ್ಲ. ಹಾಗಾಗಿ 2022-23ರಲ್ಲಿ ಸೀಟ್ ಅಲಾಟ್ ಮಾಡಲಾಗಿತ್ತು. ಅಲ್ಲದೆ, ಈ ವಿಚಾರದ ಬಗ್ಗೆ ಕಾಲೇಜು ಕ್ಯಾಂಪಸ್ ತೆರಳಿ ಪರಿಶೀಲನೆ ನಡೆಸಲು ನಮಗೆ ಟೈಮ್ ಸಿಕ್ಕಿರಲಿಲ್ಲ. ನಾವು ಸೀಟ್ ಮ್ಯಾಟ್ರಿಕ್ಸ್ ಮಾಡುವುದರಲ್ಲಿ ಬಿಝಿಯಾಗಿದ್ದೆವು. ಈ ವರ್ಷ ಜಿ.ಆರ್ ಮೆಡಿಕಲ್ ಕಾಲೇಜನ್ನು ಸೀಟ್ ಮ್ಯಾಟ್ರಿಕ್ಸ್ ನಿಂದ ಹೊರಗಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

150 MBBS students admissions seats illegal at GR Medical College at Neermarga in Mangalore. About 150 MBBS students admitted to GR Medical College, Mangaluru, in 2022-23 face an uncertain future as the National Medical Commission (NMC) has said their admissions were “illegal and arbitrary”.