Udupi College Video case, CID: ಉಡುಪಿ ವಿಡಿಯೋ ಕೇಸ್ ; ಕಾಲೇಜಿಗೆ ಸಿಐಡಿ ಎಸ್‌ಪಿ ಭೇಟಿ, ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ದಾಖಲು

09-08-23 10:21 pm       Udupi Correspondent   ಕರಾವಳಿ

ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಪ್ರಕರಣ ತನಿಖೆಗಾಗಿ ನಗರದ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿಗೆ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಉಡುಪಿ, ಆಗಸ್ಟ್ 9: ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಪ್ರಕರಣ ತನಿಖೆಗಾಗಿ ನಗರದ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿಗೆ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜುಲೈ 18ರಂದು ನಡೆದ ಘಟನೆಯ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ, ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿಯ ಹೇಳಿಕೆಗಳನ್ನು ಸಿಐಡಿ ತಂಡ ದಾಖಲಿಸಿಕೊಂಡಿದೆ.

ಸಿಐಡಿ ತನಿಖೆ ವೇಳೆ ಕಾಣಿಸಿಕೊಂಡ ಪ್ಲ್ಯಾಸ್ಟಿಕ್ ಗೊಂಬೆ ಗಮನ ಸೆಳೆಯಿತು. ಕಾಲೇಜಿಗೆ ಗೊಂಬೆಯನ್ನು ತಂದು ಪ್ರಕರಣವನ್ನು ಸಿಐಡಿ ತಂಡ ಮರು ಸೃಷ್ಟಿ ಮಾಡಿತು. ಘಟನೆ ನಡೆದ ಶೌಚಾಲಯ, ಕಾಲೇಜಿನ ವರಾಂಡಾದಲ್ಲಿ ಮಹಜರು ಪ್ರಕ್ರಿಯೆ ನಡೆಸಲು ಗೊಂಬೆಯನ್ನು ಬಳಸಿಕೊಳ್ಳಲಾಯಿತು. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿ ಅಂಜುಮಾಲಾ, ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿ ತನಿಖಾ ಪ್ರಕ್ರಿಯೆ ನಡೆಯಿತು.

ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ ಮಾಡಿತ್ತು. ಹೀಗಾಗಿ ಉನ್ನತ ಮಟ್ಟದ ತನಿಖೆಗೆ ಸಿಐಡಿ ತಂಡ ನಗರಕ್ಕೆ ಭೇಟಿ ನೀಡಿದೆ.

ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನ ದ್ವಿತೀಯ ಪಿಯುಸಿಯ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿಯ ಹಿಂದು ವಿದ್ಯಾರ್ಥಿನಿಯೊಬ್ಬಳ ಟಾಯ್ಲೆಟ್‌ ಬಳಕೆಯ ದೃಶ್ಯವನ್ನು  ಚಿತ್ರೀಕರಿಸಿಕೊಂಡಿದ್ದಾರೆ ಎಂಬ ವಿವಾದ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ

Udupi college video case, CID inspector visits college, speaks to victim students.