Kota Srinivas Poojary in Mangalore: ಅಧಿಕಾರಿಗಳಿಂದಲೇ ಶಾಸಕರ ಹಕ್ಕುಚ್ಯುತಿ, ದಬ್ಬಾಳಿಕೆ, ಆಡಳಿತದ ಅರಾಜಕತೆ ; 14ರಂದು ಬಿಜೆಪಿ ಶಾಸಕರ ಪ್ರತಿಭಟನೆ

10-08-23 08:09 pm       Mangalore Correspondent   ಕರಾವಳಿ

ಶಾಸಕರಿಗೆ ಕೆಲಸ ಮಾಡಲು ಬಿಡದೆ, ಅಗೌರವ ತೋರುವ ಕೃತ್ಯ ಕರಾವಳಿ ಜಿಲ್ಲೆಗಳ ಇತಿಹಾಸದಲ್ಲಿ ಆಗಿಲ್ಲ. 200 ಜನ ಪೊಲೀಸರನ್ನು ನಿಯೋಜಿಸಿ ಶಾಸಕರನ್ನು ಗ್ರಾಪಂ ಕಚೇರಿಗೆ ಹೋಗದಂತೆ ತಡೆಯುವುದು ಆಡಳಿತದ ಅರಾಜಕತೆಯಾಗಿದೆ.

ಮಂಗಳೂರು, ಆಗಸ್ಟ್ 10: ಶಾಸಕರಿಗೆ ಕೆಲಸ ಮಾಡಲು ಬಿಡದೆ, ಅಗೌರವ ತೋರುವ ಕೃತ್ಯ ಕರಾವಳಿ ಜಿಲ್ಲೆಗಳ ಇತಿಹಾಸದಲ್ಲಿ ಆಗಿಲ್ಲ. 200 ಜನ ಪೊಲೀಸರನ್ನು ನಿಯೋಜಿಸಿ ಶಾಸಕರನ್ನು ಗ್ರಾಪಂ ಕಚೇರಿಗೆ ಹೋಗದಂತೆ ತಡೆಯುವುದು ಆಡಳಿತದ ಅರಾಜಕತೆಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಿಗಳ ಮೂಲಕ ನಡೆಸುತ್ತಿರುವ ದಬ್ಬಾಳಿಕೆಯನ್ನು ನಾವು ಒಕ್ಕೊರಳ ಧ್ವನಿಯಲ್ಲಿ ಖಂಡಿಸುತ್ತೇವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶಾಸಕರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ನಾವು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ. ಮೂರು ದಿನದೊಳಗೆ ಅಮಾನತು ಮಾಡಿರುವ ಇಬ್ಬರು ಅಧಿಕಾರಿಗಳನ್ನು ಮತ್ತೆ ಕರ್ತವ್ಯಕ್ಕೆ ನಿಯೋಜಿಸಬೇಕು. ಶಾಸಕರ ಕರ್ತವ್ಯಕ್ಕೆ ತಡೆಯೊಡ್ಡುವ ನಡೆಯನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಆಗಸ್ಟ್ 14ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಎದುರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಇತ್ತೀಚೆಗೆ ಜುಲೈ 31ರಂದು ಇರುವೈಲು ಗ್ರಾಪಂ ವ್ಯಾಪ್ತಿಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹಾಕಿಲ್ಲವೆಂದು ಪಿಡಿಓ ಮತ್ತು ತಾಲೂಕು ಇಓ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಮುಖ್ಯಮಂತ್ರಿ ಮಂಗಳೂರಿಗೆ ಬಂದಿದ್ದಾಗ ಅವರ ಗಮನಕ್ಕೆ ತಂದಿದ್ದು, ತನಿಖೆ ನಡೆಸುವ ಭರವಸೆ ನೀಡಿದ್ದರೂ, ಅಮಾನತು ಹಿಂಪಡೆಯುವ ಕೆಲಸ ಆಗಿಲ್ಲ. ಜಿಲ್ಲಾಧಿಕಾರಿ ಸೂಚಿಸಿದ ಪ್ರೋಟೋಕಾಲ್ ಪ್ರಕಾರವೇ ಆಮಂತ್ರಣ ಪತ್ರಿಕೆ ರೆಡಿ ಮಾಡಲಾಗಿತ್ತು. ಅಲ್ಲದೆ, ಗ್ರಾಪಂ ಕಚೇರಿಗೆ ತೆರಳಿದ ಸಂದರ್ಭದಲ್ಲಿ 200 ಮಂದಿಯಷ್ಟು ಪೊಲೀಸರನ್ನು ನಿಯೋಜಿಸಿ ಅಡ್ಡಹಾಕುವ ಪ್ರಯತ್ನ ನಡೆದಿತ್ತು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತನ್ನ ಕ್ಷೇತ್ರ ವ್ಯಾಪ್ತಿಯ ಇರ್ವತ್ತೂರು ಗ್ರಾಪಂನಲ್ಲಿ ಆಗಸ್ಟ್ 4ರಂದು ಆಯೋಜಿಸಿದ್ದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರು ಮೇಲೆ- ಕೆಳಗೆ ಆಗಿದೆಯೆಂಬ ಕ್ಷುಲ್ಲಕ ಕಾರಣವೊಡ್ಡಿ ಶಾಸಕರ ಗಮನಕ್ಕೆ ತರದೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮವನ್ನೇ ರದ್ದುಪಡಿಸಿದ್ದಾರೆ. ಇದು ಯಾವ ರೀತಿಯ ನ್ಯಾಯ. ಅಧಿಕಾರಿಗಳು ಶಾಸಕರ ಹಕ್ಕುಚ್ಯುತಿ ಮಾಡುತ್ತಿದ್ದಾರೆ ಎಂದರು.

ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಬುದ್ಧಿ ಹೇಳುವ ಸ್ಥಾನದಲ್ಲಿರುವ ಸ್ಪೀಕರ್ ಅಸಹಾಯಕರಾಗಿದ್ದಾರೆ. ಶಾಸಕರ ಹಕ್ಕುಚ್ಯುತಿಯನ್ನು ಸದನದಲ್ಲಿಯೇ ಮಾಡಬೇಕಿಲ್ಲ. ಸ್ಪೀಕರ್ ಗೆ ನೇರವಾಗಿಯೂ ದೂರು ನೀಡಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯ ಸರಕಾರದ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಯಾವುದೇ ಅಧಿಕಾರಿ ತನಗೆ ವರ್ಗ ಬೇಡ, ಇದ್ದಲ್ಲೇ ಇರುತ್ತೇನೆ ಎಂದರೂ ಲಕ್ಷಾಂತರ ದುಡ್ಡು ಕೊಡಬೇಕು. ಬೆಂಗಳೂರಿನಲ್ಲಿ ಗುತ್ತಿಗೆದಾರರ ಸಂಘದವರೇ ಮುಖ್ಯಮಂತ್ರಿಗೆ ಕಮಿಷನ್ ಕೇಳುತ್ತಿದ್ದಾರೆಂದು ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದಾರೆ. ಅಧಿಕಾರಿಗಳು ಕಿರುಕುಳಕ್ಕೆ ಬೇಸತ್ತು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಸರಕಾರ ಬಂದು ಮೂರೇ ತಿಂಗಳಲ್ಲಿ ಸರಕಾರಿ ಹುದ್ದೆಯನ್ನು ಹರಾಜಿಗಿಟ್ಟ ಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಶಾಸಕ ಭರತ್ ಶೆಟ್ಟಿ, ಸುಧೀರ್ ಶೆಟ್ಟಿ ಮತ್ತಿತರರಿದ್ದರು.

"The state government is infringing on the work of the officials. The EO and PDO have been transferred due to hatred politics," alleged former minister and BJP leader Kota Shrinivas Poojary.