ತಲಪಾಡಿ ಟೋಲ್ ಗೇಟ್ ಕಿರಿಕಿರಿ ; ಡಿ.12 ರಂದು ಇಂಟಕ್ ಪ್ರತಿಭಟನೆ

03-12-20 02:27 pm       Mangalore Correspondent   ಕರಾವಳಿ

ಕಾರ್ಮಿಕ ಸಂಘಟನೆ ಇಂಟೆಕ್ ನಿಂದ ಡಿ.12ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಯೂತ್ ಇಂಟಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೇಳಿದರು.

ಉಳ್ಳಾಲ, ಡಿ.3: ತಲಪಾಡಿ ಟೋಲ್‌ಗೇಟ್ ಆರಂಭದಿಂದಲೂ ಸಮಸ್ಯೆಯಿಂದ ಕೂಡಿದ್ದು ವಿವಿಧ ಸಂಘಟನೆಗಳಿಂದ ಅನೇಕ‌ ಬಾರಿ ಪ್ರತಿಭಟನೆ ನಡೆಸಲಾಗಿದೆ. ಟೋಲ್‌ಗೇಟ್ ಗುತ್ತಿಗೆದಾರರು ಈ ಬಗ್ಗೆ ನಿರ್ಲಕ್ಷಿಸುತ್ತಿದ್ದು ಇದರಿಂದಾಗಿ ಕಾರ್ಮಿಕ ಸಂಘಟನೆ ಇಂಟೆಕ್ ನಿಂದ ಡಿ.12ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಯೂತ್ ಇಂಟಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೇಳಿದರು. 

ತೊಕ್ಕೊಟ್ಟಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋರ್ಟ್ ಆದೇಶದ ಪ್ರಕಾರ, ಪ್ರತಿ ಟೋಲ್‌ಗೇಟ್ ಸ್ಥಳದಿಂದ 3 ಕಿ.ಮೀ. ತನಕ ಸ್ಥಳೀಯವಾಗಿ ವಾಸವಿರುವ ಮಂದಿಗೆ ಸಂಚಾರಕ್ಕೆ ಉಚಿತವಾಗಿ ಪಾಸ್ ನೀಡಬೇಕು. ಆದರೆ ತಲಪಾಡಿ ಟೋಲ್‌ಗೇಟ್ ನಲ್ಲಿ ತಲಪಾಡಿ ಪಂಚಾಯಿತಿಗೆ ಉಚಿತವಾಗಿ ಸೇವೆ ನೀಡುತ್ತಿದ್ದು ಈ ಸೇವೆಯನ್ನು 3 ಕಿ.ಮೀ.  ಒಳಗಿನವರಿಗು ನೀಡತಕ್ಕದ್ದು ಎಂದು‌ ಹೇಳಿದರು.

ಟೋಲ್ ಗೇಟ್ ಗುತ್ತಿಗೆದಾರರು ವಾಹನ ಚಾಲಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಯಾವುದೇ ವ್ಯಕ್ತಿ ಕಾರಿನಲ್ಲಿ 24 ಗಂಟೆಯಲ್ಲಿ ಹೋಗಿ ಬಂದರೂ 40 ರೂ. ಗಳಂತೆ ಎರಡು ಬಾರಿ ನೀಡಬೇಕಾಗುತ್ತದೆ. ಟೋಲ್‌ ಗೇಟ್ ಸಮಸ್ಯೆಯಿಂದಾಗಿ ಕರ್ನಾಟಕದ ಕಡೆಯ ಯಾವುದೇ ಬಸ್ ಗೇಟ್‌ ದಾಟಿ ಮುಂದೆ ಹೋಗುತ್ತಿಲ್ಲ. ಇದರಿಂದ ಜನರು  ನಡೆದುಕೊಂಡು ಹೋಗಬೇಕಾಗಿದ್ದು ಹಿರಿಯ ನಾಗರಿಕರಿ ತೊಂದರೆಗೊಳಗಾಗಿದ್ದಾರೆ ಎಂದು ಹೇಳಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಬಸ್ ಗಳಿಗೆ ಟೋಲ್ ಫ್ರೀ ಮಾಡಿ, ಮೇಲಿನ ತಲಪಾಡಿ ನಿಲ್ದಾಣಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಯಾವಾಗಲೂ ಒಂದೂವರೆ ಕಿಲೋಮೀಟರ್ ಉದ್ದಕ್ಕೆ ಸಾಲು ನಿಂತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಬೇರೆ ಲೈನ್ ನಲ್ಲಿ ಹೋದರೆ ದುಪ್ಪಟ್ಟು ಶುಲ್ಕ
ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.

ಒಂದೆಡೆ ಹೆದ್ದಾರಿ ಕಾಮಗಾರಿ ಪೂರ್ತಿಯಾಗಿಲ್ಲ. ಈಗಾಗಲೇ ಹಲವು ಜೀವ ಹಾನಿಯಾಗಿದ್ದು, ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಸಮಸ್ಯೆ, ಅನ್ಯಾಯದ ಗೂಡಾಗಿರುವ ತಲಪಾಡಿ ಟೋಲ್‌ಗೇಟ್ ನಿಂದ ಆಗುವ ಸಮಸ್ಯೆಯ ಪರಿಹಾರಕ್ಕಾಗಿ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಈಗಾಗಲೇ ಮನವಿ ನೀಡಿದ್ದು 10 ದಿನದ ಒಳಗೆ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಡಿ.‌12 ರಂದು ಬೆಳಗ್ಗೆ 11.30ಕ್ಕೆ ತಲಪಾಡಿ ಟೋಲ್‌ಗೇಟ್ ಮುಂಭಾಗದಲ್ಲಿ ಸಮಸ್ತ ಊರಿನ ಸಂಘ ಸಂಸ್ಥೆಗಳು ಮತ್ತು ಜನರ ನೆರವಿನೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಮಂಗಳೂರು ವಿಧಾನಸಭಾ ಕ್ಷೇತ್ರ ಯೂತ್ ಇಂಟಕ್ ಅಧ್ಯಕ್ಷ ಸಿದ್ಧಿಕ್ ಹಸನ್, ಮಂಗಳೂರು ದಕ್ಷಿಣ ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಮಂಗಳೂರು ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ಮಂಗಳೂರು ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್ ಉಪಾಧ್ಯಕ್ಷ ಸಿರಾಜುದ್ದಿನ್, ಬ್ಲಾಕ್ ಕಾಂಗ್ರೆಸ್ ಜೊತೆ ಕಾರ್ಯದರ್ಶಿ ಮನ್ಸೂರ್ ಹಾಗೂ ದಕ್ಷಿಣ ವಿಧಾನ‌ಸಭಾ ಕ್ಷೇತ್ರ ಯೂತ್ ಇಂಟೆಕ್  ಉಪಾಧ್ಯಕ್ಷ ಮುನೀಶ್ವರನ್ ಉಪಸ್ಥಿತರಿದ್ದರು.

INTEK to hold a protest on December 12 as issues erupt in Talapady Toll, Mangalore.