ಗೆಜ್ಜೆ ಕಟ್ಟಲು ಕಲಾವಿದರು ರೆಡಿ ; 40ಕ್ಕೂ ಹೆಚ್ಚು ಮೇಳಗಳ ತಿರುಗಾಟಕ್ಕೆ ಸಿದ್ಧತೆ

05-12-20 04:54 pm       Mangalore Correspondent   ಕರಾವಳಿ

ಡಿಸೆಂಬರ್ ತಿಂಗಳಲ್ಲಿ ಬಹುತೇಕ ಮೇಳಗಳು ಗೆಜ್ಜೆ ಕಟ್ಟಲು ತಯಾರಿ ನಡೆಸಿವೆ. 

ಮಂಗಳೂರು, ಡಿ.5: ಕೋವಿಡ್ 19 ನಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಮೊಟಕುಗೊಂಡಿದ್ದ ಯಕ್ಷಗಾನ ಪ್ರದರ್ಶನಕ್ಕೆ ಮರು ಚಾಲನೆ ದೊರೆತಿದೆ. ಡಿಸೆಂಬರ್ ತಿಂಗಳಲ್ಲಿ ಬಹುತೇಕ ಮೇಳಗಳು ಗೆಜ್ಜೆ ಕಟ್ಟಲು ತಯಾರಿ ನಡೆಸಿವೆ. 

ಕೋವಿಡ್  ಆತಂಕದ ನಡುವೆಯೇ ಮೇಳಗಳು ಪೌರಾಣಿಕ ಸೇರಿದಂತೆ ಹೊಸ ಪ್ರಸಂಗಗಳನ್ನು ರೂಪಿಸಿದ್ದು ಕಲಾವಿದರು ತಿರುಗಾಟಕ್ಕೆ ಸಜ್ಜಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನಲವತ್ತಕ್ಕೂ ಅಧಿಕ ಮೇಳಗಳು 6 ತಿಂಗಳ ಕಾಲ ತಿರುಗಾಟಕ್ಕೆ ಅಣಿಯಾಗಿವೆ. ತೆಂಕುತಿಟ್ಟಿನ ಹೊಸ ಮೇಳ ಪಟ್ಲ ಸತೀಶ್ ಶೆಟ್ಟಿ ಸಂಚಾಲಕತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಬುಕ್ಕಿಂಗ್ ನಡೆಯುತ್ತಿದ್ದು , ಪತ್ತನಾಜೆ ತನಕವೂ ಈ ಮೇಳದ ಯಕ್ಷಗಾನ ಭರ್ತಿಯಾಗಿದೆ. ಇತರ ಮೇಳಗಳು ಸಿದ್ಧತೆಗಳನ್ನು ನಡೆಸಿದ್ದು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರಂಗಸ್ಥಳಕ್ಕೆ ಇಳಿಯಲಿದೆ. 

ವಿಶೇಷ ಅಂದ್ರೆ ಈ ಬಾರಿ ಯಕ್ಷಗಾನ ಮೇಳಗಳು ಮತ್ತು ಕಲಾವಿದರು ಹೊಸತನಕ್ಕೆ ತೆರೆದುಕೊಂಡಿದ್ದಾರೆ. ಫೇಸ್ಬುಕ್ ಲೈವ್ ಯಕ್ಷಗಾನ ಪ್ರಸರಣಕ್ಕೆ ಹೊಸ ವೇದಿಕೆ ಒದಗಿಸಿರುವುದು ಈ ಬಾರಿಯ ವಿಶೇಷ. ಸದ್ಯ ಧರ್ಮಸ್ಥಳ, ಮಂದಾರ್ತಿ ಹಾಗೂ ಪಾವಂಜೆ ಮೇಳದ ಆಟ ಫೇಸ್ ಬುಕ್ ವಾಟ್ಸಪ್ ನಲ್ಲಿ ನೇರ ಪ್ರಸಾರ ಕಾಣುತ್ತಿದ್ದು ದಿನಕ್ಕೆ  ಸಾವಿರಕ್ಕೂ ಅಧಿಕ ವೀಕ್ಷಕರು ನೋಡುತ್ತಿದ್ದಾರೆ. ಮೊಬೈಲ್ನಲ್ಲಿ ಮನೆಯಲ್ಲಿ ಕುಳಿತು ಆಟ ನೋಡುವ ಈ ಹೊಸ ವಿಧಾನ ಕೋವಿಡ್ ಆತಂಕದ ಮಧ್ಯೆ ಹೊಸ ಬದಲಾವಣೆಯಾಗಿದೆ.

ಧರ್ಮಸ್ಥಳ ಮೇಳದ ಸೇವೆಯಾಟದ ಆರಂಭವಾಗಿದ್ದು ಸದ್ಯ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿದೆ.  ಬಪ್ಪನಾಡು ಮೇಳದ ಡಿಸೆಂಬರ್ ಒಂದರಿಂದ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 6 ಮೇಳಗಳ ಸೇವೆ ಡಿಸೆಂಬರ್ 9ರಿಂದ ಆರಂಭಗೊಳ್ಳಲಿದೆ. 

ಹನುಮಗಿರಿ ಮೇಳದ ಡಿಸೆಂಬರ್ 22ರಿಂದ, ಸಸಿಹಿತ್ಲು ಭಗವತಿ ಮೇಳ ಡಿಸೆಂಬರ್ 17, ದೇಂತಡ್ಕ ಮೇಳ ಡಿಸೆಂಬರ್ 4, ಸುಂಕದಕಟ್ಟೆ ಡಿಸೆಂಬರ್ ನಾಲ್ಕರಂದು ತಿರುಗಾಟ ಆರಂಭಿಸಲಿವೆ. ಬಡಗಿನ ಮಂದಾರ್ತಿಯ 5 ಮೇಳಗಳ ಕಲಾವಿದರು ನಿಗದಿಯಂತೆ ಸದ್ಯ ಕ್ಷೇತ್ರದಲ್ಲಿ ಹರಕೆ ಆಟ ಪ್ರದರ್ಶಿಸಿದ್ದಾರೆ. ಹಾಲಾಡಿ ಮೇಳ ಡಿಸೆಂಬರ್ 18, ಮಾರಣಕಟ್ಟೆ ಮೇಳ ಡಿಸೆಂಬರ್ ಐದರಂದು ಹೊರಡಲಿದೆ ಎಂದು ಮೇಳದ ಯಜಮಾನ ಕರುಣಾಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪಳ್ಳಿ ಕಿಶನ್ ಹೆಗ್ಡೆ ಯಜಮಾನಿಕೆಯ ಸೌಕೂರು ಮೇಳ ಡಿಸೆಂಬರ್ 18 ರಿಂದ,  ಹಿರಿಯಡ್ಕ ಮೇಳ ಜನವರಿ ಮೊದಲ ವಾರದಲ್ಲಿ ಹಾಗೂ ಮಡಾಮಕ್ಕಿ ಮೇಳ ಜನವರಿಯಲ್ಲಿ ಪ್ರದರ್ಶನ ಆರಂಭಿಸಲಿದೆ.

Video: