ವಿಹಿಂಪ ಕಾರ್ಯಕರ್ತರಿಂದ ರಾಮ ಮಂದಿರಕ್ಕೆ ನಿಧಿ ಸಂಗ್ರಹ ; ಪೇಜಾವರ ಶ್ರೀ

05-12-20 05:17 pm       Udupi Correspondent   ಕರಾವಳಿ

45 ದಿನಗಳ ನಿಧಿ ಸಂಗ್ರಹ ಅಭಿಯಾನವನ್ನು ವಿಹಿಂಪ ಕಾರ್ಯಕರ್ತರು ನಡೆಸುತ್ತಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದರು.

ಉಡುಪಿ, ಡಿಸೆಂಬರ್ 5: ಮಕರ ಸಂಕ್ರಾಂತಿಯ ನಂತರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಮಮಂದಿರಕ್ಕೆ ನಿಧಿ ಸಂಗ್ರಹ ಪ್ರಾರಂಭಿಸುತ್ತಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದರು.

ರಾಮಮಂದಿರ ನಿರ್ಮಾಣಕ್ಕೆ ಸುಮಾರು 1300-1400 ಕೋಟಿ ರುಪಾಯಿ ಹಣದ ಅಗತ್ಯವಿದೆ. ಪ್ರತಿ ಮನೆಯವರೂ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡಬೇಕು ಎಂದು ರಾಮಮಂದಿರ ಟ್ರಸ್ಟಿಯೂ ಆಗಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಭಕ್ತರು ಮಂದಿರ ನಿರ್ಮಾಣಕ್ಕೆ ನಿಧಿ ದೇಣಿಗೆ ನೀಡಲು ಈಗಾಗಲೇ ಉತ್ಸುಕರಾಗಿದ್ದಾರೆ. ಒಟ್ಟು 45 ದಿನಗಳ ನಿಧಿ ಸಂಗ್ರಹ ಅಭಿಯಾನವನ್ನು ವಿಹಿಂಪ ಕಾರ್ಯಕರ್ತರು ನಡೆಸುತ್ತಾರೆ. ದೇಶದ ಮೂಲೆ ಮೂಲೆಯ ಗ್ರಾಮಗಳ ಮನೆಗಳನ್ನು ಸಂಪರ್ಕ ಮಾಡುತ್ತಾರೆ. ಪ್ರತಿಯೊಬ್ಬ ಕನಿಷ್ಟ ಹತ್ತು ರುಪಾಯಿ ನೀಡಬಹುದು ಎಂದರು.

ಸಾಧು ಸಂತರು, ಮಠಾಧಿಪತಿಗಳು ತಮ್ಮ‌ ಕ್ಷೇತ್ರದಲ್ಲಿ ಭಕ್ತರಿಗೆ ಪ್ರೇರಣೆ ನೀಡುತ್ತಿದ್ದಾರೆ. ಮಂದಿರ ನಿರ್ಮಾಣ ಜೊತೆಗೆ ಸಂಸ್ಕೃತಿ ಪುನರುತ್ಥಾನವೂ ಆಗಬೇಕು. ಪ್ರತಿಯೊಬ್ಬ ಭಕ್ತರೂ ಧೀಕ್ಷಾಬದ್ಧರಾಗಬೇಕು ಎಂದು ಕರೆ ನೀಡಿದರು.

ವಿಹಿಂಪ ಕಾರ್ಯಕರ್ತರ ಮೂಲಕವೇ ಹಣ ಸಂಗ್ರಹ ಆಗುತ್ತದೆ. ವಿಹಿಂಪ ಹತೋಟಿಯಲ್ಲೇ ನಿಧಿ‌ಸಂಗ್ರಹ ಆಗುವುದರಿಂದ ಹಣದ ದುರುಪಯೋಗಕ್ಕೆ ಅವಕಾಶ ಇಲ್ಲ. ಕಾರ್ಯಕರ್ತರು ಬಂದಾಗಷ್ಟೇ ಹಣ ಕೊಡಿ. ಇಲ್ಲವೇ ನೇರ ಅಕೌಂಟ್ ಗೆ ಹಣ ಜಮಾ ಮಾಡಿ ಎಂದು ಶ್ರೀಗಳು ಮನವಿ ಮಾಡಿದರು.