Mangalore MP Brijesh Chowta, rain: ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಪ್ರದೇಶಗಳನ್ನ ಸರ್ವೆ ನಡೆಸಿ ; ಕುತ್ತಾರಿನ ದುರಂತ ಪ್ರದೇಶಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ 

01-07-24 12:33 pm       Mangalore Correspondent   ಕರಾವಳಿ

ಉಳ್ಳಾಲ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವಂತಹ ಪ್ರದೇಶಗಳ ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದ್ದು, ಮಳೆ ಹೆಚ್ಚಾಗುವ ಸಂದರ್ಭದಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ‌ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಹೇಳಿದರು.

ಉಳ್ಳಾಲ, ಜೂ.30: ಉಳ್ಳಾಲ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವಂತಹ ಪ್ರದೇಶಗಳ ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದ್ದು, ಮಳೆ ಹೆಚ್ಚಾಗುವ ಸಂದರ್ಭದಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ‌ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಹೇಳಿದರು.

ಮುನ್ನೂರು ಗ್ರಾಮದಲ್ಲಿ ಆವರಣ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಮನೆಗೆ ಭಾನುವಾರ ಅವರು ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಒಂದೇ ಮನೆಯ ನಾಲ್ಕು ಮಂದಿ ಸಾವನ್ನಪ್ಪಿರುವುದು ಅತ್ಯಂತ ದುಃಖದ ವಿಚಾರ. ದುರ್ಘಟನೆ ನಡೆದ ದಿನವೇ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ದ.ಕ ಜಿಲ್ಲೆ ಸಮತಟ್ಟು ಪ್ರದೇಶವಾಗಿರದ ಕಾರಣದಿಂದ ಮಳೆ ನೀರು ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲದೆ ಘಟನೆಗಳು ಸಂಭವಿಸುತ್ತಿವೆ. ಆದಷ್ಟು ಶೀಘ್ರ ಸರ್ವೇ ನಡೆಸಿ ಪ್ರಕೃತಿ ವಿಕೋಪಕ್ಕೆ ತುತ್ತಾಗಬಹುದಾದ ಮನೆಗಳ ವರದಿ ಸಂಗ್ರಹಿಸಲು ಸೂಚಿಸಿದ್ದೇನೆ. ಮಳೆ ಹೆಚ್ಚಾದರೆ ಅಪಾಯದಲ್ಲಿರುವ ಮನೆಗಳಿಂದ ಕುಟುಂಬ ಸದಸ್ಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಆದಷ್ಟು ಶೀಘ್ರ ರಾಜ್ಯ ಸರಕಾರದ ಕಡೆಯಿಂದ ಪರಿಹಾರ ಕೊಡಿಸಲು ಒತ್ತಾಯಿಸುತ್ತೇನೆ. ಸೂಕ್ತ ಪರಿಹಾರ ನೀಡುವ ಮೂಲಕ ಸರಕಾರ ನೊಂದ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸವನ್ನು  ಮಾಡಬೇಕಿದೆ ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್‌ ಶೆಟ್ಟಿ, ತಹಶೀಲ್ದಾರ್‌ ಪ್ರದೀಪ್‌ ಕೊರ್ಡೇಕರ್, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಶೈಲಾ ಜೆ ಕಾರಗಿ, ಮುಖಂಡರಾದ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಚಂದ್ರಹಾಸ್‌ ಅಡ್ಯಂತಾಯ, ಪ್ರಮುಖರಾದ ಸಿರಾಜುದ್ದೀನ್‌, ಕರೀಂ ಉಚ್ಚಿಲ, ಸಿದ್ದೀಕ್ ಕೊಳಂಗೆರೆ, ದಿನೇಶ್‌ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.

ಮೃತ ಸಹೋದರಿಗೆ ನಿಶ್ಚಿತಾರ್ಥ ನಡೆದಿಲ್ಲ 

ನನ್ನ ಸಹೋದರಿಗೆ ವಿವಾಹ ನಿಶ್ಚಿತಾರ್ಥ ನಡೆದಿದೆ ಎನ್ನುವ ವಿಚಾರವೇ ಸುಳ್ಳು. ಬಕ್ರೀದ್‌ ಹಬ್ಬದ ಮರುದಿನವೇ ನಾನು ಪತಿಯ ಮನೆಗೆ ತೆರಳಿದ್ದೇನೆ. ದುರಂತವು ಬೆಳಗ್ಗೆ 6 ಗಂಟೆಗೆ ಸಂಭವಿಸಿದ್ದಲ್ಲ. ಬೆಳಗ್ಗೆ 6 ಗಂಟೆಗೆ ನಿತ್ಯವೂ ಪೈಪ್ ಲೈನಲ್ಲಿ ನೀರು ಬರುತ್ತದೆ, ಅದನ್ನು ತುಂಬಿಸಲು ಎಲ್ಲರೂ ಬೇಗನೆ ಏಳುತ್ತಿದ್ದೆವು. ಆದರೆ ಘಟನೆ ನಡೆದ ದಿನದಂದು ಮನೆಯಲ್ಲಿ ನೀರು ತುಂಬಿಸಿಟ್ಟಿಲ್ಲ, ಪಾತ್ರೆಗಳು ಎಲ್ಲವೂ ತೊಳೆಯದ ಸ್ಥಿತಿಯಲ್ಲಿತ್ತು. ಹಾಗಾಗಿ ನಸುಕಿನ 3 ಗಂಟೆಯ ಆಸುಪಾಸಿನಲ್ಲಿ ದುರಂತ ಸಂಭವಿಸಿರಬಹುದು. ಎರಡು ವರ್ಷದ ಹಿಂದೆಯೂ ಕಂಪೌಂಡ್‌ ಬಿದ್ದಾಗ, ಸರಿಯಾಗಿ ಕಟ್ಟುವಂತೆ  ಹೇಳಿದ್ದೆವು. ಆದರೂ ನಿರ್ಲಕ್ಷ್ಯ ವಹಿಸಿದ ಕಾರಣ ನಮ್ಮ ಕುಟುಂಬವೇ ನಶಿಸುವಂತಾಯಿತು. ಇನ್ನು ಮುಂದೆ ಇಲ್ಲೇ ಮನೆ ಕಟ್ಟಿಕೊಟ್ಟಲ್ಲಿ ವಾಸಿಸುವುದು ಕಷ್ಟ.  ಬೇರೆ ಕಡೆ ಮನೆಯನ್ನು ನಿರ್ಮಿಸಿ ಕೊಟ್ಟರೆ ವಾಸಿಸುತ್ತೇವೆ ಎಂದು ಇದೇ ವೇಳೆ ಸೋದರಿಯರು ಮತ್ತು ಹೆತ್ತವರನ್ನು ಕಳೆದುಕೊಂಡ ಫಾತಿಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಡಲ್ಕೊರೆತ ಪ್ರದೇಶಕ್ಕೆ ಸಂಸದರ ಭೇಟಿ

ಭಾನುವಾರ ಮಧ್ಯಾಹ್ನ ಉಳ್ಳಾಲದ ಮೊಗವೀರಪಟ್ಣ, ಬಟ್ಟಪ್ಪಾಡಿ, ಸೀಗ್ರೌಂಡ್ ಕಡಲ್ಕೊರೆತ ಪ್ರದೇಶಕ್ಕೂ ತೆರಳಿದ ಸಂಸದ ಬ್ರಿಜೇಶ್ ಚೌಟ, ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದರಲ್ಲದೆ, ಅಪಾಯ ಎದುರಿಸುತ್ತಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದರು.‌

Capt. Chowta visited Kuttar Madaninagara where four members of a family died in a wall collapse incident on June 26. He asked the revenue officials to distribute compensation to the lone survivor of the family.