Dinesh Gundu Rao, Mangalore: ಕೆಡಿಪಿ ಸಭೆ ; ಶಿಬಾಜೆ ವಿದ್ಯುತ್ ಶಾಕ್ ಬಗ್ಗೆ ದೂರು ನೀಡಿದ್ದರೂ ಸ್ಪಂದಿಸಿಲ್ಲ ಯಾಕೆ ? ಯುವತಿ ಸಾವಿಗೆ ಹೊಣೆ ಯಾರ್ರೀ..? ಹತ್ತು ದಿನದಲ್ಲಿ ರಿಪೋರ್ಟ್ ಕೊಡಿ, ತಪ್ಪಿತಸ್ಥರನ್ನು ಶಿಕ್ಷಿಸಿ ಎಂದ ಉಸ್ತುವಾರಿ ಸಚಿವ

05-07-24 07:46 pm       Mangalore Correspondent   ಕರಾವಳಿ

ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಯುವತಿಯೊಬ್ಬಳು ವಿದ್ಯುತ್ ಕಂಬದ ಸ್ಟೇ ವೈರ್ ತಾಗಿ ಸ್ಥಳದಲ್ಲೇ ಮೃತಪಟ್ಟ ವಿಚಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು.

ಮಂಗಳೂರು, ಜುಲೈ 5: ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಯುವತಿಯೊಬ್ಬಳು ವಿದ್ಯುತ್ ಕಂಬದ ಸ್ಟೇ ವೈರ್ ತಾಗಿ ಸ್ಥಳದಲ್ಲೇ ಮೃತಪಟ್ಟ ವಿಚಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು. ಶಿಬಾಜೆ ವಿದ್ಯುತ್ ಶಾಕ್ ಘಟನೆಯನ್ನು ಪ್ರಸ್ತಾಪಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಘಟನೆ ಬಗ್ಗೆ ತನಿಖೆ ನಡೆಸಿ ಹತ್ತು ದಿನದಲ್ಲಿ ರಿಪೋರ್ಟ್ ನೀಡುವಂತೆ ಮತ್ತು ತಪ್ಪಾಗಿದ್ದರೆ ಶಿಕ್ಷಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಶಿಬಾಜೆ ಘಟನೆ ಬಗ್ಗೆ ಪ್ರಸ್ತಾಪಿಸಿದ ಸಂಸದ ಚೌಟ, ನನ್ನ ಮಾಹಿತಿ ಪ್ರಕಾರ ಅಲ್ಲಿ ಕರೆಂಟ್ ಶಾಕ್ ಇದ್ದ ಬಗ್ಗೆ ಮೂರು ಬಾರಿ ಮನೆಯವರು ದೂರು ನೀಡಿದ್ದರು. ಆದರೂ ಇಲಾಖೆಯವರು ಸ್ಪಂದಿಸಿಲ್ಲ. ಅದೇ ಕಾರಣಕ್ಕೆ ಯುವತಿ ದುರಂತ ಸಾವಿಗೀಡಾಗಿದ್ದಾಳೆ. ಈ ಘಟನೆಗೆ ಯಾರು ಕಾರಣ. ಯಾರಾದ್ರೂ ಹೊಣೆಯಾಗಬೇಕಲ್ವಾ.. ಘಟನೆ ಬಗ್ಗೆ ತನಿಖೆ ನಡೆಸಬೇಕು. ಇದಕ್ಕೆ ನೀಡುವ ಪರಿಹಾರವನ್ನೂ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಏನ್ರೀ, ಅಲ್ಲಿನ ಮೆಸ್ಕಾಂ ಇಂಜಿನಿಯರ್ ಯಾರು ಎಂದು ಉಸ್ತುವಾರಿ ಪ್ರಶ್ನೆ ಮಾಡಿದಾಗ, ಎದ್ದು ನಿಂತ ಇಂಜಿನಿಯರ್ ಒಬ್ರು ಅಲ್ಲಿ ದೂರು ಬಂದಿದ್ದು ಹೌದು ಎನ್ನುತ್ತ ಟೆಕ್ನಿಕಲ್ ಸಮಸ್ಯೆ ಬಗ್ಗೆ ಹೇಳಿಕೊಂಡರು. ನಿಮ್ಮ ಸಮಸ್ಯೆ ನಮಗೆ ಬೇಡ. ಅಲ್ಲಿ ದೂರು ಕೊಟ್ಟಿದ್ದರೂ, ಸ್ಪಂದನೆ ಯಾಕೆ ಮಾಡಿರಲಿಲ್ಲ. ಈಗ ಜೀವ ಹೋಗಿದ್ದಕ್ಕೆ ಯಾರು ಹೊಣೆ ಎಂದು ಸಚಿವರು ಪ್ರಶ್ನೆ ಮಾಡಿದರು.

ಇದೇ ವೇಳೆ, ಎಂಎಲ್ಸಿ ಐವಾನ್ ಡಿಸೋಜ ಪ್ರತಿಕ್ರಿಯಿಸಿ, ಪಾಂಡೇಶ್ವರದಲ್ಲಿ ವಿದ್ಯುತ್ ಕಂಬ ಬಿದ್ದರೂ, ಅದರ ಪವರ್ ಕಡಿತ ಆಗಿರಲಿಲ್ಲ. ಇದರಿಂದಾಗಿ ಅಮಾಯಕ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಅಂದಿನ ಘಟನೆಗೂ ನಾವು ಕಾರಣ ಅಲ್ಲ ಎಂದು ಮೆಸ್ಕಾಂನವರು ಹೇಳಿದ್ದರು. ಜಿಲ್ಲಾಧಿಕಾರಿ ಗಟ್ಟಿ ನಿಂತು ಪರಿಹಾರ ಕೊಡುವಂತೆ ಆದೇಶ ಮಾಡಿದ್ದರು ಎಂದು ಹೇಳಿದರು. ಇದೇ ವೇಳೆ, ಸಮಜಾಯಿಷಿ ನೀಡಲು ಯತ್ನಿಸಿದ ಮೆಸ್ಕಾಂ ಎಂಡಿ, ನಾವು ತನಿಖೆ ಮಾಡಿದ್ದೇವೆ, ಸಮಸ್ಯೆ ಬಗ್ಗೆ ದೂರು ಬಂದಿರಲಿಲ್ಲ ಎಂದು ಹೇಳಲು ಯತ್ನಿಸಿದರು. ನಿಮ್ಮ ಸಮಜಾಯಿಷಿ ಬೇಡ, ದೂರು ಬಂದಿದ್ದರೂ ಸ್ಪಂದಿಸಿಲ್ಲ ಎಂದರೆ ಏನರ್ಥ. ಮಳೆ ಇರುವಾಗ ಎಚ್ಚರ ವಹಿಸಬೇಕಿತ್ತು. ನಿಮ್ಮ ಸಿಬಂದಿ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆಯಲ್ವಾ ಎಂದು ಸಚಿವರು ಗದರಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಸಭೆಯ ಗಮನಕ್ಕೆ ತಂದರು. ಪ್ರತಿ ಗ್ರಾಮದಲ್ಲಿ ಪಶು ಸಖಿ ಎನ್ನುವ ಹೆಸರಲ್ಲಿ ಹುದ್ದೆ ಇದ್ದರೂ ಅವರು ಈ ಪಶು ಆಸ್ಪತ್ರೆಗಳಿಗೆ ಬರುವುದಿಲ್ಲ. ಆಸ್ಪತ್ರೆಯಲ್ಲಿ ಕೇಳಿದರೆ ಡಾಕ್ಟರ್ ಇಲ್ಲ ಎಂಬ ರೆಡಿ ಉತ್ತರ ಇರುತ್ತದೆ. ಪಕ್ಕದ ಗೂಡಂಗಡಿಯವನು ಬಳಿಕ ಆಸ್ಪತ್ರೆ ಬಾಗಿಲು ತೆಗೆದು ಅರ್ಜೆಂಟಿಗೆ ಮದ್ದು ಕೊಡುತ್ತಾನೆ ಎಂದು ಪಶು ಆಸ್ಪತ್ರೆಯ ವಾಸ್ತವ ಸ್ಥಿತಿಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಅರಣ್ಯ ಇಲಾಖೆ ವಿಷಯ ಬಂದಾಗ, ರಸ್ತೆ ಬದಿಗಳಲ್ಲಿ, ಅರಣ್ಯಗಳಲ್ಲಿ ಆದಷ್ಟು ಹಣ್ಣುಗಳ ಗಿಡಗಳನ್ನು ನೆಡುವಂತೆ ಅಧಿಕಾರಿಗಳಿಗೆ ಸಲಹೆ ಮಾಡಿದರು.

ಇದೇ ವೇಳೆ, ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿದ್ದು, ಇದಕ್ಕೆ ಅಗತ್ಯವಾಗಿ ಕಡಿವಾಣ ಹಾಕಬೇಕೆಂದರು. ದನಿಗೂಡಿಸಿದ ಐವಾನ್ ಡಿಸೋಜ, ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆಯಿಂದಾಗಿ ದ್ವೀಪವೇ ಕುಸಿಯುವ ಸ್ಥಿತಿ ಬಂದಿದೆ. ಆ ಭಾಗದಲ್ಲಿ ಮರಳುಗಾರಿಕೆ ನಿಲ್ಲಿಸಿ ಎಂದು ಹೇಳಿದರು. ಮರಳು ನಿಲ್ಲಿಸಿದರೆ, ಕಟ್ಟಡ ಕೆಲಸಗಳಿಗೆ ಮರಳಿನ ಕೊರತೆ ಆಗಲ್ವೇ.. ನಿಲ್ಲಿಸೋಕೆ ಆಗೋದಿಲ್ಲ. ಅಕ್ರಮ ಆಗದ ರೀತಿ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು. ಬಂದರು ಇಲಾಖೆಯ ವಿಚಾರ ಬಂದಾಗ, ಅಧಿಕಾರಿಗಳು ಯಾರೂ ಇರಲಿಲ್ಲ. ಈ ಬಗ್ಗೆ ಆಕ್ಷೇಪ ಎತ್ತಿದ ಸಂಸದ ಬ್ರಿಜೇಶ್ ಚೌಟ, ಮೊನ್ನೆ ಕಡಲ್ಕೊರೆತ ಜಾಗಕ್ಕೆ ಭೇಟಿ ನೀಡಿದಾಗಲೂ ಬಂದರು ಇಲಾಖೆ ಅಧಿಕಾರಿಗಳು ಇರಲಿಲ್ಲ. ನಿಮಗೆ ಹೊಣೆಗಾರಿಕೆ ಇಲ್ಲವೇ.. ಅಧಿಕಾರಿಗಳು ಯಾಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದರು. ಉಸ್ತುವಾರಿ ಸಚಿವರು ಕೂಡ ಬಂದರು ಇಲಾಖೆಯಿಂದ ಬಂದಿದ್ದ ಸಿಬಂದಿಯನ್ನು ತರಾಟೆಗೆತ್ತಿಕೊಂಡರು.

ಸಭೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಮಾತ್ರ ಇದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಶಾಸಕರೆಲ್ಲ ಎಲ್ಲಿ ಹೋಗಿದ್ದಾರೆ, ಯಾಕೆ ಬಂದಿಲ್ಲ ಎಂದು ಕೇಳಿದರು. ಅಶೋಕ್ ರೈ ಉತ್ತರಿಸಿ, ಕೆಲವರು ಬೆಂಗಳೂರು ಹೋಗಿದ್ದಿರಬೇಕು ಎಂದು ಟಾಂಗ್ ಇಟ್ಟರು. ಡಿಸಿಸಿ ಬ್ಯಾಂಕಿನಲ್ಲಿ ಕೃಷಿ ಸಾಲವನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರೊಬ್ಬರು ಆಕ್ಷೇಪ ಎತ್ತಿದರು. ಬ್ಯಾಂಕ್ ಕಡೆಯಿಂದ ಬಂದಿದ್ದ ಸಿಇಓ ಗೋಪಿನಾಥ ಭಟ್ ಅವರನ್ನು ಪ್ರಶ್ನೆ ಮಾಡಿದ ಸಚಿವರು, ಏನ್ರೀ ಕೃಷಿಕರ ಸಾಲದ ಬಗ್ಗೆ ಏನು ತಕರಾರಿದೆ ಎಂದು ಕೇಳಿದರು. 6 ಪರ್ಸೆಂಟ್ ಸಾಲದ ಬಡ್ಡಿ ಸಮಸ್ಯೆಯಾಗಿದೆ ಎಂದು ಹೇಳಲು ಹೊರಟಾಗ, ನೀವು ಸರಕಾರದ ನೀತಿಯನ್ನೇ ಪ್ರಶ್ನೆ ಮಾಡುತ್ತೀರಲ್ಲಾ. ನಿಮ್ಮ ಕೆಲಸ ನೀವು ಮಾಡಿ ಎಂದು ಗದರಿದರು. ವೇದಿಕೆಯಲ್ಲಿ ಡೀಸಿ ಮುಲ್ಲೈ ಮುಗಿಲನ್, ಜಿಪಂ ಸಿಇಓ ಆನಂದ್, ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್, ಮೆಸ್ಕಾಂ ಎಂಡಿ ಇದ್ದರು.

Girl dies of electric shock in Belthangady, in charge minister  Dinesh Gundu Rao slams officers over negligence during the KDP meeting held at zilla panchayat in Mangalore