Impact: ಕ್ರೀಡಾಸಕ್ತರ ಅಭಿಯಾನಕ್ಕೆ ಮಣಿದ ಮಂಗಳೂರು ವಿವಿ ; ಸ್ಥಗಿತ ಭೀತಿ ಎದುರಿಸಿದ್ದ B.P.Ed ಕೋರ್ಸ್ ಮತ್ತೆ ಆರಂಭ

07-12-20 01:43 pm       Mangalore Correspondent   ಕರಾವಳಿ

ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ವೃತ್ತಿಪರ ಶಿಕ್ಷಣ ಕೋರ್ಸ್ ಅನ್ನು ಮುಂದುವರಿಸಲು ಅನುಮೋದನೆ ದೊರೆತಿದ್ದು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಂಗಳೂರು, ಡಿಸೆಂಬರ್, 7: NCTE ಮಾನದಂಡ ನೆಪದಲ್ಲಿ ಸ್ಥಗಿತಗೊಳಿಸಲು ಉದ್ದೇಶಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ವೃತ್ತಿಪರ ಶಿಕ್ಷಣ (B.P.Ed) ಕೋರ್ಸ್ ಅನ್ನು ಕ್ರೀಡಾ ಪ್ರೇಮಿಗಳ ಒಕ್ಕೊರಳ ಅಭಿಯಾನದ ಫಲವಾಗಿ ಮುಂದುವರಿಸಲು ಅನುಮೋದನೆ ದೊರೆತಿದ್ದು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಂಗಳೂರು ವಿವಿಯಲ್ಲಿ ಬಡ ಕ್ರೀಡಾಪಟುಗಳ ವೃತ್ತಿ ಬದುಕಿಗೆ ಆಶಾಕಿರಣವಾಗಿರುವ B.P.Ed ಕೋರ್ಸ್ ಅನ್ನು NCTE ಮಾನದಂಡದ ಕಾರಣವೊಡ್ಡಿ ವಿವಿಯ ಅಧಿಕಾರಿಗಳು ಸ್ಥಗಿತಗೊಳಿಸಲು ಮುಂದಾಗಿದ್ದರು. ಇದರಿಂದ ದ.ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳ ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ವ್ಯಯಿಸಿ ವೃತ್ತಿಪರ ಶಿಕ್ಷಣ ಕಲಿಯುವ ಅನಿವಾರ್ಯತೆ ಎದುರಾಗಿತ್ತು. ಈ ವಿಚಾರ ಅರಿತ ಅವಿಭಜಿತ ದ.ಕನ್ನಡ, ಉಡುಪಿ ಜಿಲ್ಲೆಯ ಕ್ರೀಡಾ ಪ್ರೇಮಿಗಳು ಅಭಿಯಾನ ನಡೆಸಿದ್ದರು. 

ವಿ.ವಿ ಉಪ ಕುಲಪತಿ ಸುಬ್ರಮಣ್ಯ ಯಡಿಪಡಿತ್ತಾಯ, ಕ್ಷೇತ್ರದ ಶಾಸಕ ಯು.ಟಿ.ಖಾದರ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯಾವುದೇ ಕಾರಣಕ್ಕೂ ವಿ.ವಿ.ಯಲ್ಲಿ B.P.Ed  ಕೋರ್ಸ್ ನಿಲ್ಲಿಸಬಾರದೆಂದು ಒತ್ತಾಯಿಸಿದ್ದರು. 

ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ. ಖಾದರ್, ವಿಶೇಷ ಮುತುವರ್ಜಿ ವಹಿಸಿ ಈ ಬಗ್ಗೆ ವಿವಿ ಉಪ ಕುಲಪತಿಗಳಲ್ಲಿ ಚರ್ಚಿಸಿದರ ಫಲವಾಗಿ ವಿ.ವಿ ಆಡಳಿತವು ಇದೀಗ ಮತ್ತೆ ದೈಹಿಕ ಶಿಕ್ಷಣ ಕೋರ್ಸನ್ನು ಆರಂಭಿಸಲು ಮುಂದಾಗಿರುವುದು ಕ್ರೀಡಾಭಿಮಾನಿಗಳು, ಬಡ ಕ್ರೀಡಾಪಟುಗಳಿಗೆ ಸಂತಸ ತಂದಿದೆ.

ವಿ.ವಿ ಯಲ್ಲಿ ವೃತ್ತಿಪರ ದೈಹಿಕ ಶಿಕ್ಷಣ(B.P.Ed) ಕೋರ್ಸನ್ನು ಮತ್ತೆ ಪ್ರಾರಂಭಿಸಲು ಶ್ರಮಿಸಿದ ಕ್ರೀಡಾಭಿಮಾನಿಗಳು ಮತ್ತು ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರನ್ನು ಕಾಪಿಕಾಡು ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಸ್ಥಾಪಕಾಧ್ಯಕ್ಷರಾದ ಗೋಪಿನಾಥ್ ಕಾಪಿಕಾಡ್ ಅವರು ಪ್ರಶಂಸಿದ್ದಾರೆ. ಹೆಡ್ ಲೈನ್ ಕರ್ನಾಟಕ ವೆಬ್ ನಲ್ಲಿ ಇದರ ಬಗ್ಗೆ ಮೊಟ್ಟಮೊದಲಿಗೆ ಸುದ್ದಿ ಮಾಡಿ ಗಮನಸೆಳೆಯಲಾಗಿತ್ತು. 

ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗವು ಶೈಕ್ಷಣಿಕ ವರ್ಷ 2020-21ನೇ ಸಾಲಿನ ಬಿ.ಪಿ.ಎಡ್ (B.P.Ed) ಪದವಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. (ಸಾಮಾನ್ಯ ವರ್ಗ ಹಾಗೂ ಪಾವತಿ ವರ್ಗ), ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 14 -12 -2020 ಆಗಿರುತ್ತದೆ.

  •  ಪ್ರವೇಶಾತಿ ಅರ್ಜಿ ಮತ್ತು ಈ ಕೈಪಿಡಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಜಾಲತಾಣ www.mangaloreuniversity.ac.in ನಿಂದ ಪಡೆದುಕೊಳ್ಳಬಹುದು. 
  •  ಪ್ರವೇಶಾತಿ ಅರ್ಜಿ ಶುಲ್ಕ ರೂ. 100/- (ಪ.ಜಾ/ ಪ. ಪಂ/ಪ್ರವರ್ಗ- I ;  ರೂ. 50/-).

ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ ಮತ್ತೆ ಎಡವಟ್ಟು; ಬಿಪಿಎಡ್ ಕೋರ್ಸ್ ಮುಚ್ಚಲು ಕಸರತ್ತು!