Elephant, Subramanya Mangalore, Rain: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ; ಕುಮಾರಧಾರ ನದಿಯಲ್ಲಿ ಕೊಚ್ಚಿ ಹೋದ ಕಾಡಾನೆ ಮರಿ ! 

16-07-24 02:42 pm       Mangalore Correspondent   ಕರಾವಳಿ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರ ನದಿಯಲ್ಲಿ ನಿನ್ನೆ ರಾತ್ರಿ ಆನೆ ಮರಿಯೊಂದರ ಮೃತದೇಹ ತೇಲಿಬಂದಿದ್ದು ಕುತೂಹಲ ಸೃಷ್ಟಿಯಾಗಿದೆ. 

ಪುತ್ತೂರು, ಜುಲೈ.16: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರ ನದಿಯಲ್ಲಿ ನಿನ್ನೆ ರಾತ್ರಿ ಆನೆ ಮರಿಯೊಂದರ ಮೃತದೇಹ ತೇಲಿಬಂದಿದ್ದು ಕುತೂಹಲ ಸೃಷ್ಟಿಯಾಗಿದೆ. 

ರಾತ್ರಿ ವೇಳೆ ಸ್ಥಳೀಯ ಸಿಬಂದಿ ನದಿಯಲ್ಲಿ ನೀರಿನ ಪ್ರಮಾಣ ನೋಡಲು ಸೇತುವೆ ಬಳಿ ಹೋಗಿದ್ದಾಗ ಆನೆ ಮರಿ ಕೊಚ್ಚಿ ಹೋಗುತ್ತಿರುವುದು ಕಂಡುಬಂದಿದೆ. ಸೋಮವಾರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು ಅಲ್ಲಿನ ಶೌಚಾಲಯ ಮತ್ತಿತರ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದವು. ಇದು ಕುಮಾರಧಾರ ನದಿ ತು‌ಂಬಿ ಹರಿಯುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. 

ರಾತ್ರಿ ವೇಳೆ ಆಗತಾನೇ ಹೆರಿಗೆಯಾದಂತಿದ್ದ ಆನೆ ಮರಿ ನದಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಗೆ ಹೆಣ್ಣು ಕಾಡಾನೆ ಪ್ರಸವಕ್ಕೀಡಾಗಿ ಮರಿಯನ್ನು ಜೊತೆಗೆ ಒಯ್ಯಲಾಗದ ಸ್ಥಿತಿಯಾಗಿತ್ತೇ ಅನ್ನುವ ಪ್ರಶ್ನೆ ಎದುರಾಗಿದೆ. ಆನೆ ಮರಿಯ ದೇಹ ಬಿಳಿಯಾಗಿದ್ದು ನೀರಿನಲ್ಲಿ ತೇಲಿಕೊಂಡು ಬಂದಿದೆ. ಸತ್ತು ಒಂದೆರಡು ದಿನ ಆದಬಳಿಕವೇ ನೀರಿನಲ್ಲಿ ತೇಲುವುದರಿಂದ ತಾಯಿ ಕಾಡಾನೆ ಬಗ್ಗೆಯೂ ಆತಂಕ ಇದೆ. ಘಟ್ಟಗಳಲ್ಲಿ ಧುಮ್ಮಿಕ್ಕುವ ನದಿಗಳನ್ನು ದಾಟುವಾಗಲೋ ಏನೋ ಆನೆ ಮರಿ ನೀರುಪಾಲಾಗಿರುವ ಸಾಧ್ಯತೆಯಿದೆ. 

ರಾತ್ರಿ ವೇಳೆ ಆನೆ ಮರಿಯ ಮೃತದೇಹವನ್ನು ನೀರಿನಿಂದ ಮೇಲೆತ್ತುವುದು ಸಾಧ್ಯವಾಗಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬಂದಿ ಆನೆ ಮರಿಗಾಗಿ ಹುಡುಕಾಟ ನಡೆಸಿದ್ದಾರೆ.

Baby elephant dies after heavy rains in Subramanya Mangalore.