Shiradi Ghat, U T Khader: ಮಂಗಳೂರು - ಬೆಂಗಳೂರು ಮಧ್ಯೆ ಹೆದ್ದಾರಿ ನಿರ್ಬಂಧ ; ಪ್ರಯಾಣಿಕರಿಗೆ ಸಮಸ್ಯೆ, ಘಾಟ್ ಬಂದ್ ಮಾಡೋ ಮುನ್ನ ಜಿಲ್ಲಾಧಿಕಾರಿಗಳು ಮಾತಾಡಿಕೊಳ್ಳಿ ; ಸ್ಪೀಕರ್ ಯು.ಟಿ.ಖಾದರ್ 

19-07-24 08:56 pm       Mangalore Correspondent   ಕರಾವಳಿ

ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೂರು ಹೆದ್ದಾರಿಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್ ಗಳನ್ನು ಬಂದ್ ಮಾಡುವುದರಲ್ಲಿ ಜಿಲ್ಲಾಡಳಿತಗಳ ನಡುವೆ ಸಮನ್ವಯತೆ ಕೊರತೆ ಇರುವುದು ಕಂಡುಬರುತ್ತಿದೆ.

ಬೆಂಗಳೂರು, ಜುಲೈ.19: ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೂರು ಹೆದ್ದಾರಿಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್ ಗಳನ್ನು ಬಂದ್ ಮಾಡುವುದರಲ್ಲಿ ಜಿಲ್ಲಾಡಳಿತಗಳ ನಡುವೆ ಸಮನ್ವಯತೆ ಕೊರತೆ ಇರುವುದು ಕಂಡುಬರುತ್ತಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಕಳೆದ ರಾತ್ರಿ ಮಡಿಕೇರಿ ಘಾಟ್ ಬಂದ್ ಮಾಡಿದ್ದರಿಂದ ನೂರಾರು ಜನರು ರಸ್ತೆ ಮಧ್ಯೆ ಅತಂತ್ರರಾಗಿದ್ದರು. ಇದು ಉಭಯ ಜಿಲ್ಲೆಗಳ ಜಿಲ್ಲಾಡಳಿತದ ಪೂರ್ವ ಸಿದ್ಧತೆಯ ಕೊರತೆಯಾಗಿದೆ. ಮಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಪೂರ್ವ‌ ಸಿದ್ಧತೆಯೊಂದಿಗೆ ಘಾಟ್ ಬಂದ್ ಬಗ್ಗೆ ಚಿಂತಿಸಬೇಕು. ಒಂದೊಂದು ಜಿಲ್ಲೆಯವರು ತೀರ್ಮಾನ ತೆಗೆದುಕೊಂಡರೆ ಜನರಿಗೆ ಸಮಸ್ಯೆಯಾಗುತ್ತದೆ. 

ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ 8 ರಿಂದ ಬೆಳಗ್ಗೆ 6ರ ತನಕ ರಸ್ತೆ ನಿರ್ಬಂಧ ಮಾಡಬೇಕು. ಲೋಕೋಪಯೋಗಿ ಇಲಾಖೆ ರಸ್ತೆ ಸುರಕ್ಷತೆಗೆ ಪ್ರಾಮುಖ್ಯತೆ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೆಲ್ವಕುಮಾರ್ ಅವರಿಗೆ ಯು.ಟಿ.ಖಾದರ್ ಸೂಚಿಸಿದ್ದಾರೆ.

ದಿನನಿತ್ಯ ಸಹಸ್ರಾರು ಮಂದಿ ಮಂಗಳೂರು- ಬೆಂಗಳೂರು ಮಧ್ಯೆ ಪ್ರಯಾಣಿಸುತ್ತಾರೆ. ಪ್ರಯಾಣಿಕರು ಬಸ್, ಕಾರುಗಳನ್ನು ಆಶ್ರಯಿಸುತ್ತಾರೆ. ನಿತ್ಯ ಬಳಕೆಯ ವಸ್ತುಗಳ ಟ್ರಕ್ ಗಳೂ ಸಂಚರಿಸುತ್ತವೆ. ಆದರೆ ಈ ಪ್ರಮುಖ ಮೂರೂ ಘಾಟ್ ರಸ್ತೆಗಳನ್ನು ಬಂದ್ ಮಾಡಿದರೆ ಜನರು ಪರದಾಟ ನಡೆಸಬೇಕಾಗುತ್ತದೆ. ವಿಮಾನ ಸಂಚಾರ ಜನಸಾಮಾನ್ಯರ ಕೈಗೆಟಕದು. ರೈಲು ಸಂಚಾರ ತುರ್ತು ಸಂದರ್ಭಗಳಿಗೆ ಅನುಗುಣವಾಗಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಸಂಚಾರ ಅನಿವಾರ್ಯವಾಗಿರುತ್ತದೆ. 

ಮಡಿಕೇರಿ ಘಾಟ್ ನಲ್ಲಿ ನಿನ್ನೆ ಆದಂತಹ ಸಮಸ್ಯೆ ಮರುಕಳಿಸದಂತೆ ವ್ಯವಸ್ಥೆ ಮಾಡಬೇಕಾದುದು ಆಸುಪಾಸಿನ ಜಿಲ್ಲೆಗಳ ನಾಲ್ಕೂ ಜಿಲ್ಲಾಧಿಕಾರಿಗಳ ಹಾಗೂ ಲೋಕೋಪಯೋಗಿ ಇಲಾಖೆಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

Mangalore Bangalore shiradhi ghat closed, speaker U T Khader slams administration over planning.