ಶಿರಾಡಿ ಘಾಟ್ ಹೆದ್ದಾರಿ ನಿರ್ಬಂಧ ಸಡಿಲಿಕೆ ; ಹಗಲಿನಲ್ಲಿ ವಾಹನ ಸಂಚಾರಕ್ಕೆ ಅವಕಾಶ, ರಾತ್ರಿ ಮಾತ್ರ ನಿರ್ಬಂಧ ಮುಂದುವರಿಕೆ 

20-07-24 03:59 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ಮಳೆ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಶಿರಾಡಿ ಘಾಟ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಹಗಲಿನ ವೇಳೆಯಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 

ಮಂಗಳೂರು, ಜುಲೈ 20: ಕರಾವಳಿಯಲ್ಲಿ ಮಳೆ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಶಿರಾಡಿ ಘಾಟ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಹಗಲಿನ ವೇಳೆಯಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 

ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಮಾರ್ಪಡಿಸಿದ್ದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಎಲ್ಲ ರೀತಿಯ ವಾಹನಗಳಿಗೆ ಶಿರಾಡಿ ಘಾಟ್ ನಲ್ಲಿ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ. ರಾತ್ರಿ ವೇಳೆ ತುರ್ತು ಸಂಚಾರದ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಇದೆ. 

ಎರಡು ದಿನಗಳ ಹಿಂದೆ ಭಾರೀ ಭೂಕುಸಿತ ಆಗಿದ್ದರಿಂದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಇದರಿಂದಾಗಿ ಮಂಗಳೂರು- ಬೆಂಗಳೂರು ಸಂಚಾರಕ್ಕೆ ದೊಡ್ಡ ಬ್ರೇಕ್ ಬಿದ್ದಿತ್ತು. ಅತ್ತ ಸಂಪಾಜೆ ಹೆದ್ದಾರಿಯೂ ರಾತ್ರಿ ವೇಳೆ ಬಂದ್ ಆಗಿದ್ದರಿಂದ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮಾತ್ರ ವಾಹನಗಳು ಸಂಚರಿಸಬೇಕಿತ್ತು. ಬೆಂಗಳೂರು ಕಡೆಯಿಂದ ಬಂದ ವಾಹನಗಳು ಸಕಲೇಶಪುರ ವರೆಗೆ ಬಂದು ಹೆದ್ದಾರಿ ಬಂದ್ ಆಗಿದ್ದರಿಂದ ತೊಂದರೆಗೀಡಾಗಿದ್ದರು. ಇದೀಗ ಸಕಲೇಶಪುರ ವಿಭಾಗಾಧಿಕಾರಿ ಹಗಲಿನ ವೇಳೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದೆಂದು ವರದಿ ನೀಡಿದ್ದಾರೆ. ಅಲ್ಲದೆ, ಕುಸಿದಿರುವ ಮಣ್ಣನ್ನು ಹೆದ್ದಾರಿಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.

The Hassan district administration, which prohibited the movement of vehicles on Shiradi Ghat stretch of NH-75, has revised the order and allowed the movement of vehicles during the day.