Mangalore News, Ullal, Talapady: ತಲಪಾಡಿ ಟೋಲ್ ಬಳಿಯ ಗೂಡಂಗಡಿಗಳ ತೆರವಿಗೆ ಬಂದ ಜೆಸಿಬಿ ; ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೆ ಬರೀ ಅನ್ಯಾಯ ! ಹೆದ್ದಾರಿ ಅಧಿಕಾರಿಗಳ ತಾರತಮ್ಯಕ್ಕೆ ಬಡ ವ್ಯಾಪಾರಿಗಳ ವಿರೋಧ 

20-07-24 08:29 pm       Mangalore Correspondent   ಕರಾವಳಿ

ಸುಪ್ರೀಂ ಕೋರ್ಟ್ ಆದೇಶದಂತೆ ಕುಂದಾಪುರದಿಂದ ತಲಪಾಡಿ ತನಕದ ಬೀದಿ ಬದಿಯ ಅಂಗಡಿಗಳನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ.

ಉಳ್ಳಾಲ, ಜು.20: ಸುಪ್ರೀಂ ಕೋರ್ಟ್ ಆದೇಶದಂತೆ ಕುಂದಾಪುರದಿಂದ ತಲಪಾಡಿ ತನಕದ ಬೀದಿ ಬದಿಯ ಅಂಗಡಿಗಳನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ. ತಲಪಾಡಿ ಟೋಲ್ ಗೇಟನ್ನೇ ಟಾರ್ಗೆಟ್ ಮಾಡಿರುವ ಅಧಿಕಾರಿಗಳನ್ನ ಎರಡನೇ ಬಾರಿ ಗೂಡಂಗಡಿ ವ್ಯಾಪಾರಿಗಳು ಹಿಮ್ಮೆಟ್ಟಿಸಿದ್ದು, ಮತ್ತೆ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ. 

ಕುಂದಾಪುರದಿಂದ ತಲಪಾಡಿ ವರೆಗಿನ ರಾ.ಹೆ.ಯಲ್ಲಿರುವ ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸಲು 2024 ರ ಮಾಚ್೯ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಂದಿತ್ತು. ಅಂಗಡಿಗಳನ್ನ ತೆರವುಗೊಳಿಸುವಂತೆ ಧ್ವನಿವರ್ಧಕ ಮೂಲಕ ಡಂಗುರವನ್ನೂ ಸಾರಲಾಗಿತ್ತು. ಇಷ್ಟಾಗಿಯೂ ಅಂಗಡಿಗಳನ್ನ ವ್ಯಾಪಾರಿಗಳು ತೆರವುಗೊಳಿಸದ ಹಿನ್ನೆಲೆಯಲ್ಲಿ ಕಳೆದ ಮಾಚ್೯ ತಿಂಗಳಲ್ಲಿ ಅಂಗಡಿ ಮಾಲೀಕರಿಗೆ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ನೋಟೀಸು ನೀಡಿದ್ದರು. 

ನೋಟೀಸು ಬಂದ ನಂತರ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಒಳಬಾಡಿಗೆಗೆ ನೀಡಿದ್ದು, ಇನ್ನು ಕೆಲವರು ಲಕ್ಷಾಂತರ ಬೆಲೆಗೆ ಮಾರಾಟ ಮಾಡಿದ್ದಾರೆ. ಇನ್ನು ಕೆಲವರು ತಮ್ಮ ಅಂಗಡಿಗಳಲ್ಲೇ ಉಳಿದಿದ್ದರು. ಕಳೆದ ಜು.5 ರಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಲಪಾಡಿ ಟೋಲ್ ಫ್ಲಾಝಾದ ಬಳಿ ಜೆಸಿಬಿಗಳನ್ನ ತಂದು ಅಲ್ಲಿನ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ ಸ್ಥಳೀಯರು ಮತ್ತು ವ್ಯಾಪಾರಿಗಳ ವಿರೋಧದ ನಡುವೆ ಮತ್ತೆ ಜು.20ರ ಗಡುವು ನೀಡಿ ಅಧಿಕಾರಿಗಳು ವಾಪಾಸು ತೆರಳಿದ್ದರು. 

ಮತ್ತೆ ಗೂಡಂಗಡಿಗಳ ಮೇಲೆ ಪ್ರಹಾರ 

ತಲಪಾಡಿ ಟೋಲ್ ಪ್ಲಾಝ ಬಳಿಯ ಗೂಡಂಗಡಿಗಳ ಮಾಲಕರಿಗೆ ಕೊಟ್ಟ ಗಡುವು ಮುಗಿದಿದ್ದು ಶನಿವಾರ ಮತ್ತೆ ಹೆದ್ದಾರಿ ಅಧಿಕಾರಿಗಳು ಜೆಸಿಬಿ ಸಮೇತ ಬಂದು ಅಂಗಡಿಗಳ ತೆರವಿಗೆ ಮುಂದಾಗಿದ್ದಾರೆ. ಜೆಸಿಬಿ ಗರ್ಜನೆಗೆ ಮೂವರು ವ್ಯಾಪಾರಿಗಳು ತಮ್ಮ ಗೂಡಂಗಡಿಗಳನ್ನ ಸ್ವತಃ ತೆರವುಗೊಳಿಸಿದ್ದಾರೆ. ಉಳಿದ ವ್ಯಾಪಾರಿಗಳು ಅಧಿಕಾರಿಗಳ ತಾರತಮ್ಯ ಧೋರಣೆಯನ್ನ ವಿರೋಧಿಸಿದ್ದು, ಹೆದ್ದಾರಿಗಳನ್ನ ಅತಿಕ್ರಮಿಸಿರುವ ಎಲ್ಲಾ ಅಂಗಡಿ, ಮಳಿಗೆಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದಾಗ ಉಳ್ಳಾಲ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ವ್ಯಾಪಾರಿಗಳ ವಿರೋಧದಿಂದ ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಉಳ್ಳವರ ಅಂಗಡಿಗಳ ರಕ್ಷಣೆ, ಗೂಡಂಗಡಿಗಳಿಗೆ ಕಾನೂನು 

ತಲಪಾಡಿ ಪಂಚಾಯತ್ ಮುಂಭಾಗದ ನೂತನ ಪೆಟ್ರೋಲ್ ಪಂಪ್ ಬಳಿಯಲ್ಲಿ ಹೆದ್ದಾರಿಯನ್ನ ಅತಿಕ್ರಮಿಸಿ ಛಾಯ್ ಪತ್ತಿ ಹೆಸರಿನ ಸುಸಜ್ಜಿತ ಹೊಟೇಲ್ ಕಾರ್ಯಾಚರಿಸುತ್ತಿದೆ. ಅಲ್ಲದೆ ಟೋಲ್ ಬಳಿಯಲ್ಲೇ ಹೆದ್ದಾರಿಯನ್ನ ಅತಿಕ್ರಮಿಸಿ ಒಳಚರಂಡಿಯ ಮೇಲೆಯೇ ಮರಳು ಧಂದೆಕೋರನೋರ್ವ ಡಾಬಾವನ್ನು ನಿರ್ಮಿಸುತ್ತಿದ್ದು ಇವರ ವ್ಯಾಪಾರಕ್ಕೆ ಅಡ್ಡಿಯೆಂಬಂತಿರುವ ಸಣ್ಣ ಗೂಡಂಗಡಿ ವ್ಯಾಪಾರಸ್ಥರ ಮೇಲೆ ಅಧಿಕಾರಿಗಳನ್ನ ಛೂ ಬಿಟ್ಟು ಪ್ರಹಾರ ನಡೆಸುತ್ತಿದ್ದಾರೆಂದು ಟೋಲ್ ಬಳಿಯ ಗೂಡಂಗಡಿ ವ್ಯಾಪಾರಿ ಹಮೀದ್ ಆರೋಪಿಸಿದ್ದಾರೆ. ಸುಪ್ರೀಮ್ ಕೋರ್ಟ್ ಆದೇಶವು ಎಲ್ಲ ವ್ಯಾಪಾರಿಗಳ ವಿರುದ್ಧವೂ ಸಮಾನವಾಗಿ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ.

ಸುಪ್ರೀಮ್ ಕೋರ್ಟ್ ಆದೇಶವು ಎಲ್ಲಾ ಹೆದ್ದಾರಿ ಅತಿಕ್ರಮಿಸಿದ ವ್ಯಾಪಾರಿಗಳಿಗೆ ಅನ್ವಯಿಸತಕ್ಕದ್ದು. ಅಧಿಕಾರಿಗಳು ಕೇವಲ ಬಡಪಾಯಿ ಗೂಡಂಗಡಿಗಳನ್ನ ಮಾತ್ರ ತೆರವುಗೊಳಿಸಿದರೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರಿದಂತಾಗುತ್ತದೆ. ಹೆದ್ದಾರಿ ಉದ್ದಕ್ಕೂ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಕೇವಲ ತಲಪಾಡಿ ಟೋಲ್ ಪ್ರದೇಶವನ್ನೇ ಟಾರ್ಗೆಟ್ ಮಾಡೋದು ಸರಿಯಾದ ಕ್ರಮ ಅಲ್ಲ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ಧೀಕ್ ತಲಪಾಡಿ ಹೇಳಿದ್ದಾರೆ.

Mangalore Talapady toll, petty shops destroyed by ullal municipal, public slams officlas for not touching big shops.