Kerala MP, Brijesh Chowta, Railway; ಮಂಗಳೂರು ರೈಲ್ವೇ ವಿಭಾಗದ ಬೇಡಿಕೆ ; ಪಾಲ್ಘಾಟ್ ರೈಲ್ವೇ ವಿಭಜನೆಗೆ ಕೇರಳದ ಸಂಸದರ ಆಕ್ಷೇಪ, ರೈಲ್ವೇ ಸಚಿವರಿಗೆ ಪತ್ರ ಬರೆದ ಕಮ್ಯುನಿಸ್ಟ್ ಸಂಸದ, ಮಂಗಳೂರೇ ದಕ್ಷಿಣ ರೈಲ್ವೇಗೆ ಚಿನ್ನದ ಮೊಟ್ಟೆ ! 

22-07-24 10:49 pm       Mangalore Correspondent   ಕರಾವಳಿ

ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ರೈಲ್ವೇಯನ್ನು ವಿಭಜಿಸಿ ಪ್ರತ್ಯೇಕ ವಲಯ ಮಾಡಬೇಕೆನ್ನುವುದು ಬಹುಕಾಲದ ಬೇಡಿಕೆ. ಕರ್ನಾಟಕದಲ್ಲಿ ಕೇವಲ 36 ಕಿಮೀ ವ್ಯಾಪ್ತಿಯ ಹಳಿಯನ್ನು ಮಾತ್ರ ಹೊಂದಿರುವ ಪಾಲ್ಘಾಟ್ ವಿಭಾಗವು ಮಂಗಳೂರಿನ ರೈಲ್ವೇ ಅಭಿವೃದ್ಧಿಗೆ ಯಾವುದೇ ಕೊಡುಗೆ ಕೊಡುತ್ತಿಲ್ಲ ಎನ್ನುವುದು ಹಳೆಯ ಆರೋಪ.

ಮಂಗಳೂರು, ಜುಲೈ 22: ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ರೈಲ್ವೇಯನ್ನು ವಿಭಜಿಸಿ ಪ್ರತ್ಯೇಕ ವಲಯ ಮಾಡಬೇಕೆನ್ನುವುದು ಬಹುಕಾಲದ ಬೇಡಿಕೆ. ಕರ್ನಾಟಕದಲ್ಲಿ ಕೇವಲ 36 ಕಿಮೀ ವ್ಯಾಪ್ತಿಯ ಹಳಿಯನ್ನು ಮಾತ್ರ ಹೊಂದಿರುವ ಪಾಲ್ಘಾಟ್ ವಿಭಾಗವು ಮಂಗಳೂರಿನ ರೈಲ್ವೇ ಅಭಿವೃದ್ಧಿಗೆ ಯಾವುದೇ ಕೊಡುಗೆ ಕೊಡುತ್ತಿಲ್ಲ ಎನ್ನುವುದು ಹಳೆಯ ಆರೋಪ. ಆದರೆ, ಮಂಗಳೂರಿನ ಭಾಗದ ಸ್ವರ ಕೇಳಿಬಂದಾಗಲೆಲ್ಲ ಕೇರಳದ ಸಂಸದರ ಆಕ್ಷೇಪ ಕೇಳಿಬರುತ್ತಲೇ ಇರುತ್ತವೆ. ಇತ್ತ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರೈಲ್ವೇ ಬೇಡಿಕೆ ಈಡೇರಿಸುವುದಕ್ಕಾಗಿ ಟೊಂಕ ಕಟ್ಟಿದ್ದು ತಿಳಿಯುತ್ತಲೇ ಕೇರಳದ ಸಂಸದರು ಆಕ್ಷೇಪದ ಸ್ವರ ಎಬ್ಬಿಸಿದ್ದಾರೆ.

ಸಿಪಿಐ(ಎಂ) ಪಕ್ಷದ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಪಾಲ್ಘಾಟ್ ವಿಭಾಗದಿಂದ ಮಂಗಳೂರನ್ನು ಪ್ರತ್ಯೇಕಿಸಬಾರದು ಎಂದು ಒತ್ತಾಯಿಸಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. ಪಾಲ್ಘಾಟ್ ವಿಭಾಗವನ್ನು ವಿಭಜನೆ ಮಾಡಿದರೆ, ಆಡಳಿತಾತ್ಮಕವಾಗಿ ತೊಂದರೆ ಆಗಲಿದೆ. ಕೇರಳಕ್ಕೆ ಈಗಾಗಲೇ ರೈಲ್ವೇ ಕೋಚ್ ಫ್ಯಾಕ್ಟರಿ ಸೇರಿದಂತೆ ರೈಲ್ವೇ ಝೋನ್ ಬೇಡಿಕೆ ಇಟ್ಟಿರುವುದನ್ನು ಈಡೇರಿಸಿಲ್ಲ. ಈಗ ನವ ಮಂಗಳೂರು ಬಂದರನ್ನು ಒಳಗೊಂಡ ಮಂಗಳೂರನ್ನು ಪ್ರತ್ಯೇಕಿಸಿದರೆ ರೆವಿನ್ಯೂ ವಿಷಯದಲ್ಲಿ ಕೇರಳಕ್ಕೆ ಕೊರತೆಯಾಗಲಿದೆ. ಹೀಗಾಗಿ ಇಂತಹ ಪ್ರಸ್ತಾಪ ಏನಾದರೂ ಇದ್ದರೆ ಕೈಬಿಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಹಿಂದೆ ಮೇ ತಿಂಗಳಲ್ಲಿ ಪಾಲ್ಘಾಟ್ ರೈಲ್ವೇ ವಿಭಾಗವು ದಕ್ಷಿಣ ರೈಲ್ವೇಯನ್ನು ವಿಭಜಿಸುವ ಯಾವುದೇ ಪ್ರಸ್ತಾಪ ಇಲ್ಲವೆಂದು ನೀಡಿದ್ದ ಹೇಳಿಕೆಯನ್ನು ರಾಜ್ಯಸಭೆ ಸದಸ್ಯ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಿಜಕ್ಕಾದರೆ, ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ದೊಡ್ಡ ರೆವಿನ್ಯೂ ತಂದುಕೊಡುವುದು ಮಂಗಳೂರಿನ ಬಂದರು. ವಿದೇಶಕ್ಕೆ ರಫ್ತಾಗುವ ಸರಕಾಗಲೀ, ಮಂಗಳೂರಿನಿಂದ ಕೇರಳದ ಕಡೆಗೆ ಹೋಗುವ ಪೆಟ್ರೋಲಿಯಂ, ಗೊಬ್ಬರ ಇನ್ನಿತರ ಗೂಡ್ಸ್ ಆಗಲೀ ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ದೊಡ್ಡ ಆದಾಯ ತಂದುಕೊಡುತ್ತಿದೆ. ದಕ್ಷಿಣ ರೈಲ್ವೇಯ ಪಾಲ್ಘಾಟ್ ವಿಭಾಗದ ಹಳಿ ಸುರತ್ಕಲ್ ಬಳಿಯ ತೋಕೂರು ವರೆಗಿದ್ದು, ಅದರಲ್ಲಿ ಎನ್ಎಂಪಿಟಿ ಬಂದರು, ಎಂಸಿಎಫ್, ಎಂಆರ್ ಪಿಎಲ್ ಒಳಗೊಳ್ಳುತ್ತದೆ. ಹೀಗಾಗಿ ಇಡೀ ದಕ್ಷಿಣ ಭಾರತದಲ್ಲಿ ನೋಡಿದರೆ, ಅತಿ ಹೆಚ್ಚು ಆದಾಯ ಸಂಗ್ರಹಿಸುವ ಹತ್ತು ರೈಲು ನಿಲ್ದಾಣಗಳಲ್ಲಿ ಮಂಗಳೂರು ಒಂದಾಗಿದೆ.

ಆದರೆ ಈ ಆದಾಯದ ಲಾಭ ಪಡೆಯುತ್ತಿರುವುದು ಬಹುಪಾಲು ಕೇರಳದ ವ್ಯಾಪ್ತಿಯಿರುವ ದಕ್ಷಿಣ ರೈಲ್ವೇ ವಿಭಾಗ. ಆಡಳಿತಾತ್ಮಕ ಮತ್ತು ಒಟ್ಟು ಲಾಭದ ನೆಲೆಯಲ್ಲಿ ಇತರೇ ರೈಲ್ವೇ ವಿಭಾಗಕ್ಕೆ ಹೋಲಿಸಿದರೆ, ಮಂಗಳೂರಿನ ಬಂದರಿನ ಕಾರಣದಿಂದ ಪಾಲ್ಘಾಟ್ ರೈಲ್ವೇ ವಿಭಾಗವು ಉತ್ತಮ ಸ್ಥಿತಿಯಲ್ಲಿದೆ. ಆದರೆ, ಈ ಲಾಭದ ಪಾಲನ್ನು ಮಂಗಳೂರಿಗೆ ವ್ಯಯ ಮಾಡುತ್ತಿಲ್ಲ ಎನ್ನುವುದು ಮಂಗಳೂರು ಸಂಸದ ಬ್ರಿಜೇಶ್ ಚೌಟರ ಆಕ್ಷೇಪ. ಇತ್ತೀಚೆಗೆ, ಇದೇ ಕಾರಣಕ್ಕೆ ರೈಲ್ವೇ ರಾಜ್ಯ ಸಚಿವ ಸೋಮಣ್ಣ ಅವರನ್ನು ಮಂಗಳೂರಿಗೆ ಕರೆಸಿ ರೈಲ್ವೇ ಚಟುವಟಿಕೆಗಳಿಗೆ ವೇಗ ನೀಡಬೇಕು ಮತ್ತು ಪ್ರತ್ಯೇಕ ರೈಲ್ವೇ ವಲಯ ಮಾಡುವುದಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದರು. ಸಂಸದರ ಎಲ್ಲ ಮನವಿಗೂ ಸೋಮಣ್ಣ ಓಕೆ ಎಂದಿರುವುದು ಕೇರಳದ ಸಂಸದರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಪಾಲ್ಘಾಟ್ ವಿಭಜನೆ ವಿರೋಧಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಇಡೀ ದೇಶದಲ್ಲಿ ರೈಲು ಸಂಚಾರ ವ್ಯವಸ್ಥೆಯನ್ನು ಅತಿ ಹೆಚ್ಚು ಬಳಕೆ ಮಾಡುತ್ತಿರುವುದರಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಇದೇ ಕಾರಣಕ್ಕೋ ಏನೋ, ರೈಲ್ವೇಯಲ್ಲಿ ಅಂದಾಜು 70 ಶೇಕಡಾದಷ್ಟು ಸಿಬಂದಿಯೂ ಮಲಯಾಳಿಗಳೇ ಇದ್ದಾರೆ. ದೆಹಲಿಯ ರೈಲ್ವೇ ಭವನದಲ್ಲಿ ಐದಾರು ಸಾವಿರ ಸಿಬಂದಿ ಇದ್ದರೂ, 60 ಶೇ.ಕ್ಕೂ ಹೆಚ್ಚು ಸಿಬಂದಿ ಮಲಯಾಳಿಗಳೇ ಇದ್ದಾರಂತೆ. ಹೀಗಾಗಿ ಬೇರಾವುದೇ ರಾಜ್ಯಗಳ ರೈಲ್ವೇ ಬೇಡಿಕೆ ಏನಿದ್ದರೂ ಕೇರಳದ್ದೇ ಲಾಬಿ ಹೆಚ್ಚು ನಡೆಯುತ್ತದೆ ಎನ್ನುತ್ತಾರೆ, ಮಂಗಳೂರಿನ ರೈಲ್ವೇ ಹೋರಾಟಗಾರ ಹನುಮಂತ ಕಾಮತ್. ಕೇರಳದ ಜನಪ್ರತಿನಿಧಿಗಳೂ ರೈಲ್ವೇ ಇನ್ನಿತರ ಯಾವುದೇ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವುದಕ್ಕೆ ಹೆಚ್ಚು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ, ಕರ್ನಾಟಕದ ಕರಾವಳಿಗೆ ರೈಲ್ವೇ ಕೊಡುಗೆ ಸಿಗುವುದಕ್ಕಿಂತಲೂ ಹೆಚ್ಚು ಒಂದೂ ಬಿಜೆಪಿ ಸಂಸದರಿಲ್ಲದ ಕೇರಳಕ್ಕೆ ಸಿಗ್ತಿದ್ದುದೂ ಇದೇ ಕಾರಣಕ್ಕೆ.

ಈಗೇನೋ, ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗದ ಬೇಡಿಕೆಯ ವಿಚಾರ ಹೆಚ್ಚು ಚರ್ಚೆಗೆ ಬಂದಿದ್ದು ಜಾಲತಾಣದಲ್ಲಿಯೂ ಅಭಿಯಾನ ಶುರುವಾಗಿದೆ. ಮಂಗಳೂರು, ಹಾಸನ, ಉಡುಪಿ, ಕಾರವಾರ ಸೇರಿ ರಾಜ್ಯದ ಕರಾವಳಿಗೆ ಪ್ರತ್ಯೇಕ ರೈಲ್ವೇ ಬೇಡಿಕೆಯ ಬಗ್ಗೆ ಆಗ್ರಹ ಕೇಳಿಬರುತ್ತಿದೆ. ಮಂಗಳೂರಿನ ತೋಕೂರಿನಿಂದ ಮುಂಬೈ ವರೆಗೆ ಕೊಂಕಣ ರೈಲ್ವೇಯ ಪ್ರತ್ಯೇಕ ನಿಗಮ ಇದ್ದರೂ, ಅದು ಪೂರ್ತಿ ನಷ್ಟದಲ್ಲಿದೆ. ಹೀಗಾಗಿ ಕೊಂಕಣ ರೈಲ್ವೇ ನಿಗಮವನ್ನು ಭಾರತೀಯ ರೈಲ್ವೇ ಜೊತೆಗೆ ವಿಲೀನಗೊಳಿಸಿ ಮಂಗಳೂರನ್ನು ಪ್ರತ್ಯೇಕ ವಿಭಾಗ ಮಾಡುವ ಪ್ರಸ್ತಾಪವನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ರೈಲ್ವೇ ಸಚಿವರ ಮುಂದಿಟ್ಟಿದ್ದಾರೆ. ಚೆಂಡು ಈಗ ದೆಹಲಿ ಅಂಗಳ ಸೇರಿದ್ದು, ಕೇರಳ ಲಾಬಿಯ ನಡುವೆ ರೈಲ್ವೇ ಸಚಿವರು ಆ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಾರಾ ನೋಡಬೇಕು.

MP John Brittas has voiced strong opposition to the reported plan to bifurcate the Palakkad Railway Division to create a new Mangalore Division. In a letter to Railway Minister Ashwini Vaishnaw, Brittas expressed concern over the potential adverse impact on Kerala’s railway infrastructure and socio-economic framework.