Mangalore Rain, Sea Erosion: ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರ ; ರಸ್ತೆ ನುಂಗಲು ಮುಂದಾದ ರಕ್ಕಸ ಅಲೆಗಳು, ಬಟ್ಟಪ್ಪಾಡಿ ಬಳಿಕ ಉಚ್ಚಿಲ ಬೀಚ್ ರಸ್ತೆ ಸರದಿ; ಸಂಪರ್ಕ ಕಡಿತದ ಭೀತಿ 

25-07-24 07:46 pm       Mangalore Correspondent   ಕರಾವಳಿ

ಉಳ್ಳಾಲ ತಾಲೂಕಿನ ಸೋಮೇಶ್ವರ ನ್ಯೂಉಚ್ಚಿಲ ಎಂಬಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ತೀರ ಪ್ರದೇಶದ ಮನೆ ಮತ್ತು ರಸ್ತೆಯನ್ನು ರಕ್ಕಸ ಅಲೆಗಳು ನುಂಗಲು ಮುಂದಾಗಿದ್ದು ಬಟ್ಟಪ್ಪಾಡಿ ನಂತರ ಸೋಮೇಶ್ವರ- ಉಚ್ಚಿಲ ಬೀಚ್ ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಉಳ್ಳಾಲ, ಜು.25: ಉಳ್ಳಾಲ ತಾಲೂಕಿನ ಸೋಮೇಶ್ವರ ನ್ಯೂಉಚ್ಚಿಲ ಎಂಬಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ತೀರ ಪ್ರದೇಶದ ಮನೆ ಮತ್ತು ರಸ್ತೆಯನ್ನು ರಕ್ಕಸ ಅಲೆಗಳು ನುಂಗಲು ಮುಂದಾಗಿದ್ದು ಬಟ್ಟಪ್ಪಾಡಿ ನಂತರ ಸೋಮೇಶ್ವರ- ಉಚ್ಚಿಲ ಬೀಚ್ ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಕಳೆದ ಕೆಲವು ವರ್ಷಗಳಿಂದ ಸೋಮೇಶ್ವರ ಉಚ್ಚಿಲ ಪ್ರದೇಶಗಳಲ್ಲಿ ಕಡಲ್ಕೊರೆತದ ಹಾವಳಿ ಮುಂದುವರಿದಿದ್ದು ಸಾರ್ವಜನಿಕರ ಅನೇಕ ಆಸ್ತಿ ಪಾಸ್ತಿಗಳು ನಷ್ಟ ಆಗಿವೆ. ಕಳೆದೆರಡು ವರ್ಷಗಳ ಹಿಂದೆಯೇ ಬಟ್ಟಪ್ಪಾಡಿ ಪ್ರದೇಶದ ಬೀಚ್ ರಸ್ತೆಯು ಕಡಲಿಗೆ ಆಹುತಿಯಾಗಿದ್ದು ಉಚ್ಚಿಲ- ಬಟ್ಟಪ್ಪಾಡಿ ಬೀಚ್ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಡಲ್ಕೊರೆತ ಪೀಡಿತ ಬಟ್ಟಪ್ಪಾಡಿ ಪ್ರದೇಶಕ್ಕೆ ಬಸವರಾಜ್ ಬೊಮ್ಮಾಯಿ, ಸಿದ್ಧರಾಮಯ್ಯ ಸೇರಿದಂತೆ ಎರಡು ಮುಖ್ಯಮಂತ್ರಿಗಳು ಬಂದು ಅವಲೋಕಿಸಿ ತೆರಳಿದರೂ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೀಗ ಬಟ್ಟಪ್ಪಾಡಿಯ ನಂತರ ನ್ಯೂಉಚ್ಚಿಲದ ವಾಸ್ಕೊ ರೆಸಾರ್ಟ್ ಎದುರಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ದೈತ್ಯಾಕಾರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಕಡಲ ತೀರದಲ್ಲಿರುವ ಸೋಮೇಶ್ವರ ಗ್ರಾ.ಪಂ ನ ಮಾಜಿ ಸದಸ್ಯ ಯೋಗೀಶ್ ಎಂಬವರ ಮನೆಯೂ ಸಮುದ್ರ ಪಾಲಾಗಲು ಕ್ಷಣಗಣನೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯೋಗೀಶ್ ಅವರ ಕುಟುಂಬ ಸದಸ್ಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ದೈತ್ಯ ಗಾತ್ರದ ರಕ್ಕಸ ಅಲೆಗಳು ರಸ್ತೆ ಕಬಳಿಸಲು ಕ್ಷಣ ಕ್ಷಣಗಳಲ್ಲೂ ಮುಂದಡಿ ಇಡುತ್ತಿದ್ದು ಸೋಮೇಶ್ವರ- ಉಚ್ಚಿಲ ಬೀಚ್ ರಸ್ತೆ ಸಂಪರ್ಕ ಕಡಿಯುವ ಭೀತಿ ಎದುರಾಗಿದೆ.

ತ್ವರಿತವಾಗಿ ಸಮುದ್ರ ತೀರಕ್ಕೆ ಕಲ್ಲು ಹಾಕುವ ರಕ್ಷಣಾ ಕಾಮಗಾರಿ ನಡೆಸಿದಲ್ಲಿ ರಸ್ತೆ ಮತ್ತು ಯೋಗೀಶ್ ಅವರ ಮನೆ ಉಳಿಸಿಕೊಳ್ಳಲು ಸಾಧ್ಯವಿದೆ. ಕಲ್ಲಿನ ಲಾರಿಗಳು ಸಮುದ್ರದ ತೀರಕ್ಕೆ ಹೋಗುವಷ್ಟು ದಾರಿ ಇದ್ದು ಸುಲಭವಾಗಿ ರಕ್ಷಣಾ ಕಾಮಗಾರಿ ಮಾಡಬಹುದಾಗಿದೆ. ತಡ ಮಾಡಿದರೆ ಮತ್ತೊಂದು ರಸ್ತೆ ಸಂಪರ್ಕ ಕಡಿತಗೊಳ್ಳುವುದು ನಿಶ್ಚಿತ ಎಂದು ಸೋಮೇಶ್ವರ ಪುರಸಭೆ ಸದಸ್ಯರಾದ ರವಿಶಂಕರ್ ಸೋಮೇಶ್ವರ ಹೇಳಿದ್ದಾರೆ.

ನ್ಯೂಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಬೀಚ್ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಶುಕ್ರವಾರದಿಂದಲೇ ಕಡಲ್ಕೊರೆತ ತಡೆಯ ರಕ್ಷಣಾ ಕಾಮಗಾರಿ ನಡೆಸುವುದಾಗಿ ಬಂದರು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಯೋಗೀಶ್ ಎಂಬವರ ಮನೆ ಅಪಾಯದಲ್ಲಿದ್ದು ಕುಟುಂಬ ಸದಸ್ಯರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ.

Sea Erosion fear grips at residents of uchila and Someshwara in Mangalore Ullal.