ಅತಿವೃಷ್ಟಿಗೆ 167 ಕೋಟಿ ನಷ್ಟ ; ಬರೀ 5 ಕೋಟಿ ಬಿಡುಗಡೆ ಮಾಡಿದ್ರೆ, ನಾವು ಹೇಗೆ ಮುಖ ತೋರಿಸಬೇಕ್ರೀ..? 

07-12-20 09:51 pm       Mangaluru Correspondent   ಕರಾವಳಿ

ಅತಿವೃಷ್ಟಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ 167 ಕೋಟಿ ನಷ್ಟದ ಬಗ್ಗೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರೂ, ಬರೀ 5 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದೀರಿ..

ಮಂಗಳೂರು: ಡಿಸೆಂಬರ್,7: ಅತಿವೃಷ್ಟಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ 167 ಕೋಟಿ ನಷ್ಟದ ಬಗ್ಗೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರೂ, ಬರೀ 5 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದೀರಿ.. ಜ‌ನ ಸಾಮಾನ್ಯರ ಪ್ರಶ್ನೆಗಳಿಗೆ ನಾವು ಜನಪ್ರತಿನಿಧಿಗಳು ಏನ್ ಉತ್ತರ ನೀಡಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಶಾಸಕ ಯು.ಟಿ.ಖಾದರ್ ಅವರು ವಿಧಾನಸಭೆ ಕಲಾಪದಲ್ಲಿ ಪ್ರಶ್ನೆ ಮಾಡಿದ್ದಾರೆ. 

ಅಧಿವೇಶನದಲ್ಲಿ ಮಾತನಾಡಿದ ಖಾದರ್ ಅವರು ತನ್ನ ಕ್ಷೇತ್ರದಲ್ಲೇ ಅತಿವೃಷ್ಟಿಯಿಂದ 162 ಮನೆಗಳು ಹಾನಿಗೊಳಗಾಗಿದ್ದು, ಅದರಲ್ಲಿ ಕೆಲವು ಸಂಪೂರ್ಣ ಹಾನಿಗೊಳಗಾಗಿದೆ. ಹಾನಿಗೊಳಗಾದ ಮನೆಗಳಿಗೆ ತಹಶೀಲ್ದಾರ್ ಪರಿಹಾರವಾಗಿ 50,000 ರೂ. ರಾಜೀವ್ ಗಾಂಧಿ ನಿಗಮದ ಪರಿಹಾರ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ಈ ವರೆಗೂ ಸಂತ್ರಸ್ತರಿಗೆ ಒಂದು ನಯಾ ಪೈಸೆಯೂ ಪರಿಹಾರ ಧನ‌ ಸಿಕ್ಕಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಕೇಳಿದರೆ ಇಂದು, ನಾಳೆ ಎಂಬ ಸಬೂಬು ದೊರಕುತ್ತದೆ. ಇದರ ಬಗ್ಗೆ ಅಧಿವೇಶನದಲ್ಲಿ ದಾಖಲಿಸಿ, ತನಿಖೆ ನಡಯಬೇಕು. ಸಂತ್ರಸ್ತರು ಜನಪ್ರತಿನಿಧಿಗಳಲ್ಲಿ ಬಂದು ಪದೇ ಪದೇ ಕೇಳಿದರೆ ನಾವು ಏನೆಂದು ಉತ್ತರಿಸಬೇಕೆಂದು ಹೇಳಿದರು. 

ಮಂಗಳೂರು- ಬೆಂಗಳೂರು ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ, ಚಿಕ್ಕಮಂಗಳೂರು- ಆಗುಂಬೆ- ಮಂಗಳೂರು ರಸ್ತೆಯೂ ಹಾಳಾಗಿ ಹೋಗಿದೆ. ಬಡವರು ವಿಮಾನದಲ್ಲಿ ಸಂಚರಿಸಲು ಅಸಾಧ್ಯ. ಆದುದರಿಂದ ರಸ್ತೆ ದುರಸ್ತಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸಬೇಕು ಎಂದು ಸದನದಲ್ಲಿ‌ ಖಾದರ್ ಒತ್ತಾಯಿಸಿದರು. 

ಅವಿಭಜಿತ ದ.ಕನ್ನಡ , ಉಡುಪಿ ಜಿಲ್ಲೆಗಳ ಅಡಕೆ, ತೆಂಗು, ರಬ್ಬರ್ ಬೆಳೆಗಾರರು ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದು ಅವರಿಗೂ ಶೀಘ್ರ ಪರಿಹಾರ ಕೊಡುವಂತೆ ಖಾದರ್ ಒತ್ತಾಯಿಸಿದ್ದಾರೆ.