ಪಾಲಿಕೆಯ ಎಫ್.ಡಿ. ಮೊತ್ತಕ್ಕೆ ಲೈವ್ ಇ - ಬಿಡ್ಡಿಂಗ್ ! ವಿವಿಧ ಬ್ಯಾಂಕುಗಳ 101 ಖಾತೆಗಳಲ್ಲಿತ್ತು ಬರೋಬ್ಬರಿ 110 ಕೋಟಿ ರೂ., ಎಂಟು ಶೇಕಡಾ ಬಡ್ಡಿದರದಲ್ಲಿ ಎಸ್ ಬಿಐಗೆ ಒಟ್ಟು ಮೊತ್ತ ವರ್ಗಾವಣೆ   

25-07-24 10:57 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸುಮಾರು 110 ಕೋಟಿ ರೂಪಾಯಿ ಹಣವನ್ನು 101 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಎಫ್ ಡಿ ರೂಪದಲ್ಲಿ ಇರಿಸಲಾಗಿತ್ತು.

ಮಂಗಳೂರು, ಜುಲೈ 25: ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸುಮಾರು 110 ಕೋಟಿ ರೂಪಾಯಿ ಹಣವನ್ನು 101 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಎಫ್ ಡಿ ರೂಪದಲ್ಲಿ ಇರಿಸಲಾಗಿತ್ತು. ಇವುಗಳಿಗೆ ಅತಿ ಕಡಿಮೆ ಬಡ್ಡಿ ಸಿಗುತ್ತಿರುವುದನ್ನು ಮನಗಂಡ ಪಾಲಿಕೆಯ ಕಮಿಷನರ್ ಆನಂದ್ ಸಿ.ಎಲ್, ಆ ಹಣವನ್ನು ಇ-ಬಿಡ್ಡಿಂಗ್ ಮಾಡಿಸುವ ಮೂಲಕ ಒಂದೇ ಬ್ಯಾಂಕಿನಡಿಗೆ ತಂದಿದ್ದಾರೆ.

ಪಾಲಿಕೆಯಲ್ಲಿ ಈ ಹಿಂದೆ ಪ್ರೀಮಿಯಂ ರೂಪದಲ್ಲಿ ಸಂಗ್ರಹಗೊಂಡಿದ್ದ ಆದಾಯವನ್ನು ಹಲವಾರು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಹೂಡಿಕೆ ಮಾಡಲಾಗಿತ್ತು. ಸುಮಾರು 110 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತ ಇದಾಗಿದ್ದು, ಪ್ರತಿ ವರ್ಷ ಅತ್ಯಲ್ಪ ಬಡ್ಡಿದರಕ್ಕೆ ನವೀಕರಣಗೊಳ್ಳುತ್ತಿತ್ತು. ಎಫ್‌ಡಿ ಬಾಂಡ್‌ ಬಗ್ಗೆ ಪರಿಶೀಲನೆ ನಡೆಸಿದಾಗ ಬಡ್ಡಿದರ ಕಡಿಮೆಯಿದ್ದುದು ಪತ್ತೆಯಾಗಿತ್ತು. ಇದರಿಂದ ಮಂಗಳೂರು ಮಹಾನಗರ ಪಾಲಿಕೆಗೆ ಆಗುತ್ತಿದ್ದ ನಷ್ಟವನ್ನು ತಡೆಯುವ ದೃಷ್ಟಿಯಿಂದ ಎಫ್‌ಡಿಗಳನ್ನು ಮುಕ್ತಗೊಳಿಸಿ ಒಂದೇ ಬ್ಯಾಂಕಿನಡಿ ತರುವ ಕೆಲಸ ಮಾಡಲಾಗಿದೆ.

ಜನರ ತೆರಿಗೆಯ ಮೊತ್ತಕ್ಕೆ ಸೂಕ್ತ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಿಂದ ಜುಲೈ 18ರಂದು ಲೈವ್ ಇ- ಬಿಡ್ಡಿಂಗ್ ನಡೆಸಲು ಅವಕಾಶ ನೀಡಲಾಗಿತ್ತು. ಇದರಲ್ಲಿ 9 ರಾಷ್ಟ್ರೀಕೃತ ಹಾಗೂ 10 ಖಾಸಗಿ ಬ್ಯಾಂಕ್‌ಗಳು ಬಿಡ್‌ನಲ್ಲಿ ಭಾಗವಹಿಸಿದ್ದವು. ಇದರಂತೆ, ಶೇ.7.9ರಷ್ಟು ಅತೀ ಹೆಚ್ಚು ಬಡ್ಡಿ ನಿಗಪಡಿಸಿದ ಎಸ್‌ಬಿಐ ಎಲ್ಲ ಹೂಡಿಕೆ ಮೊತ್ತವನ್ನು ಪಡೆದಿದೆ. ಪಾಲಿಕೆಗೆ ಸಂಬಂಧಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಬ್ಯಾಂಕ್  ಎಫ್‌ಡಿಗಳನ್ನು ನೇರವಾಗಿ ಲೈವ್ ಇ-ಬಿಡ್ಡಿಂಗ್‌ ಮೂಲಕ ವಿಲೇವಾರಿ ಮಾಡಿರುವ ಪ್ರಕರಣ ಇದಾಗಿದೆ.

ಈ ಹಿಂದೆ 2-3 ಬಾರಿ ಲೈವ್ ಇ- ಬಿಡ್ಡಿಂಗ್ ಪ್ರಕ್ರಿಯೆ ಕೈಗೊಂಡಿದ್ದರೂ ಎಫ್‌ಡಿ ಖಾತೆಗಳನ್ನು ಮುಕ್ತಾಯಗೊಳಿಸಲು ಸಾಧ್ಯವಾಗಲಿಲ್ಲ. ಈ ಬಾರಿ ದೃಢ ನಿರ್ಧಾರದೊಂದಿಗೆ ಕೆಲಸ ಪೂರೈಸಿದ್ದು ಇದರಿಂದ 110 ಕೋಟಿ ರೂ.ಗೆ ವಾರ್ಷಿಕ 5 ರಿಂದ 8 ಕೋಟಿ ರೂ. ಬಡ್ಡಿ ಸಿಗಲಿದೆ. ರಾಜಸ್ವ ಉಳಿಕೆಯಾಗುವ ಜತೆಗೆ ಅಭಿವೃದ್ಧಿ ಕಾರ‍್ಯಕ್ಕೆ ಇದನ್ನು ಬಳಸಲು ನೆರವಾಗಲಿದೆ ಎನ್ನುತ್ತಾರೆ, ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಆನಂದ್ ಸಿ.ಎಲ್.

Around Rs 110 crore belonging to Mangaluru City Corporation (MCC) was deposited in 101 different bank accounts in the form of FDs. Municipal Commissioner Anand C L, who realised that the money was getting very low interest, brought the money to a single bank through e-bidding.