Mangalore rain, Ullal house collapsed: ಉಳ್ಳಾಲದಲ್ಲಿ ತಪ್ಪಿದ ದುರಂತ ; ಮನೆಗೆ ಕುಸಿದು ಬಿದ್ದ ಗೋಡೆ,  ತಾಯಿ, ಮಕ್ಕಳು ಪವಾಡಸದೃಶ ಪಾರು, ಕಂದಾಯ ಸಚಿವರ ಆದೇಶಕ್ಕೆ ಕಿಮ್ಮತ್ತು ಕೊಡದ ಉಳ್ಳಾಲ ನಗರಸಭೆ 

25-07-24 11:19 pm       Mangalore Correspondent   ಕರಾವಳಿ

ಮದನಿ ನಗರದ ಮಾದರಿಯಲ್ಲೇ ಉಳ್ಳಾಲದಲ್ಲೂ ಮನೆ ಕುಸಿತ ಉಂಟಾಗಿದ್ದು, ಮನೆ ಛಾವಣಿ ಮೇಲೆ ಪಕ್ಕದ ಮನೆಯ ಎತ್ತರದ ಶಿಥಿಲಗೊಂಡ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಮನೆಯೊಳಗಿದ್ದ ಗೃಹಿಣಿ ಮತ್ತು ಇಬ್ಬರು ಮಕ್ಕಳು ಪವಾಡ ಸದೃಶ ಪಾರಾಗಿದ್ದಾರೆ.

ಉಳ್ಳಾಲ, ಜು.25: ಮದನಿ ನಗರದ ಮಾದರಿಯಲ್ಲೇ ಉಳ್ಳಾಲದಲ್ಲೂ ಮನೆ ಕುಸಿತ ಉಂಟಾಗಿದ್ದು, ಮನೆ ಛಾವಣಿ ಮೇಲೆ ಪಕ್ಕದ ಮನೆಯ ಎತ್ತರದ ಶಿಥಿಲಗೊಂಡ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಮನೆಯೊಳಗಿದ್ದ ಗೃಹಿಣಿ ಮತ್ತು ಇಬ್ಬರು ಮಕ್ಕಳು ಪವಾಡ ಸದೃಶ ಪಾರಾಗಿದ್ದಾರೆ.

ಧಾರಾಕಾರ ಸುರಿಯುತ್ತಿರುವ ಮಳೆಗೆ ಮನೆಯ ಹಂಚಿನ ಛಾವಣಿ ಮೇಲೆ ಪಕ್ಕದ ಮನೆಯ ಗೋಡೆಯ ಕಲ್ಲುಗಳು ಕುಸಿದು ಬಿದ್ದ ಘಟನೆ ಉಳ್ಳಾಲ ಕೋಟೆಪುರದ ಕೋಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಮುಸ್ತಫಾ ಎಂಬವರ ಮಾಲಿಕತ್ವದ ಬಾಡಿಗೆ ಮನೆಯಲ್ಲಿ ಅನಾಹುತ ಸಂಭವಿಸಿದೆ. ಝಾಕಿರ್ ಎಂಬವರ ಕುಟುಂಬ ವಾಸವಿದ್ದು ಧಾರಾಕಾರ ಮಳೆಗೆ ಮನೆಯ ಹಂಚಿನ ಮೇಲೆ ಪಕ್ಕದ ಶಿಥಿಲ ಮನೆಯ ಎತ್ತರದ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಒದ್ದೆಯಾದ ಬೃಹತ್ ಗಾತ್ರದ ಕೆಂಪು ಕಲ್ಲುಗಳು ಝಾಕಿರ್ ವಾಸವಿದ್ದ ಮನೆಯ ಹಾಲಿನ ಸೋಫದ ಮೇಲೆ ಬಿದ್ದಿವೆ. ಮನೆಯೊಳಗಡೆ ಝಾಕಿರ್ ಅವರ ಪತ್ನಿ ಇದ್ದು ಇಬ್ಬರು ಪುಟ್ಟ ಮಕ್ಕಳು ಸೋಫಾದಲ್ಲೇ ಆಟವಾಡುತ್ತಿದ್ದರು‌. ಈ ವೇಳೆ ನೆರೆ ಮನೆಯವರು ಬಂದು ಬಾಗಿಲು ತಟ್ಟಿದ್ದಾರೆ. ಝಾಕಿರ್ ಪತ್ನಿ ಬಾಗಿಲು ತೆರೆಯಲು ಹೋದಾಗ ಮಕ್ಕಳಿಬ್ಬರು ತಾಯಿ ಜೊತೆ ಬಂದಿದ್ದರಿಂದ ಬಚಾವಾಗಿದ್ದಾರೆ.

ಮುಸ್ತಫಾ ಅವರ ಆವರಣ ಗೋಡೆಯ ಒಳಗಡೆ ಮೂರು ಬಾಡಿಗೆ ಮನೆ, ಮತ್ತೊಂಡು ಅಂಗಡಿ ಇದೆ. ಮೂರು ಮನೆಗಳ ಕುಟಂಬಸ್ಥರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.

ಸಚಿವರ ಆದೇಶಕ್ಕೆ ಕಿಮ್ಮತ್ತು ಕೊಡದ ನಗರಸಭೆ 

ಕುತ್ತಾರಿನ ಮದನಿನಗರದಲ್ಲಿ ಕಳೆದ ತಿಂಗಳಲ್ಲಿ ಆವರಣ ಗೋಡೆ ಮನೆ ಮೇಲೆ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಳೆಗಾಲದಲ್ಲಿ ಅಪಾಯದಲ್ಲಿರುವ ಮನೆಗಳನ್ನು ಗುರುತಿಸಿ ಮನೆಮಂದಿಯನ್ನ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಆದರೆ ಸಚಿವರ ಮಾತಿಗೆ ಉಳ್ಳಾಲ ನಗರಸಭೆ ಕಿಮ್ಮತ್ತು ಕೊಟ್ಟಿಲ್ಲ. ನಗರಸಭೆ ವತಿಯಿಂದ ಅಪಾಯ ಎದುರಿಸುವ ಕುಟುಂಬಗಳಿಗೆ ಒಂಭತ್ತುಕೆರೆ ಸರಕಾರಿ ಶಾಲೆಯ ಮೇಲ್ಮಹಡಿಯ ಸಭಾಂಗಣವನ್ನ ಪರ್ಯಾಯ ವ್ಯವಸ್ಥೆಯಾಗಿ ಮೀಸಲಿಟ್ಟಿದ್ದಾರೆ. ಆದರೆ ಮೂಲ ಸೌಕರ್ಯಗಳೇ ಇಲ್ಲದೆ ತೆರೆದ ಸಭಾಂಗಣದಲ್ಲಿ ಯಾರೊಬ್ಬರು ಉಳಿದುಕೊಳ್ಳಲು ಸಿದ್ಧರಿಲ್ಲದೆ ಅಪಾಯಕಾರಿ ಮನೆಗಳಲ್ಲೇ ವಾಸಿಸುತ್ತಿದ್ದಾರೆ.

Heavy rain in Mangalore, Ullal house wall collapses, family escapes from death.