Kethikal landslide, Dinesh Gundu Rao, Mangalore: ನೋಡಿದ್ರೆ ಭಯವಾಗುತ್ತೆ.. ಗುಡ್ಡ ಕುಸಿದ್ರೆ ತಡೆಯೋದು ಹೇಗೆ? ಇಷ್ಟೊಂದು ಗುಡ್ಡ ಅಗೆಯುವಾಗ ಕಣ್ಮುಚ್ಕೊಂಡಿದ್ರಾ.. ಕೆತ್ತಿಕಲ್ ಪ್ರದೇಶದಲ್ಲಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಸ್ತುವಾರಿ ಸಚಿವ ಗುಂಡೂರಾವ್

02-08-24 01:42 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಡೆಗೂ ಮಂಗಳೂರಿಗೆ ಬಂದಿದ್ದು, ಮಳೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಂಕೋಲಾ ಭೂಕುಸಿತದ ಬಳಿಕ ತೀವ್ರ ಆತಂಕಕ್ಕೆ ಒಳಗಾಗಿರುವ ವಾಮಂಜೂರು ಬಳಿಯ ಕೆತ್ತಿಕಲ್ ಗುಡ್ಡದ ಬಳಿಗೆ ಬಂದ ದಿನೇಶ್ ಗುಂಡೂರಾವ್, ಅಲ್ಲಿನ ಸ್ಥಿತಿಯನ್ನು ನೋಡಿ ಒಂದು ಕ್ಷಣ ದಂಗಾಗಿಬಿಟ್ಟರು.

ಮಂಗಳೂರು, ಆಗಸ್ಟ್ 2: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಡೆಗೂ ಮಂಗಳೂರಿಗೆ ಬಂದಿದ್ದು, ಮಳೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಂಕೋಲಾ ಭೂಕುಸಿತದ ಬಳಿಕ ತೀವ್ರ ಆತಂಕಕ್ಕೆ ಒಳಗಾಗಿರುವ ವಾಮಂಜೂರು ಬಳಿಯ ಕೆತ್ತಿಕಲ್ ಗುಡ್ಡದ ಬಳಿಗೆ ಬಂದ ದಿನೇಶ್ ಗುಂಡೂರಾವ್, ಅಲ್ಲಿನ ಸ್ಥಿತಿಯನ್ನು ನೋಡಿ ಒಂದು ಕ್ಷಣ ದಂಗಾಗಿಬಿಟ್ಟರು. ನೋಡಿದ್ರೆ ಭಯವಾಗುತ್ತೆ. ಇದನ್ನು ತಡೆಯೋದು ಹೇಗೆ.. ಇಷ್ಟೊಂದು ಗುಡ್ಡವನ್ನು ಅಗೆದು ಹಾಕಿದ್ದೀರಲ್ಲಾ.. ನೀವೆಲ್ಲ ಕಣ್ಮುಚ್ಚಿಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ತೀವ್ರ ಪ್ರಶ್ನೆ ಮಾಡಿದರು.

ಸ್ಥಳದಲ್ಲಿದ್ದ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಇಲಾಖೆಗಳ ಅಧಿಕಾರಿಗಳನ್ನು ಸಚಿವರು ಪ್ರಶ್ನೆ ಮಾಡಿದ್ದು, ಈ ಪರಿ ಗುಡ್ಡವನ್ನು ಅಗೆದು ಹಾಕಿದ್ದಾರೆ. ಹೆದ್ದಾರಿ ನಿರ್ಮಾಣಕ್ಕಾದರೇನು, ಇಷ್ಟೊಂದು ಗುಡ್ಡವನ್ನು ನೇರವಾಗಿ ಅಗೆದರೆ ಮೇಲ್ಭಾಗದಲ್ಲಿರುವ ಜನ ಏನ್ಮಾಡಬೇಕು. ಎದ್ದು ಹೋಗಬೇಕಾ. ಅವರಿಗೇನು ವ್ಯವಸ್ಥೆ ಮಾಡುತ್ತೀರಿ. ಹೀಗೆಲ್ಲ ಗುಡ್ಡ ಅಗೆಯುವುದಕ್ಕೆ ಪರ್ಮಿಶನ್ ಹೇಗೆ ಕೊಟ್ಟಿರಿ ಎಂದು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಈ ವೇಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಾವು ಕಳೆದ ಫೆಬ್ರವರಿ ತಿಂಗಳಲ್ಲೇ ಈ ಬಗ್ಗೆ ಜಾಗ್ರತೆ ಇರುವಂತೆ ಹೇಳಿದ್ದೆ ಎಂದು -ಹೇಳಿದಾಗ, ಏನ್ರೀ ಹೀಗೆಲ್ಲಾ ಮಾಡಿದ್ದೀರಾ ಎಂದು ಪಾಲಿಕೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ರಸ್ತೆಗೆಂದು ಸುಮ್ಮನಿದ್ದೆವು ಎಂದಿದ್ದಕ್ಕೆ ಪ್ರಶ್ನಿಸಿದ ಸಚಿವರು, ರಸ್ತೆಗಾದರೇನು, ಈ ರೀತಿ ಮಾಡಿದರೆ ಕುಸಿಯುವುದಕ್ಕೆ ನೀವೇ ಅವಕಾಶ ಮಾಡಿದಂತಾಗುತ್ತದೆ. ಉನ್ನತ ಮಟ್ಟದ ತಾಂತ್ರಿಕ ಅಧ್ಯಯನ ಆಗಬೇಕು. ಇದನ್ನು ತಡೆಯುವ ಬಗ್ಗೆ ಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ, ಹೆದ್ದಾರಿಗೆ ಮಾತ್ರ ಮಣ್ಣು ತೆಗೆದಿದ್ದಲ್ಲ. ಅದಕ್ಕೂ ಹಿಂದೆಯೂ ಮಣ್ಣು ತೆಗೆಯಲಾಗಿತ್ತು ಎಂದು ಅಲ್ಲಿದ್ದ ಹೆದ್ದಾರಿ ಇಲಾಖೆಯ ಒಬ್ಬ ವ್ಯಕ್ತಿ ಸಮಜಾಯಿಷಿ ನೀಡಲೆತ್ನಿಸಿದರು.

ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅವೈಜ್ಞಾನಿಕ ರೀತಿಯಲ್ಲಿ ಕೆಲಸ ಆಗಿದೆ. ಮೇಲ್ನೋಟಕ್ಕೆ ಬಲುದೊಡ್ಡ ಲೋಪ ದೋಷ ಆಗಿರುವುದು ಕಾಣುತ್ತಿದೆ. ಇದರ ಬಗ್ಗೆ ಮಹಾನಗರ ಪಾಲಿಕೆ, ಭೂವಿಜ್ಞಾನ ಇಲಾಖೆಯವರು ಯಾಕೆ ಇದರ ಬಗ್ಗೆ ನಿಯಂತ್ರಣ ಮಾಡಿಲ್ಲ, ಯಾಕೆ ಮಣ್ಣು ಎತ್ತಿಕೊಂಡು ಹೋಗಲು ಬಿಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು, ಆನಂತರ ಕ್ರಮ ಜರುಗಿಸುತ್ತೇನೆ ಎಂದರು.

Kethikal landslide, minister Dinesh Gundu Rao slams at officers after visiting spot in Mangalore.