ಉನ್ನತ ಶಿಕ್ಷಣ ಹೆಸರಲ್ಲಿ ಜನರ ಸುಲಿಗೆ, ಖಾಸಗಿ ಕಾಲೇಜುಗಳಿಂದ ಭಾರೀ ಲೂಟಿ ; ಕ್ಯಾಂಪಸ್ ಫ್ರಂಟ್ 

08-12-20 08:58 pm       Mangaluru Correspondent   ಕರಾವಳಿ

ಉನ್ನತ ಶಿಕ್ಷಣದ ಹೆಸರಿನಲ್ಲಿ ಕಾಲೇಜುಗಳು ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ ಆರೋಪಿಸಿದ್ದಾರೆ.

ಮಂಗಳೂರು, ಡಿ.8: ಉನ್ನತ ಶಿಕ್ಷಣದ ಹೆಸರಿನಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ. ಅಡ್ಮಿಷನ್ ಮತ್ತು ಸೀಟು ಹಂಚಿಕೆಯ ವಿಚಾರದಲ್ಲಿ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ್ ಮತ್ತು ಯನೆಪೋಯಾ ಮೆಡಿಕಲ್  ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಲಾಗುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ  ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಧೆಯ ವಿರುದ್ಧ ಶಿಕ್ಷಣ ಇಲಾಖೆಯಿಂದ ಸಮಗ್ರ ತನಿಖೆ ನಡೆಯಬೇಕು. ಜಿಲ್ಲೆಯ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿ.ಇ.ಟಿ ರ‍್ಯಾಂಕ್ ಮತ್ತು ಕಾಮೆಡ್ ಕೆ ಮೂಲಕ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಕಾನೂನು ಪ್ರಕಾರ, ಕೇವಲ 56000 ರೂ. ಮಾತ್ರ ಶುಲ್ಕ ಪಡೆಯಬೇಕು. ಆದರೆ ಸಂಸ್ಥೆಗಳು ಕಾಲೇಜು ಫೀಸ್ ಎಂದು 19750  ಮತ್ತು 4 ವರ್ಷದಲ್ಲಿ  ಆಪ್ಟಿಟ್ಯೂಡ್ ಬೇಸಿಕ್ ಕೋರ್ಸ್ ಎಂಬ ನೆಪದಲ್ಲಿ 10,000, ಇಂಡಸ್ಟ್ರಿಯಲ್ ಕನೆಕ್ಟ್ ಟ್ರೈನಿಂಗ್  ಹೆಸರಲ್ಲಿ 13000, ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ಹೆಸರಲ್ಲಿ 10000 ಹಾಗೂ ಇತರ ಹಲವು ಕಾರಣಗಳನ್ನು ಹೇಳಿ ಸುಮಾರು 55000 ದಷ್ಟು ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದಾರೆ. ಇದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರವಾಗಿದೆ. ಅಲ್ಲದೆ ಖಾಸಗಿ ಕಾಲೇಜುಗಳು ತಮ್ಮ ಪ್ರತಿಷ್ಟೆಗಳನ್ನು ಉಳಿಸಿಕೊಳ್ಳಲು ಮತ್ತು ಪರಸ್ಪರ ಕಾಲೇಜುಗಳ ಮದ್ಯೆ ಪೈಪೋಟಿ ನಡೆಸಿ ವಿಧ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದೆ. ಅಲ್ಲದೆ ಸಂಸ್ಥೆಯ ದಂಧೆಯ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯು ತಮ್ಮ ಅಂಕಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಇನ್ನೊಂದು ಕಡೆ ಜಿಲ್ಲೆಯ ಖಾಸಗಿ ಮೆಡಿಕಲ್  ಕಾಲೇಜುಗಳಲ್ಲಿಯೂ  ಕೂಡಾ ಈ ದಂಧೆ ನಡೆಯುತ್ತಿದೆ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಕಾಲೇಜುಗಳು ಸೀಟು ನೀಡುತ್ತಿಲ್ಲ. ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ತಮ್ಮ ಎಲ್ಲಾ ಸೀಟುಗಳನ್ನು ಅಡ್ಮಿಶನ್ ಕನ್ಸಲ್ಟೆನ್ಸಿ ನಡೆಸುತ್ತಿರುವ ಏಜೆಂಟುಗಳಿಗೆ ಸೀಟನ್ನು ಮಾರುತ್ತಾರೆ. ವಿಧ್ಯಾರ್ಥಿಗಳು ಅಡ್ಮಿಶನ್ ಬೇಕಾದಲ್ಲಿ ಏಜೆಂಟ್‌ಗಳ ಮೂಲಕ ಹೆಚ್ಚುವರಿ ಶುಲ್ಕವನ್ನು ನೀಡಿ ದಾಖಲಾಗಬೇಕು. ಅಲ್ಲದೆ ನೀಟ್ ಪ್ರವೇಶಾತಿ ಬರೆದು ಅರ್ಹತೆ ಪಡೆದ ವಿಧ್ಯಾರ್ಥಿ ಗಳಲ್ಲಿಯೂ ಸರಕಾರ ನಿಗದಿ ಪಡಿಸಿದಕ್ಕಿಂತ ಪ್ರತಿ ವರ್ಷ 75000 ದಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಎಲ್ಲಾ ವಂಚನೆಗಳಿಗೆ ಸರಕಾರ ಕೂಡ ನೇರ ಹೊಣೆ. ಜಿಲ್ಲೆಯಲ್ಲಿ ಯಾವುದೇ ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಹೀಗಾಗಿ ಖಾಸಗಿ ಕಾಲೇಜುಗಳದ್ದು ತಾವು ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಮುಖಂಡರಾದ ಸವಾದ್ ಕಲ್ಲರ್ಪೆ ಮತ್ತು ತಾಜುದ್ದೀನ್ ಉಪಸ್ಥಿತರಿದ್ದರು.

Popular Front of India, Mangalore Has Alleged that Medical and Engineering colleges are looting extra fees from students in the name of admission after corona lockdown.