Mangalore, Brijesh Chowta, Ivan Dsouza: ಸಿದ್ದರಾಮಯ್ಯ ಸುಪ್ರೀಂ ಸ್ಥಾನದಲ್ಲಿದ್ದು ವಿಚಾರಣೆ ಎದುರಿಸುವುದು ಸರಿಯಲ್ಲ, ಬಾಂಗ್ಲಾ ಹಿಂಸೆಗೆ ಕರೆಯಿತ್ತ ಐವಾನ್ ಡಿಸೋಜ ವಿರುದ್ಧ ಸುಮೋಟೊ ಕೇಸು ದಾಖಲಿಸಿ ; ಸಂಸದ ಬ್ರಿಜೇಶ್ ಚೌಟ ಆಗ್ರಹ

19-08-24 06:40 pm       Mangalore Correspondent   ಕರಾವಳಿ

ಸಿಎಂ ಸಿದ್ದರಾಮಯ್ಯ ಮೇಲೆ ಗುರುತರ ಆರೋಪ ಮತ್ತು ಅದಕ್ಕೆ ತಕ್ಕಷ್ಟು ಸಾಕ್ಷ್ಯ ಇರುವುದರಿಂದಲೇ ರಾಜ್ಯಪಾಲರು ಪ್ರಾಸಿಕ್ಯುಶನ್ ಅನುಮತಿ ನೀಡಿದ್ದಾರೆ.

ಮಂಗಳೂರು, ಆಗಸ್ಟ್.19: ಸಿಎಂ ಸಿದ್ದರಾಮಯ್ಯ ಮೇಲೆ ಗುರುತರ ಆರೋಪ ಮತ್ತು ಅದಕ್ಕೆ ತಕ್ಕಷ್ಟು ಸಾಕ್ಷ್ಯ ಇರುವುದರಿಂದಲೇ ರಾಜ್ಯಪಾಲರು ಪ್ರಾಸಿಕ್ಯುಶನ್ ಅನುಮತಿ ನೀಡಿದ್ದಾರೆ. ಹೀಗಿರುವಾಗ ಆರೋಪಿತ ವ್ಯಕ್ತಿಯೇ ಸಾಂವಿಧಾನಿಕ ಹುದ್ದೆಯಲ್ಲಿದ್ದು ವಿಚಾರಣೆ ಎದುರಿಸುವುದು ಸರಿಯಲ್ಲ. ತಾನೊಬ್ಬ ಕಳಂಕರಹಿತ, ಭ್ರಷ್ಟಾಚಾರ ರಹಿತ ವ್ಯಕ್ತಿಯೆಂದು ಹೇಳಿಕೊಂಡು ಬಂದ ಸಿದ್ದರಾಮಯ್ಯ ಈಗ ರಾಜಿನಾಮೆ ಕೊಟ್ಟು ಪ್ರಕರಣ ಎದುರಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಿಚಾರಣೆಯನ್ನು ಲೋಕಾಯುಕ್ತ ಅಥವಾ ಎಸ್ಐಟಿ ಅಧಿಕಾರಿಗಳೇ ನಡೆಸಬೇಕು. ರಾಜ್ಯ ಸರ್ಕಾರದ ಮುಖ್ಯಸ್ಥ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಸರ್ಕಾರದ ಅಧೀನ ಸಂಸ್ಥೆಯ ಅಧಿಕಾರಿಗಳು ವಿಚಾರಣೆ ನಡೆಸುವುದು ಹೇಗೆ. ಆರೋಪದ ಬಗ್ಗೆ ಸರಿಯಾದ ವಿಚಾರಣೆ ನಡೆಸುವುದು ಇದರಿಂದ ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿಯೇ ವಿಚಾರಣೆ ಎದುರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುವ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಬಾಂಗ್ಲಾ ರೀತಿಯ ಹಿಂಸಾಚಾರ ನಡೆಸುವ ಬಗ್ಗೆ ಮಾತಾಡಿದ್ದಾರೆ. ಆಮೂಲಕ ರಾಜ್ಯದಲ್ಲಿ ದಂಗೆ ಎಬ್ಬಿಸಲು ಪ್ರಚೋದನೆ ನೀಡಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡಿದ್ದಿರಬಹುದು. ಬಿಜೆಪಿ ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದು, ಪೊಲೀಸರು ಸುಮೊಟೋ ಕೇಸು ದಾಖಲಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮಾತನಾಡಿ, ಸಿದ್ದರಾಮಯ್ಯ ಆಪ್ತರಾದ ಐವಾನ್ ಡಿಸೋಜ ರಾಜ್ಯದಲ್ಲಿ ಬಾಂಗ್ಲಾ ರೀತಿಯ ಹಿಂಸಾಚಾರಕ್ಕೆ ಕರೆ ಕೊಟ್ಟಿದ್ದಾರೆ. ಆದರೆ ರಾಜ್ಯದ ಪೊಲೀಸರು ಸಶಕ್ತರಿದ್ದಾರೆ. ಇದನ್ನೆಲ್ಲ ಹತ್ತಿಕ್ಕಲು ಶಕ್ತರಿದ್ದಾರೆ. ನಾವೇನೂ ಇದಕ್ಕೆಲ್ಲ ಭಯ ಪಡಲ್ಲ. ನಮ್ಮ ವಿರುದ್ಧ ಸುಮೊಟೋ ಕೇಸು ದಾಖಲಿಸಿದ ಮಂಗಳೂರು ಪೊಲೀಸರು ಈಗ ಐವಾನ್ ಡಿಸೋಜ ವಿರುದ್ಧವೂ ಕೇಸು ದಾಖಲಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕಿಶೋರ್ ಬೊಟ್ಯಾಡಿ, ಯತೀಶ್ ಆರ್ವಾರ್, ನಿತಿನ್ ಕುಮಾರ್, ಸಂಜಯ ಪ್ರಭು ಮತ್ತಿತರರಿದ್ದರು.

Mangalore MP Brijesh Chowta slams Ivan dsouza for his remarks on governor, demands Sumoto case.