Ivan Dsouza, Mangalore: ಬಿಜೆಪಿ ಮೋರ್ಚಾ ಮೂರ್ಛೆಯಿಂದ ಎದ್ದು ಕೂತಿದೆ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆದಾಗ ಇವರ ಮೋರ್ಚಾ ಎಲ್ಲಿತ್ತು?

21-08-24 09:44 pm       Mangalore Correspondent   ಕರಾವಳಿ

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮೂರ್ಛೆಯಿಂದ ಎದ್ದು ಕೂತಿದೆ. ಐವನ್ ರನ್ನು ಹೀಯಾಳಿಸುವ ನೆಪದಲ್ಲಿ ನಿದ್ದೆಯಿಂದ ಎದ್ದು ಕುಳಿತಿದ್ದು ಖುಷಿ ಕೊಟ್ಟಿದೆ. ಆದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಸಂದರ್ಭದಲ್ಲಿ ನಿಮ್ಮ ಮೋರ್ಚಾ ಎಲ್ಲಿತ್ತು.

ಮಂಗಳೂರು, ಆಗಸ್ಟ್ 21: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮೂರ್ಛೆಯಿಂದ ಎದ್ದು ಕೂತಿದೆ. ಐವನ್ ರನ್ನು ಹೀಯಾಳಿಸುವ ನೆಪದಲ್ಲಿ ನಿದ್ದೆಯಿಂದ ಎದ್ದು ಕುಳಿತಿದ್ದು ಖುಷಿ ಕೊಟ್ಟಿದೆ. ಆದರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಸಂದರ್ಭದಲ್ಲಿ ನಿಮ್ಮ ಮೋರ್ಚಾ ಎಲ್ಲಿತ್ತು. ವ್ಯಾಪಾರ ನಿಷೇಧ ಮಾಡಿದಾಗ, ಕೊಲೆಗಳಾದಾಗ ನೀವು ಎಲ್ಲಿದ್ದಿರಿ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ತಿರುಗೇಟು ನೀಡಿದ್ದಾರೆ.

ಬಾಂಗ್ಲಾ ಪರ ಹೇಳಿಕೆ ನೀಡಿದ ಐವನ್ ಡಿಸೋಜ ಹಿಂಬಾಗಿಲಲ್ಲಿ ಬಂದವರು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕರು ಹೇಳಿರುವ ಮಾತಿಗೆ ತಿರುಗೇಟು ನೀಡಲು ಸುದ್ದಿಗೋಷ್ಟಿ ನಡೆಸಿದ ಶಾಹುಲ್ ಹಮೀದ್, ಎರಡು ವರ್ಷ ಹಿಂದೆ ಫಾಜಿಲ್ ಎಂಬ ಯುವಕ ರಸ್ತೆ ಬದಿ ನಿಂತಿದ್ದಾಗ ಕೊಂದು ಹಾಕಿದ್ರಲ್ಲಾ, ಆಗ ನೀವು ಎಲ್ಲಿದ್ದಿರಿ. ಸಿಟಿ ರವಿ, ಶೋಭಾ ಕರಂದ್ಲಾಜೆ ಮಸೀದಿ ಬಗ್ಗೆ ಹೇಳಿಕೆ ಕೊಟ್ಟಾಗ ನೀವು ಎಲ್ಲಿದ್ದಿರಿ. ಬೆಳ್ತಂಗಡಿ ಶಾಸಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹಿಂದುಗಳು ಹೋಗಬಾರದು ಎಂದಾಗ ನೀವು ಮಾತಾಡಿಲ್ಲ ಯಾಕೆ. ಇಡೀ ರಾಜ್ಯದಲ್ಲಿ ಒಂದು ಸೀಟು ಪಡೆಯಲು ಆಗದ ನಿಮಗೆ ಮಾನ ಮರ್ಯಾದೆ ಇದೆಯಾ.. ಎಂಎಲ್ಸಿ ಬಿಡಿ, ಒಂದು ಮೇಯರ್, ಜಿಪಂ ಸ್ಥಾನ ತೆಗೆಸುವುದಕ್ಕಾದರೂ ಆಗಿದೆಯಾ.. ಯಾಕೆ ನೀವು ಬಕೆಟ್ ಹಿಡಿಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.

ಐವಾನ್ ಡಿಸೋಜ ಎರಡನೇ ಬಾರಿ ಪರಿಷತ್ ಸದಸ್ಯರಾಗಿದ್ದಾರೆ. ನಿಮ್ಮ ಪ್ರತಾಪಸಿಂಹ ನಾಯಕ್, ಸಿಟಿ ರವಿ ಸೋತು ಸುಣ್ಣವಾದ ಬಳಿಕ ಹಿಂಬಾಗಿಲಲ್ಲಿ ಹೋಗಿದ್ದಲ್ವಾ. ನಿಮಗೆ ಹಿಂಬಾಗಿಲು ಬಿಡಿ ಶೌಚಾಲಯದ ಬಾಗಿಲೂ ಸಿಗಲ್ಲ. ಐವಾನ್ ಡಿಸೋಜ ಶ್ರಮಿಕ ವರ್ಗದ ನಾಯಕ. ಗ್ರಾಪಂ ಸ್ತರದಿಂದ ಮೇಲೆ ಬಂದವರು. ಎರಡು ಬಾರಿ ಅಸೆಂಬ್ಲಿಗೆ ಸ್ಪರ್ಧಿಸಿದ್ದಾರೆ. ಹೀಯಾಳಿಸುವ ಬದಲು ಮೋರ್ಚಾ ಬರ್ಖಾಸ್ತು ಮಾಡಿ ಹೊರಬನ್ನಿ ಎಂದರು. ಬಾಂಗ್ಲಾದಲ್ಲಿ ಸರ್ವಾಧಿಕಾರ, ಭ್ರಷ್ಟಾಚಾರ ಮೇಳೈಸಿತ್ತು. ಅಧಿಕಾರ ದುರುಪಯೋಗ ತಾಳಲಾರದೆ ಜನರು ದಂಗೆ ಎದ್ದಿದ್ದಾರೆ. ಅದೇ ರೀತಿ ನಮ್ಮಲ್ಲೂ ಆದರೆ ಜನರು ದಂಗೆ ಏಳಬಹುದು ಅಂತ ಐವಾನ್ ಡಿಸೋಜ ಹೇಳಿದ್ದಾರೆ ಎಂದಷ್ಟೇ ಪ್ರಶ್ನಿಸಿದ್ದಾರೆ. ಆಲ್ವಿನ್ ಪ್ರಕಾಶ್, ಇಬ್ರಾಹಿಂ ಕೋಡಿಜಾಲ್, ಸಬಿತಾ ಮಿಸ್ಕಿತ್, ಫಯಾಜ್, ನಜೀರ್ ಬಜಾಲ್, ಶಬೀರ್ ಸಿದ್ದಕಟ್ಟೆ ಮತ್ತಿತರರಿದ್ದರು.

Ivan dsouza remarks, congress Shahul Ahmeed slams BJP Morcha in Mangalore