Mangalore, SDPI, congress: ಬಂಟ್ವಾಳ ಪುರಸಭೆ ಅಧಿಕಾರಕ್ಕಾಗಿ ಕಾಂಗ್ರೆಸ್ - ಎಸ್ಡಿಪಿಐ ಜುಗಲ್ ಬಂದಿ ; ಕಾಂಗ್ರೆಸಿಗೆ ಅಧ್ಯಕ್ಷ, ಎಸ್ಡಿಪಿಐಗೆ ಉಪಾಧ್ಯಕ್ಷ ಪಟ್ಟ! 

22-08-24 07:15 pm       Mangalore Correspondent   ಕರಾವಳಿ

ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಮತ್ತೆ ಕೈಜೋಡಿಸಿದೆ. ಅಧ್ಯಕ್ಷರಾಗಿ ಕಾಂಗ್ರೆಸಿನ ಬಿ.ವಾಸು ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ. ಪಕ್ಷದ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ. 

ಬಂಟ್ವಾಳ, ಆಗಸ್ಟ್ 22: ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಮತ್ತೆ ಕೈಜೋಡಿಸಿದೆ. ಅಧ್ಯಕ್ಷರಾಗಿ ಕಾಂಗ್ರೆಸಿನ ಬಿ.ವಾಸು ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ. ಪಕ್ಷದ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ. 

ಒಟ್ಟು 27 ಸದಸ್ಯರ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಗಂಗಾಧರ ಎಂಬವರ ರಾಜೀನಾಮೆಯಿಂದ ಒಟ್ಟು ಸದಸ್ಯ ಬಲ 26ಕ್ಕೆ ಕುಸಿದಿತ್ತು. ಕಾಂಗ್ರೆಸ್ ನಿಂದ 11, ಬಿಜೆಪಿಯಿಂದ 11, ಎಸ್.ಡಿ.ಪಿ.ಐ.ನಿಂದ 4 ಮಂದಿ ಸದಸ್ಯರು ಇದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂದರ್ಭ ಸಂಸದ ಮತ್ತು ಬಂಟ್ವಾಳ ಶಾಸಕರ ಸದಸ್ಯರ ಮತ ಸೇರಿ ಬಿಜೆಪಿಗೆ 13, ಕಾಂಗ್ರೆಸ್ 11 ಮತ್ತು ಎಸ್.ಡಿ.ಪಿ.ಐ.ಗೆ 4 ಮತಗಳಿದ್ದವು. ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್- ಎಸ್.ಡಿ.ಪಿ.ಐ. ಅಭ್ಯರ್ಥಿಗಳಿಗೆ 15, ಬಿಜೆಪಿ ಅಭ್ಯರ್ಥಿಗಳಿಗೆ 13 ಮತಗಳು ಲಭಿಸಿದವು.

ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಿ. ವಾಸು ಪೂಜಾರಿ, ಎಸ್.ಡಿ.ಪಿ.ಐ.ನಿಂದ ಇದ್ರೀಸ್ ಹಾಗೂ ಬಿಜೆಪಿಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಇಳಿಸದೆ, ಪರೋಕ್ಷವಾಗಿ ಎಸ್.ಡಿ.ಪಿ.ಐ. ಅಭ್ಯರ್ಥಿ ಮೊನೀಶ್ ಆಲಿ ಅವರನ್ನು ಬೆಂಬಲಿಸುವ ಸೂಚನೆ ನೀಡಿತ್ತು. ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿತ್ತು. ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಕಣದಿಂದ ಹಿಂದಕ್ಕೆ ಸರಿದರು. ನಿರೀಕ್ಷೆಯಂತೆ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಪರಸ್ಪರ ಮತ ಚಲಾಯಿಸಿದ್ದರಿಂದ ಇವರ ಮೈತ್ರಿ ಜಯ ಗಳಿಸಿತು. ತಹಸೀಲ್ದಾರ್ ಡಿ.ಅರ್ಚನಾ ಭಟ್ ಚುನಾವಣೆ ಕಾರ್ಯ ನಡೆಸಿಕೊಟ್ಟರು. 

ಎಸ್.ಡಿ.ಪಿ.ಐ. ನಿರ್ಣಾಯಕ ! 

ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭ ಎಸ್.ಡಿ.ಪಿ.ಐ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಆ ಸಂದರ್ಭ ಕಾಂಗ್ರೆಸ್, ಎಸ್.ಡಿ.ಪಿ.ಐ. ಜೊತೆ ತಾನು ಹೊಂದಾಣಿಕೆ ಮಾಡಿಕೊಂಡಿಲ್ಲ, ಅವರೇ ನಮ್ಮನ್ನು ಬೆಂಬಲಿಸಿದರು ಎಂದು ಹೇಳಿ ಕೋಮುವಾದಿ ಮೈತ್ರಿಯೆಂಬ ಟೀಕೆಯಿಂದ ದೂರವುಳಿದಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷವೇ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮತ ಹಾಕುವ ಮೂಲಕ ಅಧಿಕಾರಕ್ಕಾಗಿ ನೇರ ಬೆಂಬಲ ನೀಡಿದೆ.

ಕಾಂಗ್ರೆಸ್ ಅಸಲಿತನ ಬಯಲು 

ಚುನಾವಣೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್ ಪಕ್ಷದ ಅಸಲಿತನ ಬಯಲಾಗಿದ್ದು, ರಮಾನಾಥ ರೈ ಕಾಂಗ್ರೆಸ್ ಎಸ್.ಡಿ.ಪಿ.ಐ. ಮುಷ್ಟಿಯೊಳಗೆ ಸಿಲುಕಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ನಿಂದ ಬಿಜೆಪಿಗೆ ಹೆಚ್ಚು ಮತಗಳಿದ್ದರೂ ಕಾಂಗ್ರೆಸ್ ಮೈತ್ರಿಯಿಂದ ಇವರ ನಿಜಬಣ್ಣ ಗೊತ್ತಾಗಿದೆ ಎಂದರು. ಶಾಸಕ ರಾಜೇಶ್ ನಾಯ್ಕ್, ಪಕ್ಷದ ಕ್ಷೇತ್ರಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಜತೆಗಿದ್ದರು.

Mangalore Bantwal town municipal elections, congress president, SDPI bags vice president posts.