Mangalore Ullal City Municipal Election Result: ಉಳ್ಳಾಲ ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ; ಅಧ್ಯಕ್ಷರ ಆಯ್ಕೆಯಲ್ಲಿ 'ಕೈ' ಜೋಡಿಸಿದ ಎಸ್ಡಿಪಿಐ ನಗರ ಸದಸ್ಯರು

29-08-24 08:32 pm       Mangalore Correspondent   ಕರಾವಳಿ

ಉಳ್ಳಾಲ ನಗರಸಭೆಯ ಕಾಂಗ್ರೆಸ್ ಆಡಳಿತದ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಗೊಂಡಿದ್ದಾರೆ.

ಉಳ್ಳಾಲ, ಆ.29: ಉಳ್ಳಾಲ ನಗರಸಭೆಯ ಕಾಂಗ್ರೆಸ್ ಆಡಳಿತದ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಜತೆ ಎಸ್ಡಿಪಿಐ ಪಕ್ಷದ ನಗರ ಸದಸ್ಯರು ಕೈಜೋಡಿಸಿದ್ದಾರೆ.

ಉಳ್ಳಾಲ ನಗರಸಭೆಯ ಎರಡನೇ ಆಡಳಿತಾವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಗರಸಭೆ ಸಭಾಂಗಣದಲ್ಲಿ ನಗರ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಿರಿಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿಕಲಾ, ಬಿಜೆಪಿಯಿಂದ ಭವಾನಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಪ್ನ ಹರೀಶ್, ಬಿಜೆಪಿಯಿಂದ ನಮಿತಾ ಗಟ್ಟಿ, ಎಸ್ ಡಿಪಿಐಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಶಶಿಕಲಾ ಪರ 23 ಮತಗಳು, ಬಿಜೆಪಿಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ನಗರ ಸದಸ್ಯರು ತಟಸ್ಥರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸಿನ ಸಪ್ನಾ ಹರೀಶ್ ಪರ 17 ಮತ, ಝರೀನ ರವೂಫ್ ಪರ 6 ಮತ, ಬಿಜೆಪಿಯ ನಮಿತಾ ಗಟ್ಟಿ ಪರ 6 ಮತ ಚಲಾವಣೆ ಆದವು. ಇಬ್ಬರು ನಗರ ಸದಸ್ಯರು ಇಲ್ಲಿಯೂ ತಟಸ್ಥರಾದರು. ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿದ್ದರು.

ಉಳ್ಳಾಲ ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್ ಡಿಪಿಐ 6 ಹಾಗೂ ಇಬ್ಬರು ಪಕ್ಷೇತರರು ಸ್ಥಾನ ಪಡೆದಿದ್ದಾರೆ. ಜೆಡಿಎಸ್ ನ ನಾಲ್ವರು ಸದಸ್ಯರ ಪೈಕಿ ಮೂವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಇಬ್ಬರು ಕಾಂಗ್ರೆಸ್ ಸೇರಿದ್ದರು. ಉಳ್ಳಾಲ ನಗರಸಭೆಯ ಕಾಂಗ್ರೆಸ್ ಆಡಳಿತದ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ 2023 ಮೇ ತಿಂಗಳಲ್ಲಿ ಕೊನೆಗೊಂಡಿತ್ತು.

ಕೈ ಪಕ್ಷಕ್ಕೆ ಮತ ಚಲಾಯಿಸಿದ ಎಸ್ಡಿಪಿಐ ಸದಸ್ಯರು 

ನಗರಸಭೆಯ ಅಧ್ಯಕ್ಷ ಗಾದಿಗೆ ಸ್ಫರ್ಧಿಸಿದ್ದ ಶಶಿಕಲಾ ಗೆಲ್ಲಲು ಬೇಕಾದ ಸಂಖ್ಯಾ ಬಲ ಇದ್ದರೂ, ಎಸ್ಡಿಪಿಐ ನ ಆರು ನಗರ ಸದಸ್ಯರು ಕೈ ಎತ್ತಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಎಸ್ಡಿಪಿಐನ ಝರೀನ ರವೂಫ್ ಸ್ಫರ್ಧಿಸಿದ್ದರು. ನಗರಸಭೆ ಮೊದಲ ಅವಧಿಯಲ್ಲಿ ಎಸ್ಡಿಪಿಐನ ಝರೀನ ರವೂಫ್ ಕೈ ಪಕ್ಷದ ಕೌನ್ಸಿಲರ್ಗಳ ಬೆಂಬಲದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

Mangalore Ullal City Municipal Council Election Results 2024, congress bags victory, sdpi joins hand.