Mangalore BJP Someshwara: ಸೋಮೇಶ್ವರ ಪುರಸಭೆಯಲ್ಲೂ ಕಮಲ ಕಮಾಲ್! ಮೀಸಲು ಲಾಭಕ್ಕೆ ಅಧ್ಯಕ್ಷರ ಅವಿರೋಧ ಆಯ್ಕೆ, ಪಂಚಾಯತ್ ಬಳಿಕ ಪುರಸಭೆಯಲ್ಲೂ ಹಾರಿದ ಕೇಸರಿ ಬಾವುಟ 

30-08-24 06:44 pm       Mangalore Correspondent   ಕರಾವಳಿ

ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೇರಿರುವ ನೂತನ ಸೋಮೇಶ್ವರ ಪುರಸಭೆಯ ಅಧ್ಯಕ್ಷರಾಗಿ ಕಮಲ ಅವರು ಅವಿರೋಧ ಆಯ್ಕೆಯಾದರೆ, ರವಿಶಂಕರ್ ಸೋಮೇಶ್ವರ ಅವರು ಉಪಾಧ್ಯಕ್ಷರಾಗಿದ್ದಾರೆ.

ಉಳ್ಳಾಲ, ಆ.30: ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೇರಿರುವ ನೂತನ ಸೋಮೇಶ್ವರ ಪುರಸಭೆಯ ಅಧ್ಯಕ್ಷರಾಗಿ ಕಮಲ ಅವರು ಅವಿರೋಧ ಆಯ್ಕೆಯಾದರೆ, ರವಿಶಂಕರ್ ಸೋಮೇಶ್ವರ ಅವರು ಉಪಾಧ್ಯಕ್ಷರಾಗಿದ್ದಾರೆ. ಸೋಮೇಶ್ವರ ಪುರಸಭೆ ಅಧ್ಯಕ್ಷ ಗಾದಿಗೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಗಾದಿಗೆ ಹಿಂದುಳಿದ ವರ್ಗ(ಎ)ಕ್ಕೆ ಮೀಸಲು ನೀಡಲಾಗಿತ್ತು.

ಶುಕ್ರವಾರ ಮಧ್ಯಾಹ್ನ ಸೋಮೇಶ್ವರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪುರಸಭಾ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಮೀಸಲು ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪುರಸಭಾ ಸದಸ್ಯೆ ಕಮಲ ಅವರಿಂದ ಏಕೈಕ ನಾಮಪತ್ರ ಸಲ್ಲಿಕೆಯಾಗಿತ್ತು. ಪುರಸಭೆ ಸದಸ್ಯರಲ್ಲಿ ಏಕೈಕ ಪರಿಶಿಷ್ಟ ಜಾತಿ ಸದಸ್ಯರಾಗಿರುವ ಕಮಲ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪುರಸಭಾ ಸದಸ್ಯ ರವಿಶಂಕರ್ ಸೋಮೇಶ್ವರ ಮತ್ತು ಕಾಂಗ್ರೆಸ್ನ ಪುರಸಭಾ ಸದಸ್ಯರಾದ ಯು.ಅಬ್ದುಲ್ ಸಲಾಮ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯ ರವಿಶಂಕರ್ ಅವರಿಗೆ ನಿರೀಕ್ಷೆಯಂತೆ 16 ಮತಗಳು ಲಭಿಸಿದವು. ಅಬ್ದುಲ್ ಸಲಾಮ್ ಅವರು 7 ಮತಗಳನ್ನು ಪಡೆದರು. ತಹಶೀಲ್ದಾರ್ ಪುಟ್ಟರಾಜು ಡಿ.ಎ ಅವರು ಚುನಾವಣಾಧಿಕಾರಿಯಾಗಿದ್ದರು.

ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರವು ಪುರಸಭೆಯಾಗಿ ಮೇಲ್ದರ್ಜೆಗೇರಿ ಬರೋಬ್ಬರಿ ನಾಲ್ಕು ವರುಷದ ಬಳಿಕ 2023 ರ ಡಿ.27ರಂದು ಚುನಾವಣೆ ನಡೆದಿತ್ತು. ಕಳೆದ ಮೂವತ್ತು ವರುಷಗಳಿಂದ ಸೋಮೇಶ್ವರ ಸ್ಥಳೀಯಾಡಳಿತವು ಬಿಜೆಪಿ ವಶದಲ್ಲಿದ್ದು ನೂತನ ಸೋಮೇಶ್ವರ ಪುರಸಭೆಯಲ್ಲೂ ಬಿಜೆಪಿ ಬಹುಮತ ಪಡೆದಿತ್ತು. ಬಿಜೆಪಿ ಭರ್ಜರಿ 16 ಸ್ಥಾನಗಳನ್ನ ಗೆದ್ದು ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನ ಗಳಿಸಿತ್ತು.

ಸೋಮೇಶ್ವರ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಕಮಲ ಅವರು ಪುರಸಭೆ ಚುನಾವಣೆಯಲ್ಲೂ ಸ್ಫರ್ಧಿಸಿ ಜಯ ಗಳಿಸಿ ಇದೀಗ ಮತ್ತೆ ಪುರಸಭೆಯಲ್ಲು ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿಶಂಕರ್ ಸೋಮೇಶ್ವರ ಅವರು ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿದ್ದು ಜನಸೇವಕರಾಗಿ ಅನುಭವ ಹೊಂದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರು ಇಲೆಕ್ಟ್ರಿಕಲ್ಸ್ ಲಿ.ನ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು ಮೊದಲಾವರು ಉಪಸ್ಥಿತರಿದ್ದರು.

Mangalore Bjp bags major victory in Someshwara panchyat election. BJP leaders celebrate and wish both the president and vice president