AYUSH Sports Medicine, Mangalore: ಮಂಗಳೂರಿಗೆ ಬರಲಿದೆ ದೇಶದ ಎರಡನೇ ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌ ; ಕೇಂದ್ರ ಆಯುಷ್ ಮಿಷನ್ ಒಪ್ಪಿಗೆ, ಶೀಘ್ರದಲ್ಲೇ ವೆನ್ಲಾಕ್ ನಲ್ಲಿ ಓಪಿಡಿ, ಕ್ರೀಡಾಳುಗಳಿಗೆಂದೇ ಪ್ರತ್ಯೇಕ ಆಸ್ಪತ್ರೆ 

31-08-24 04:22 pm       Mangalore Correspondent   ಕರಾವಳಿ

ದೇಶದ ಎರಡನೇ ಹಾಗೂ ಕರ್ನಾಟಕದ ಮೊದಲ ಆಯುಷ್ ಕ್ರೀಡಾ ಆರೋಗ್ಯ ಕೇಂದ್ರ (ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌) ಮಂಗಳೂರಿನಲ್ಲಿ ಆರಂಭಿಸುವ ಉದ್ದೇಶದ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ಕೇಂದ್ರ ಆಯುಷ್‌ ಮಿಷನ್ ಒಪ್ಪಿಗೆ ನೀಡಿದೆ. 

ಮಂಗಳೂರು, ಆಗಸ್ಟ್.31: ದೇಶದ ಎರಡನೇ ಹಾಗೂ ಕರ್ನಾಟಕದ ಮೊದಲ ಆಯುಷ್ ಕ್ರೀಡಾ ಆರೋಗ್ಯ ಕೇಂದ್ರ (ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌) ಮಂಗಳೂರಿನಲ್ಲಿ ಆರಂಭಿಸುವ ಉದ್ದೇಶದ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಗೆ ಕೇಂದ್ರ ಆಯುಷ್‌ ಮಿಷನ್ ಒಪ್ಪಿಗೆ ನೀಡಿದೆ. 

ಆಯುಷ್‌ ಇಲಾಖೆಯ ದೇಶದ ಮೊದಲ ಕ್ರೀಡಾ ಆರೋಗ್ಯ ಕೇಂದ್ರವು ಕೇರಳದ ತ್ರಿಶ್ಶೂರ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಆಯುಷ್‌ ಮಿಷನ್‌ ಅಡಿ ಆರಂಭಿಸುತ್ತಿರುವ ಎರಡನೇ ಎಲ್ಲ ವಿಭಾಗಗಳನ್ನು ಒಳಗೊಂಡ ದೇಶದ ಮೊದಲ ಅಸ್ಪತ್ರೆ ಮಂಗಳೂರಿನದ್ದಾಗಲಿದೆ. ಇದು ಕ್ರೀಡಾಪಟುಗಳಿಗಾಗಿಯೇ ಇರುವ ಪ್ರತ್ಯೇಕ ಮೆಡಿಕಲ್‌ ಸೆಂಟರ್‌ ಆಗಿರಲಿದೆ. 

ಪ್ರಾಥಮಿಕ ಹಂತದಲ್ಲಿ ಸ್ಟಾರ್ಟಪ್‌ ಮಾದರಿಯಲ್ಲಿ ನಗರದ ವೆನ್ಲಾಕ್‌ ಆಯುಷ್‌ ಆಸ್ಪತ್ರೆಯಲ್ಲಿ ಐದಾರು ಹಾಸಿಗೆಗಳನ್ನು ಒಳಗೊಂಡ ಒಪಿಡಿ ವಿಭಾಗ ಆರಂಭಿಸಲಾಗುವುದು. ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಗೆ ರಾಜ್ಯ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು, ಹುದ್ದೆಗಳು ಮಂಜೂರಾಗಿವೆ. ವೆನ್ಲಾಕ್‌ನಲ್ಲಿ ಔಷಧ ಕೇಂದ್ರ ಆರಂಭಗೊಂಡ ಬಳಿಕ ಅದರ ಕಾರ್ಯ ನಿರ್ವಹಣೆ, ಪ್ರಯೋಜನ ಪಡೆದ ಕ್ರೀಡಾಪಟುಗಳ ಸಂಖ್ಯೆ, ನೀಡುತ್ತಿರುವ ಚಿಕಿತ್ಸೆ ವಿವರಗಳು ಇತ್ಯಾದಿ ಕುರಿತು ಕೇಂದ್ರ ಆಯುಷ್‌ ಇಲಾಖೆಗೆ ವರದಿ ಸಲ್ಲಿಸಬೇಕು. ಇದರ ಆಧಾರದಲ್ಲಿ ಕೇಂದ್ರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮೊಹಮ್ಮದ್‌ ಇಕ್ಬಾಲ್‌ ತಿಳಿಸಿದ್ದಾರೆ. 

ಆಯುಷ್‌ ಸ್ಪೋರ್ಟ್ಸ್ ಮೆಡಿಸಿನ್‌ ಸೆಂಟರ್‌ ಮಂಗಳೂರಿನಲ್ಲಿ ಆರಂಭಿಸುತ್ತಿರುವುದರ ಹಿಂದೆ ಎರಡು ಕಾರಣಗಳಿವೆ. ಈಗಾಗಲೇ ಮೆಡಿಕಲ್‌ ಹಾಗೂ ಶೈಕ್ಷಣಿಕ ಹಬ್ ಎಂದೆನಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೀಡೆ ಬಗೆಗಿನ ಆಸಕ್ತಿ ಯುವಜನರಲ್ಲಿ ಹೆಚ್ಚಿದೆ. ಇದರೊಂದಿಗೆ ಕ್ರೀಡಾಪಟುಗಳಿಗೆಂದೇ ಆರೋಗ್ಯ ಕೇಂದ್ರ ಜಾರಿಗೆ ಬಂದರೆ ಮೆಡಿಕಲ್‌ ಹಬ್‌ನ ಪರಿಕಲ್ಪನೆಗೆ ಇನ್ನಷ್ಟು ಒತ್ತು ಸಿಗಲಿದೆ. ಅಲ್ಲದೇ, ರಾಷ್ಟ್ರೀಯ ಆಯುಷ್‌ ಮಿಷನ್‌ ಅಡಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶವಿದೆ. ಇದರಡಿ ರಾಷ್ಟ್ರೀಯ ಮಟ್ಟ ಹಾಗೂ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಕ್ರೀಡಾ ಔಷಧ ಕೇಂದ್ರದ ಪ್ರಸ್ತಾವನೆ ಸಲ್ಲಿಕೆಯಾಗಿರಲಿಲ್ಲ. ಹಾಗಾಗಿ ಈ ರೀತಿಯ ವಿನೂತನ ಯೋಜನೆಯನ್ನು ಜಾರಿಗೊಳಿಸುವ ಹೊಣೆಯನ್ನು ಜಿಲ್ಲಾ ಆಯುಷ್‌ ಇಲಾಖೆ ವಹಿಸಿಕೊಂಡಿತ್ತು. ಇಲಾಖೆಯ ಪ್ರಸ್ತಾವನೆಗೆ ಆಯುಷ್ ಮಿಷನ್ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ ಎಂದವರು ಹೇಳಿದ್ದಾರೆ. 

ಆಯುಷ್‌ ಕ್ರೀಡಾ ಔಷಧ ಕೇಂದ್ರದಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಇರಲಿದೆ. ಫಿಟ್ನೆಸ್‌ ಮ್ಯಾನೇಜ್‌ಮೆಂಟ್‌ ಮತ್ತು ಇಂಜುರಿ ಮ್ಯಾನೇಜ್‌ಮೆಂಟ್‌ ಎನ್ನುವ ಎರಡು ವಿಭಾಗಗಳಿದ್ದು, ಆಟಗಾರರಿಗೆ ಅಗತ್ಯವಿರುವ ಫಿಟ್ನೆಸ್‌ ಮಟ್ಟವನ್ನು ಅಂದಾಜಿಸಲು ಫಿಟ್ನೆಸ್ ಲ್ಯಾಬ್‌ ಇರಲಿದೆ. ದೇಹದ ಫಿಟ್ನೆಸ್ ಅಳೆಯುವ ಮಾಪನ, ಡಯಟ್‌, ಲೈಫ್‌ ಸ್ಟೈಲ್‌ ಮ್ಯಾನೇಜ್‌ಮೆಂಟ್‌, ಆಹಾರ, ಔಷಧ, ಕೌನ್ಸೆಲಿಂಗ್‌, ಆಯುಷ್‌ ಸಪ್ಲಿಮೆಂಟ್‌ ಮೊದಲಾದ ವಿಚಾರಗಳು ಒಳಗೊಳ್ಳಲಿವೆ. ಇಂಜುರಿ ಮ್ಯಾನೇಜ್‌ಮೆಂಟ್‌ನಡಿ ಆಟದ ಸಂದರ್ಭ ಉಂಟಾಗುವ ಗಂಟು, ಕೀಲು ನೋವು, ಗಾಯಗಳನ್ನು ಗುಣಪಡಿಸಲಾಗುತ್ತದೆ. ಕೇಂದ್ರಕ್ಕೆ ಸ್ಥಳೀಯವಾಗಿ ಮಾತ್ರವಲ್ಲದೆ ದೇಶದ ವಿವಿಧೆಡೆಯಿಂದ ಕ್ರೀಡಾಪಟುಗಳು ಚಿಕಿತ್ಸೆಗೆ ಬರಲಿದ್ದು, ಕ್ರೀಡಾ ಪ್ರಯೋಗಾಲಯ, ಥೆರಪಿ ಸೆಂಟರ್‌, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ದರ್ಜೆಯ ಮೂಲ ಸೌಕರ್ಯ ಇರುವ ಕಟ್ಟಡದ ಅಗತ್ಯದ ಬಗ್ಗೆ ಚರ್ಚೆ ನಡೆದಿದೆ.

The Central Ayush Mission has approved the Detailed Project Report (DPR) for the establishment of the country's second and Karnataka's first AYUSH Sports Medicine Centre in Mangalore.