Damodar Nisarga, Billava, Mangalore: ಹಿರಿಯ ಬಿಲ್ಲವ ಮುಂದಾಳು, ತುಳು- ಕನ್ನಡ ಸಂಘಟಕ, ಗೋಕರ್ಣನಾಥ ಬ್ಯಾಂಕಿನ ಮಾಜಿ ಅಧ್ಯಕ್ಷ ದಾಮೋದರ ನಿಸರ್ಗ ನಿಧನ

31-08-24 11:12 pm       Mangalore Correspondent   ಕರಾವಳಿ

ಹಿರಿಯ ಬಿಲ್ಲವ ಮುಂದಾಳು, ತುಳು- ಕನ್ನಡ ಸಂಘಟಕ, ಸಾಮಾಜಿಕ- ಧಾರ್ಮಿಕ ಕ್ಷೇತ್ರದ ನಾಯಕ, ಗೋಕರ್ಣನಾಥ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ. ದಾಮೋದರ ನಿಸರ್ಗ (73) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌

ಮಂಗಳೂರು, ಆಗಸ್ಟ್ 31: ಹಿರಿಯ ಬಿಲ್ಲವ ಮುಂದಾಳು, ತುಳು- ಕನ್ನಡ ಸಂಘಟಕ, ಸಾಮಾಜಿಕ- ಧಾರ್ಮಿಕ ಕ್ಷೇತ್ರದ ನಾಯಕ, ಗೋಕರ್ಣನಾಥ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ. ದಾಮೋದರ ನಿಸರ್ಗ (73) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು, ಕನ್ನಡ ಸಾಹಿತ್ಯ ಸಂಘಟನೆ, ಸಮ್ಮೇಳನಗಳನ್ನು ಸಂಯೋಜಿಸಿದ ಅನುಭವಿ, ತುಳುಕೂಟದ ಅಧ್ಯಕ್ಷರಾಗಿ ತುಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ದಾಮೋದರ ನಿಸರ್ಗ ಅವರು ಹೆಸರಾಂತ ಕಾದಂಬರಿಕಾರ, ಚಲನಚಿತ್ರ ನಿರ್ದೇಶಕ ವಿಶುಕುಮಾರ್ ಇವರ ಸೋದರ. 1949ರಲ್ಲಿ ಮಂಗಳೂರಿನ ಮರೋಳಿಯ ನಿಸರ್ಗ ಮನೆಯಲ್ಲಿ ಯಕ್ಷಗಾನ ಕ್ಷೇತ್ರದ ದಿಗ್ಗಜ ದೋಗ್ರ ಪೂಜಾರಿ ಮತ್ತು ಚಂದ್ರಾವತಿ ಇವರ ಮಗನಾಗಿ ಜನಿಸಿದ್ದರು. ಇವರು ಮಡದಿ ಹೇಮಾ ನಿಸರ್ಗ, ಮಗಳು ಡಾಕ್ಟರ್ ವಿನ್ಯಾಸ ನಿಸರ್ಗ, ಅಳಿಯ ಡಾಕ್ಟರ್ ವಿನಯ್ ಜತ್ತನ್ ಮತ್ತು ಮಗ ತ್ರಿದೇವ್ ನಿಸರ್ಗ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

ಸಾಹಿತ್ಯ ಸಂಘಟನೆಯ ಜೊತೆಗೆ ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ದಾಮೋದರ ನಿಸರ್ಗ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೈಸರರಾಗಿ, ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾಗಿ, ಕಂಕನಾಡಿ ಗರಡಿಯ ಆಡಳಿತ ಮಂಡಳಿಯ ಸದಸ್ಯರಾಗಿ, ಕಂಕನಾಡಿ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಕುಡ್ಲ ತುಳುಕೂಟದ ಅಧ್ಯಕ್ಷರಾಗಿ, ತುಳು ಒಕ್ಕೂಟದ ಕಾರ್ಯಾಧ್ಯಕ್ಷರಾಗಿ, ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ, ದೋಗ್ರ ಪೂಜಾರಿ ಯಕ್ಷಗಾನ ಪ್ರಶಸ್ತಿಯ ಸ್ಥಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.‌ 

ಬಿ ದಾಮೋದರ ನಿಸರ್ಗ ಅವರ ಅಂತಿಮ ಸಂಸ್ಕಾರ ಭಾನುವಾರ ಸೆ.1ರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮರೋಳಿಯ ಅವರ ಸ್ವಗೃಹದಿಂದ ಮೆರವಣಿಗೆಯಲ್ಲಿ ಬಂದು ಕಂಕನಾಡಿ ಗರಡಿಯ ಮುಂಭಾಗದಲ್ಲಿ 11 ಗಂಟೆಯಿಂದ 12 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಸ್ಥರು ತಿಳಿಸಿದ್ದಾರೆ.

73 year old Billava, Gokarnath bank fomer director Damodar Nisarga passes away in Mangalore.