Mangalore Ayush instrument scam, Health minister, Dinesh Rao: ಮಂಗಳೂರಿನ ಆಯುಷ್ ಆಸ್ಪತ್ರೆ ಉಪಕರಣ ಖರೀದಿ ಅವ್ಯವಹಾರ ಆರೋಪ ; ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾಗೆ ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವರು 

02-09-24 09:20 pm       Mangalore Correspondent   ಕರಾವಳಿ

ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಯಲ್ಲಿ 28 ಲಕ್ಷ ವೆಚ್ಚದ ಸಿಎಸ್.ಆರ್ ನಿಧಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಕೂಲಂಕುಷವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಆದೇಶಿಸಿದ್ದಾರೆ. 

ಮಂಗಳೂರು, ಸೆ.2: ವೆನ್ಲಾಕ್ ಆಸ್ಪತ್ರೆಯಲ್ಲಿ 50 ಬೆಡ್ ಆಯುಷ್ ಆಸ್ಪತ್ರೆಯ ಉಪಕರಣ ಖರೀದಿಯಲ್ಲಿ 28 ಲಕ್ಷ ವೆಚ್ಚದ ಸಿಎಸ್.ಆರ್ ನಿಧಿ ಯೋಜನೆಯಡಿ
ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೂಲಂಕುಷವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಆದೇಶಿಸಿದ್ದಾರೆ. 

ಪ್ರಕರಣ ಕುರಿತಂತೆ ಮಂಗಳೂರು ಜಿಲ್ಲಾ ಆಯುಷ್ ಅಧಿಕಾರಿ ಖುದ್ದು ಸಚಿವರನ್ನ ಭೇಟಿ ಮಾಡಿ ಉದ್ದೇಶಪೂರ್ವಕ ತನ್ನ ಮೇಲೆ ಆರೋಪ ಹೊರಿಸುತ್ತಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.‌ ಸಾಮಾಜಿಕ ಕಾರ್ಯಕರ್ತ ವಾಸುದೇವ್ ಹೊಳ್ಳ, ಜಿ.ಎಸ್.ಡಿ ಪಾಣಿ, ಕಿರಣ್ ಪೂಜಾರಿ ಎಂಬವರು ದುರುದ್ದೇಶ ಹೊಂದಿದ್ದು, ಆಯುಷ್ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿದ್ದಾರೆ. ಅನಗತ್ಯ ದೂರುಗಳನ್ನ ಸಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ. ಸಿಎಸ್.ಆರ್ ಯೋಜನೆಯ ಮೂಲಕ ಹಣವನ್ನ ತಂದು ಆಯುಷ್ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ಶ್ರಮ ವಹಿಸಲಾಗಿತ್ತು. ಆದರೆ ಈ ಮೂವರು ತಮ್ಮ ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಗಾಗಿ ಸರ್ಕಾರಿ ಕಾರ್ಯಕ್ಕೆ ಅಡ್ಡಿಯುಂಟುಮಾಡಿದ್ದಾರೆ ಎಂದು ದೂರಿದ್ದರು.  

ಇನ್ನೊಂದಡೆ ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವು ಕೇಳಿಬಂದಿತ್ತು. ಆರೋಪ ಪ್ರತ್ಯಾರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ಕೂಲಂಕುಷ ತನಿಖೆಗೆ ಆರೋಗ್ಯ ಸಚಿವರು ಆದೇಶಿಸಿದ್ದಾರೆ.‌ ಆರೋಪದಲ್ಲಿ ಸತ್ಯಾಸತ್ಯತೆ ಇದೆಯೇ ಅಥವಾ ಉದ್ದೇಶಪೂರ್ವಕವಾಗಿ ದೂರು ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಆಯುಷ್ ಅಧಿಕಾರಿಗಳು ತಪ್ಪು ಎಸಗಿದ್ದರೆ ಸೂಕ್ತ ಶಿಸ್ತುಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿ. ಒಂದು ವೇಳೆ ಆಯುಷ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ದುರುದ್ದೇಶದಿಂದ ದೂರುದಾರರು ಆರೋಪಗಳನ್ನ ಮಾಡಿದ್ದಾರೆ ಎಂದು ಕಂಡುಬಂದರೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಆದೇಶದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಸೂಚಿಸಿದ್ದಾರೆ.

Mangalore Ayush instrument scam, Health minister orders probe.