Greenpeace, Mangalore Air quality: ಮಂಗಳೂರು, ಬೆಂಗಳೂರು, ಮೈಸೂರಿನಲ್ಲಿ ಗಾಳಿ ಗುಣಮಟ್ಟ ಕುಸಿತ ; ಮಾಲಿನ್ಯ ತಗ್ಗಿಸದಿದ್ದರೆ ಗಂಭೀರ ದುಷ್ಪರಿಣಾಮದ ಎಚ್ಚರಿಕೆ

06-09-24 10:28 pm       Mangalore Correspondent   ಕರಾವಳಿ

ಮಂಗಳೂರು, ಬೆಂಗಳೂರು, ಮೈಸೂರು ನಗರದಲ್ಲಿ ವಾತಾವರಣದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್ ಪೀಸ್ ಸಂಶೋಧನಾ ವರದಿ ನೀಡಿದೆ.

ಮಂಗಳೂರು, ಸೆ.6: ಮಂಗಳೂರು, ಬೆಂಗಳೂರು, ಮೈಸೂರು ನಗರದಲ್ಲಿ ವಾತಾವರಣದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್ ಪೀಸ್ ಸಂಶೋಧನಾ ವರದಿ ನೀಡಿದೆ. ಕರ್ನಾಟಕದ ಬೆಂಗಳೂರು, ಮೈಸೂರು ಹಾಗು ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಮಾಲಿನ್ಯ ತಗ್ಗಿಸಲು ಕ್ರಮ ಕೈಗೊಳ್ಳದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಸೂಕ್ಷ್ಮ) ಮತ್ತು ಪಿಎಂ 10 (ಅತಿಸೂಕ್ಷ್ಮ) ಕಣಗಳ ಪ್ರಮಾಣವು ಡಬ್ಲ್ಯುಎಚ್‌ಒ ಸೂಚಿತ ಸರಾಸರಿ ಮಟ್ಟ ಮೀರಿದ್ದು ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಪೀಸ್ ಇಂಡಿಯಾದ ವರದಿ ಎಚ್ಚರಿಸಿದೆ. ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ ಮತ್ತು ಪುದುಚೇರಿ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸಲಾಗಿತ್ತು. ಹತ್ತು ನಗರಗಳ ಪೈಕಿ ವಿಶಾಖಪಟ್ಟಣಂ ನಗರದಲ್ಲಿ ಗಾಳಿ ಗುಣಮಟ್ಟ ತೀವ್ರ ಕುಸಿತ ಕಂಡಿದೆ. ಅಲ್ಲಿನ ವಾತಾವರಣ ನಿಗದಿತ ಮಾನದಂಡಕ್ಕಿಂತ ಗುಣಮಟ್ಟದ ಅಂಶ 10 ಪಟ್ಟು ಕುಸಿದಿರುವುದು ದೃಢಪಟ್ಟಿದೆ.

ಅಲ್ಲದೆ ಇದು ಗಾಳಿಯ ಗುಣಮಟ್ಟ ನಿರ್ಧರಿಸುವ ನ್ಯಾಶನಲ್‌ ಎಂಬಿಯಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್‌ ನಿಗದಿಪಡಿಸಿದ ಮಿತಿಗಳನ್ನೂ ಮೀರಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ. ಡಬ್ಲ್ಯುಎಚ್‌ಒ ಮಾರ್ಗಸೂಚಿಗಳೊಂದಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಾಗಿದೆ ಎಂಬುದಾಗಿ ವರದಿ ಹೇಳಿದೆ.

Greenpeace India warns of bad air quality in Mangalore Bangalore and Mysuru.