ಧರ್ಮಸ್ಥಳದಲ್ಲಿ ಇಂದಿನಿಂದ ಲಕ್ಷದೀಪೋತ್ಸವ ಸಂಭ್ರಮ

10-12-20 12:07 pm       Mangalore Correspondent   ಕರಾವಳಿ

ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇಂದಿನಿಂದ ಡಿ.14 ರ ವರೆಗೆ ನಡೆಯಲಿದೆ.

ಬೆಳ್ತಂಗಡಿ, ಡಿ.10: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇಂದಿನಿಂದ ಡಿ.14 ರ ವರೆಗೆ ನಡೆಯಲಿದೆ. 13  ಮತ್ತು 14 ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. 

ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಡಿ.10ರಂದು ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ಡಿ.14ರಂದು ಗೌರಿಮಾರುಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಲಕ್ಷ ದೀಪೋತ್ಸವದ ಯಶಸ್ವಿಗಾಗಿ ಕ್ಷೇತ್ರದಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಕಲ ಸಿದ್ದತೆಗಳನ್ನು ನಡೆಸಲಾಗಿದೆ. ದೇವರು ಸವಾರಿ ಮಾಡುವ ರಥಬೀದಿ, ರಾಜ ಬೀದಿಗಳನ್ನು, ದೇವಸ್ಥಾನ, ಬೀಡು, ಅನ್ನಪೂರ್ಣ ಸೇರಿದಂತೆ ಕ್ಷೇತ್ರದಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಭಕ್ತರ ಸುರಕ್ಷತೆಯ ನಿಟ್ಟಿನಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಮಾಸ್ಕ್ ಕಡ್ಡಾಯ ಧಾರಣೆ ಮಾಡಬೇಕು.  ವಸ್ತು ಪ್ರದರ್ಶನ ಹಾಗೂ ಬೀದಿ ಬದಿಯ ಅಂಗಡಿಗಳು ಇರುವುದಿಲ್ಲ. ಸರಕಾರದ ನಿಯಮದಂತೆ ಅಗತ್ಯ ಕ್ರಮಗಳೊಂದಿಗೆ ದೀಪೋತ್ಸವ ಸರಳವಾಗಿ ಆಚರಣೆಗೊಳ್ಳಲಿದೆ. ಈ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಮನೆಯಲ್ಲೇ ಕುಳಿತು ವೀಕ್ಷಣೆ ಮಾಡಲು ಅವಕಾಶ ಮಾಡಲಾಗಿದೆ. ’ಶ್ರೀ ಕ್ಷೇತ್ರ ಧರ್ಮಸ್ಥಳ’ ಹೆಸರಿನ ಯೂಟ್ಯೂಬ್, ಫೇಸ್‌ಬುಕ್ ಹಾಗೂ ನಮ್ಮ ಕುಡ್ಲ, ಶ್ರೀಶಂಕರ ಟಿವಿಯಲ್ಲಿ ನೇರ ವೀಕ್ಷಣೆಗೆ ಕ್ಷೇತ್ರದಿಂದ ಅವಕಾಶ ಮಾಡಲಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

A Laksha Deepotsava will be held at Dharmasthala for four days from December 10, 2020.