ಕೊನೆಗೂ ಗೆಜ್ಜೆ ಕಟ್ಟಿದ ಕಟೀಲು ಕಲಾವಿದರು, ಇಂದಿನಿಂದಲೇ ಮಾರ್ದನಿಸಲಿದೆ ಚೆಂಡೆಯ ಅಬ್ಬರ !!

10-12-20 12:38 pm       Mangalore Correspondent   ಕರಾವಳಿ

ಕೋವಿಡ್ ಕಾರಣದಿಂದ ಆತ‌ಂಕ ಮನೆಮಾಡಿದ್ದ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊನೆಗೂ ರಂಗಸ್ಥಳ ಸಿದ್ಧಗೊಂಡಿದೆ.

ಮಂಗಳೂರು, ಡಿ.10 : ಕೋವಿಡ್ ಕಾರಣದಿಂದ ಆತ‌ಂಕ ಮನೆಮಾಡಿದ್ದ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಕೊನೆಗೂ ರಂಗಸ್ಥಳ ಸಿದ್ಧಗೊಂಡಿದೆ. ಕಟೀಲು ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟಕ್ಕೆ ವೇದಿಕೆ ರೆಡಿಯಾಗಿದ್ದು ಕಲಾವಿದರು ಗೆಜ್ಜೆ ಕಟ್ಟಿದ್ದಾರೆ. ಸಂಪ್ರದಾಯದಂತೆ ದೇವಳದ ಅರ್ಚಕರು ಗೆಜ್ಜೆಗಳನ್ನು ನೀಡುವ ಮೂಲಕ ಆರು ಮೇಳಗಳ ಆಟಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಗಿದೆ. 

ಪ್ರತಿಬಾರಿ ನವೆಂಬರ್ ತಿಂಗಳ ಮಧ್ಯದಲ್ಲಿ ಕಟೀಲು ಮೇಳದ ತಿರುಗಾಟ ಆರಂಭಗೊಳ್ಳುತ್ತದೆ. ಆರಂಭದಲ್ಲಿ ದೇಗುಲದ ವಠಾರದಲ್ಲಿ ಆರೂ ಮೇಳಗಳ ಕಲಾವಿದರು ಪ್ರತ್ಯೇಕ ರಂಗಸ್ಥಳ ನಿರ್ಮಿಸಿ, ಯಕ್ಷಗಾನ ಆಡುತ್ತಾರೆ. ಆರು ಮೇಳದ ಅದ್ಭುತ ಪ್ರದರ್ಶನ ಅಷ್ಟೇ ಅದ್ಧೂರಿಯಾಗಿರುತ್ತದೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಹಿಂದಿನ ರೀತಿಯ ಅಬ್ಬರ ಇರಲಿಲ್ಲ. ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಆಟ ಆಡಿಸಲಾಗಿದೆ. ಕಟೀಲು ದೇವರಿಗೆ ನಮಿಸಿ ಕಲಾವಿದರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ಈ ಬಾರಿಯ ತಿರುಗಾಟಕ್ಕೆ ಯಾವುದೇ ವಿಘ್ನ ಬಾರದಿರಲೆಂದು ದೇವರಲ್ಲಿ ಬೇಡಿಕೊಂಡು ಮುಂದಿನ ಹೆಜ್ಜೆ ಇಟ್ಟಿದ್ದಾರೆ. 

\

ಈಗ ಶುರುವಾದ ತಿರುಗಾಟ ಮೇ ತಿಂಗಳ 25 ವರೆಗೂ ಯಕ್ಷಗಾನ ಸೇವೆ ನಡೆಯುತ್ತದೆ.‌ ಪತ್ತನಾಜೆಗೆ ಮತ್ತೆ ಗೆಜ್ಜೆ ಒಳಗಿಟ್ಟು ಕಲಾವಿದರಿಗೆ ಮಳೆಗಾಲದ ರಜೆ ಸಿಗುತ್ತದೆ. ಆರು ಮೇಳಗಳಿದ್ರೂ ಯಕ್ಷಗಾನ ಆಡಿಸುವುದಕ್ಕೆ ಕೊರತೆ ಇಲ್ಲ. ಸಾಧಾರಣವಾಗಿ ಪ್ರತಿ ವರ್ಷದ ಆಟ ಆಡಿಸುವ ಮಂದಿಯೇ ಹೆಚ್ಚಿದ್ದಾರೆ. ಹೀಗಿದ್ದರೂ, 20 ವರ್ಷಗಳ ಕಾಲ ಯಕ್ಷಗಾನ ಸೇವೆ ಬುಕ್ಕಿಂಗ್ ಇರುವುದು ವಿಶೇಷ. 

ಕಟೀಲು ಮೇಳದಲ್ಲಿ ಈ ಬಾರಿ ಕೆಲವು ಬದಲಾವಣೆಗಳೂ ಆಗಿವೆ. ಭಾಗವತ ಪಟ್ಲ ಸತೀಶ ಶೆಟ್ಟಿ ಮೇಳದಿಂದ ಹೊರಬಂದು ಈ ಬಾರಿ ಪಾವಂಜೆ ಹೆಸರಲ್ಲಿ ಹೊಸ ಮೇಳ ಕಟ್ಟಿದ್ದಾರೆ. ಕಟೀಲಿನಲ್ಲಿದ್ದ ಕೆಲವು ಕಲಾವಿದರು ಇತ್ತ ಪಟ್ಲರ ಜೊತೆ ಪಾವಂಜೆ ಮೇಳಕ್ಕೆ ಸೇರಿದ್ದಾರೆ. ಹೀಗಾಗಿ ಕಟೀಲು ಮೇಳದಲ್ಲಿ ಹಳಬರು ಮತ್ತು ಹೊಸಬರ ಸಮ್ಮಿಲನದ ಜೊತೆ ಕಟೀಲು ಕ್ಷೇತ್ರ ಮಹಾತ್ಮೆಯ ಸಿಂಹನಾದಕ್ಕೆ ಕಲಾವಿದರು ರೆಡಿಯಾಗಿದ್ದಾರೆ. ಇಂದಿನಿಂದಲೇ ಕಟೀಲು ಮೇಳದ ಚೆಂಡೆಯ ಅಬ್ಬರ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುರಣಿಸಲಿದೆ.

Photo Credit: Ravi Posavanike - Times of India