Mangalore, Gurukiran, Actor Darshan: ಮಹಿಳಾ ಶೋಷಣೆ ಪ್ರೆಸ್ನಲ್ಲಿ ಇಲ್ವಾ, ಕಾಲೇಜಲ್ಲಿ ಇಲ್ವಾ.. ಸಿನಿಮಾದಲ್ಲಿ ಮಾತ್ರನಾ..? ದರ್ಶನ್ ಕೇಸಿಗೂ ಸಿನಿಮಾ ಇಂಡಸ್ಟ್ರಿಗೂ ಸಂಬಂಧ ಇಲ್ಲ! ಮ್ಯೂಸಿಕ್ ಹಾದಿ ತೋರಿಸಿದ ‘ಕ್ವಾಲಿಟಿ’ ಪಾರ್ಟಿ, ಅರಗಿಣಿ ಫೋಟೋ ಕಾಮಿಕ್ಸ್ ನಿಂದಿಡಿದು ಸಂಗೀತದಲ್ಲಿ ಮಿಂದೆದ್ದ ಗುರುಕಿರಣ್ ಬೋಲ್ಡ್ ಮಾತು  

20-09-24 09:03 pm       Mangalore Correspondent   ಕರಾವಳಿ

ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಗೌರವ ಪಡೆದಿರುವ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್, ಸಿನಿಮಾ ಇಂಡಸ್ಟ್ರಿ ಸೇರಿದ್ದೇ ಅಚಾನಕ್ಕಾಗಿ. ಡಾಕ್ಟರೇಟ್ ಗೌರವ ಪಡೆದ ಗುರುಕಿರಣ್ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.

ಮಂಗಳೂರು, ಸೆ.20: ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಗೌರವ ಪಡೆದಿರುವ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್, ಸಿನಿಮಾ ಇಂಡಸ್ಟ್ರಿ ಸೇರಿದ್ದೇ ಅಚಾನಕ್ಕಾಗಿ. ಡಾಕ್ಟರೇಟ್ ಗೌರವ ಪಡೆದ ಗುರುಕಿರಣ್ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ, ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪತ್ರಕರ್ತರು ಕೇಳಿದ ಸಿನಿಕತನದ ಪ್ರಶ್ನೆಗಳಿಗೂ ತದೇಕಚಿತ್ತದಿಂದ ಉತ್ತರಿಸಿದರು.

ಸಂಗೀತ ಕಲಿತು ಇಂಡಸ್ಟ್ರಿಗೆ ಹೋಗಿದ್ದಲ್ಲ. ಲಿಕ್ಕರ್ ಒಂದರ ಕೆಲಸಕ್ಕಾಗಿ ಬೆಂಗಳೂರು ಹೋಗಿದ್ದೆ. ಬೆಂಗಳೂರಿನಲ್ಲಿದ್ದಾಗ ದಿನವೂ ಸಂಜೆಯ ವೇಳೆಗೆ ಪತ್ರಕರ್ತರು ಸೇರುತ್ತಿದ್ದರು. ಅಲ್ಲಿಗೆ ನಾನೂ ಹೋಗುತ್ತಿದ್ದೆ. ರವಿ ಬೆಳಗೆರೆ, ಬಾಲಕೃಷ್ಣ ಕಾಕತ್ಕರ್, ವಿ. ಮನೋಹರ್ ಹೀಗೆ ಎಲ್ಲರೂ ಬರುತ್ತಿದ್ದರು. ವಿ. ಮನೋಹರ್ ಅರಗಿಣಿ ಪತ್ರಿಕೆಯಲ್ಲಿ ಫೋಟೋ ಕಾಮಿಕ್ಸ್ ಅಂತ ಕಾರ್ಟೂನ್ ಬರೆಯುತ್ತಿದ್ದರು. ನಾವು ಊರಿನವರು ಅನ್ನುವ ಸ್ನೇಹ ನಮ್ಮೊಳಗಿತ್ತು. ಆಗೆಲ್ಲ ಅರಗಿಣಿ ಮತ್ತು ಚಿತ್ರತಾರಾ ಸಿನಿಮಾ ಪತ್ರಿಕೆಗಳಾಗಿ ಜನಪ್ರಿಯವಾಗಿದ್ದವು. ಒಂದು ದಿನ ಫೋಟೋ ಕಾಮಿಕ್ಸ್ ನಲ್ಲಿ ಸುನಿಲ್, ತಾರಾ ಮತ್ತು ನನ್ನ ಫೋಟೋಗಳನ್ನು ವಿ. ಮನೋಹರ್ ಪ್ರಕಟಿಸಿದ್ದರು. ನನ್ನೊಳಗಿನ ಸಂಗೀತ ಜ್ಞಾನವನ್ನು ಹುಡುಕಿದ್ದು ವಿ. ಮನೋಹರ್. ನೀನು ಹನುಮಂತನ ಹಾಗೆ, ನಿನ್ನ ಶಕ್ತಿ ನಿನಗೆ ಗೊತ್ತಿಲ್ಲ ಎಂದು ಹೇಳಿ ಹುರಿದುಂಬಿಸುತ್ತಿದ್ದರು.

ನನಗೀಗ ಸಾಧಾರಣ ಎಲ್ಲ ಸಂಗೀತ ಉಪಕರಣಗಳನ್ನೂ ನುಡಿಸುವಷ್ಟು ಅರೆಬರೆ ಜ್ಞಾನ ಇದೆ. ಅದಕ್ಕೆ ಕಾರಣ, ಕ್ವಾಲಿಟಿ ಹೊಟೇಲ್. ನಾವು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕಲಿತಿರೋದು. ಅಲ್ಲಿರುವಾಗಲೇ ಮೊದಲ ಹಾಡು ಹಾಡಿದ್ದು. ಜೊತೆಗಿದ್ದವರು ಒಳ್ಳೆದಾಗಿದೆ ಅಂತ ಹೇಳಿದ್ದೇ ಹಾಡಲು ಪ್ರೇರಣೆ. ಆಗೆಲ್ಲಾ, ಮಾವ ಸದಾನಂದ ಶೆಟ್ಟಿಯವರ ‘ಕ್ವಾಲಿಟಿ’ಯಲ್ಲಿ ವೀಕೆಂಡ್ ಪಾರ್ಟಿ ಆಗ್ತಾ ಇತ್ತು. ಪಾರ್ಟಿಗೆ ಹಾಡು, ಕುಣಿತವೂ ಇರ್ತಿತ್ತು. ಅಲ್ಲಿಯೇ ಸಂಗೀತ ಉಪಕರಣಗಳನ್ನು ನುಡಿಸುವುದು, ಹಾಡಲು ಕಲಿತಿದ್ದು. ಒಂದು ದಿನ ಡ್ರಮ್ಮರ್ ಬಂದಿಲ್ಲಾಂದ್ರೆ ಅದನ್ನೂ ನಾವೇ ಮಾಡಬೇಕಿತ್ತು. ಹಾಡೋದನ್ನೂ ಮಾಡಬೇಕಿತ್ತು. ನಾವು ಹಾಡಿನ ಜೊತೆ ಜೊತೆಗೆ ಎಲ್ಲವನ್ನೂ ಮಾಡಬೇಕಿತ್ತು.

ಮ್ಯೂಸಿಕ್ ನನ್ನ ಇಷ್ಟದ ಫೀಲ್ಡ್ ಅಷ್ಟೇ. ಸಂಗೀತ ನಿರ್ದೇಶಕ ಆಗಬೇಕಂತ ಕನಸು ಕಂಡಿರಲಿಲ್ಲ. ಉದಯ ಟಿವಿಯಲ್ಲಿ ಸೀರಿಯಲ್ಗಳಿಗೆ ಸಂಗೀತ ನೀಡೋದಕ್ಕೆ ಅವಕಾಶ ಸಿಕ್ಕಿತ್ತು. ತುಂಬಾ ಸೀರಿಯಲ್ಗಳಲ್ಲಿ ಪಾರ್ಟ್ ಮಾಡಿದ್ದೇನೆ, ಜೊತೆಗೆ ಸಂಗೀತವನ್ನೂ ನೀಡಿದ್ದೇನೆ. ಮೊದಲು ನಟಿಸಿದ್ದು ತುಳು ಫಿಲ್ಮ್ ಬದ್ಕೊಂಜಿ ಕಬಿತೆ ಅನ್ನುವ ಚಿತ್ರದಲ್ಲಿ. ನನ್ನೊಳಗಿನ ಸಂಗೀತ ಪ್ರೇಮ ಕಂಡು ಉಪೇಂದ್ರ ಅವರು ‘ಎ’ ಸಿನಿಮಾದಲ್ಲಿ ಸಂಗೀತ ನಿರ್ದೇಶಕನಾಗಿ ಮಾಡಿಕೊಂಡರು. ಅದೃಷ್ಟಕ್ಕೆ ಅದು ಹಿಟ್ ಆಯ್ತು. ನನ್ನ ಮೊದಲ ಚಿತ್ರದ ಬಗ್ಗೆ ಶೂಟಿಂಗ್ ಆಗುತ್ತಿದ್ದಾಗಲೇ ಕವರೇಜ್ ಕೊಟ್ಟಿದ್ದು ಯಜ್ಞ ಮಂಗಳೂರು. ಇವರು ಆಗಲೂ ಇದೇ ರೀತಿ ಬಿಳಿ ಗಡ್ಡ ಇಟ್ಕೊಂಡಿದ್ದರು. ಈಗಲೂ ಅದೇ ಫ್ಯಾಶನ್ನಲ್ಲಿದ್ದಾರೆ ಎಂದು ಜೊತೆಗೆ ಕುಳಿತಿದ್ದ ಖ್ಯಾತ ಛಾಯಾಗ್ರಾಹಕ ಯಜ್ಞ ಅವರನ್ನು ನೋಡಿ ನಕ್ಕರು.

ಏಕ್ಟಿಂಗ್ ಅಂತ ಹೋಗಿದ್ದೆ, ಸಂಗೀತ ನನಗೆ ಫ್ಯಾಶನ್ ಆಗಿತ್ತು. ಅದರಲ್ಲೊಂದು ಖುಷಿ ಇತ್ತು. ಮನೇಲಿ ಮಾತ್ರ ಸಿಕ್ಕಾಪಟ್ಟೆ ಬೈತಿದ್ದರು. ಏನೋ ಹುಚ್ಚಾಟ ಮಾಡ್ತಿದ್ದಾನೆ ಅಂತ. ಅಮ್ಮನಿಗೆ ನಾನು ಡಾಕ್ಟರ್ ಆಗಬೇಕಂತ ಇತ್ತು. ಈಗ ಡಾಕ್ಟರೇಟ್ ಸಿಕ್ಕಾಗ ಹೆಚ್ಚು ಖುಷಿ ಪಟ್ಟಿದ್ದು ಅಮ್ಮ. ಕಡೆಗೂ ಡಾಕ್ಟರ್ ಆದಿಯಲ್ಲಾ ಅಂತ ಹೇಳ್ತಾರೆ. ಆಗೆಲ್ಲ ಡಾಕ್ಟರ್ ಅಥವಾ ಇಂಜಿನಿಯರ್ ಆದ್ರೆ ಮಾತ್ರ ಹೆಣ್ಣು ಸಿಗೋದು ಅಂತ ಇತ್ತು. ಅದು ಬಿಟ್ಟರೆ ಬೇರೆ ಉದ್ಯೋಗವೇ ಇಲ್ಲ ಅನ್ನುವ ಭಾವನೆ ನಮ್ಮಲ್ಲಿತ್ತು. ಮಂಗಳೂರಿನ ಕ್ವಾಲಿಟಿ ಹೊಟೇಲಲ್ಲಿ ಹಾಡುತ್ತಿದ್ದುದರಿಂದ ಹಾಡುವುದಕ್ಕೆ ಕಲಿತುಕೊಂಡಿದ್ದೆ. ಇದೇ ಅನುಭವದಲ್ಲಿ ಗುರುಕಿರಣ್ ನೈಟ್ಸ್ ಅಂತ ಮಾಡಿದ್ದೆ. 1983ರಿಂದ 1993ರ ವರೆಗೆ ಮಂಗಳೂರಿನಲ್ಲಿ ಗುರುಕಿರಣ್ ನೈಟ್ಸ್ ಅಂತ ಆರ್ಕೆಸ್ಟ್ರಾ ಮಾಡಿದ್ದೆ. ಆರ್ಕೆಸ್ಟ್ರಾದಲ್ಲಿ ಸೆಕೆಂಡ್ ಟೇಕ್ ಇಲ್ಲ. ಸಕ್ಸಸ್ ಆದ್ರೆ ಚಪ್ಪಾಳೆ, ಇಲ್ಲಾಂದ್ರೆ ಟೊಮೇಟೋ ಎಂದು ಮುಗುಳ್ಕಕ್ಕರು. ಸಿನಿಮಾದಲ್ಲಿ 25 ಟೇಕ್ ಆದ್ರೂ ಮಾಡೋಕೆ ಅವಕಾಶ ಇದೆ. ಆರ್ಕೆಸ್ಟ್ರಾದಲ್ಲಿ ಹಾಡುವುದೇ ಹೆಚ್ಚು ಸವಾಲಿನದ್ದು ಎಂದರು ಗುರುಕಿರಣ್.
 
ಮಂಗಳೂರಿನ ಜನಕ್ಕೆ ಇಗೋ ಸಮಸ್ಯೆ  
 
ಮಂಗಳೂರು ಜನ ಚೇಂಜ್ ಆಗಲ್ಲ. ಒಂಥರಾ ಸ್ವಾಭಿಮಾನ ಎಲ್ಲದಕ್ಕೂ ಅಡ್ಡ ಬರತ್ತೆ. ಯಾರಾದ್ರೂ ಹೀರೋ ಬಂದರೂ ಆಟೋಗ್ರಾಫ್ ಕೇಳೋದಕ್ಕೂ ಹಿಂಜರಿಕೆ. ಕೆಲಸ ಕೇಳೋದಕ್ಕೂ ಸ್ವಾಭಿಮಾನದ ಸಮಸ್ಯೆ. ಜೊತೆಗೆ ನಿಂತು ಫೋಟೋ ತೆಗೆಸಿಕೊಳ್ಳಬೇಕಂತಿದ್ದರೂ, ಅವನೇನು ದೊಡ್ಡ ಜನಾನ ಅನ್ನೋ ಭಾವನೆ ನಮ್ಮ ಜನರಲ್ಲಿದೆ. ಇದೇ ಕಾರಣಕ್ಕೆ ನಮ್ಮ ಜನ ಸೋಲ್ತಿದ್ದಾರೆ. ಹೆಸರು, ದುಡ್ಡು ಮಾಡಬೇಕು ಅಂತ ಇರತ್ತೆ. ಆದರೆ ಎಲ್ಲದಕ್ಕೂ ಇಗೋ ಸಮಸ್ಯೆ ಕಾಡುತ್ತದೆ. ಜೀವನ ಪೂರ್ತಿ ಕಷ್ಟ ಪಡುತ್ತಾನೆ, ಖುಷಿ ಪಡಲ್ಲ. ಜೀವನ ಅಂದರೆ, ಖುಷಿಯಾಗಿರಬೇಕು ಅಷ್ಟೇ ನನ್ನ ಪಾಲಿಸಿ.
 
ಯಾವುದೇ ಆರ್ಟ್ ಫೀಲ್ಡ್ ಸಕ್ಸಸ್ ಕಷ್ಟ. ಮ್ಯೂಸಿಕ್ಕಲ್ಲಿ ಫ್ಯಾಶನ್ ಇರಬೇಕು, ಅದೇ ಪ್ರೊಫೆಶನ್ ಆಗತ್ತೆ. ಅವಮಾನ ಆದಾಗಲೇ ನಮ್ಮಲ್ಲಿ ಬೆಂಕಿ ಹುಟ್ಟುವುದು. ನಾನೇ ಬರೀತಿದ್ದೆ, ನಾನೇ ಹಾಡುತ್ತಿದ್ದೆ. ಸಂಭಾವನೆ, ಅವಮಾನದ ಬಗ್ಗೆ ಚಿಂತೆ ಮಾಡಿರಲಿಲ್ಲ. ಮೊದಲ ಸಿನಿಮಾ ಮಾಡಿದಾಗ, ಎರಡೂವರೆ ಲಕ್ಷ ಸಿಕ್ಕಿತ್ತು. ಮೂರನೇ ಸಿನಿಮಾ ಮಾಡಿದಾಗ, ನನ್ನ ಸಂಗೀತ ಕೋಟಿ ದುಡಿದಿತ್ತು. ಹಿಂದೆಲ್ಲ ಒಂದು ಹಾಡು ರೆಕಾರ್ಡ್ ಆಗ್ಬೇಕಾದ್ರೆ 40 ಜನ ಬೇಕಿತ್ತು. ಈಗ ಎಲ್ಲವೂ ಒಂದು ಕಂಪ್ಯೂಟರಲ್ಲಿ ಇದೆ. ಈಗ ಅಂಥ ಕಷ್ಟ ಇಲ್ಲ.


 
ದರ್ಶನ್ ಪ್ರಕರಣಕ್ಕೂ ಸಿನಿಮಾಕ್ಕೂ ಸಂಬಂಧ ಇಲ್ಲ
 
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಕೇಳಿದಾಗ, ಸಿನಿಮಾಕ್ಕೂ ದರ್ಶನ್ ಪ್ರಕರಣಕ್ಕೂ ಸಂಬಂಧ ಇಲ್ಲ. ಕಾನೂನು ತನ್ನದೇ ಹಾದಿಯಲ್ಲಿ ನಡೆದುಕೊಳ್ಳುತ್ತದೆ. ಸೆಲೆಬ್ರಿಟಿ ಆಗಿದ್ದರೂ, ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಬೇಕು. ಅದು ಬಿಟ್ಟರೆ, ಅದರಿಂದ ಸಿನಿಮಾ ಇಂಡಸ್ಟ್ರಿಗೆ ತೊಂದರೆ ಆಗುತ್ತೆ ಅನ್ನುವುದರಲ್ಲಿ ತಥ್ಯ ಇಲ್ಲ ಎಂದರು. ಮಲಯಾಳ ಸಿನಿಮಾ ರೀತಿ ಕನ್ನಡದಲ್ಲಿಯೂ ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ತನಿಖೆ ಆಗಬೇಕು ಅನ್ನುವ ಅಭಿಪ್ರಾಯದ ಬಗ್ಗೆ ಕೇಳಿದಾಗ, ಆ ರೀತಿ ಕಮಿಟಿ ಮಾಡಿದ್ರೆ ಕೆಲಸ ಮಾಡೋಕೆ ಆಗಲ್ಲ. ಮಹಿಳೆಯರ ಶೋಷಣೆ ಎಲ್ಲಿ ಇಲ್ಲ ಹೇಳಿ. ಚಿತ್ರರಂಗದಲ್ಲಿ ಮಾತ್ರನಾ.. ನಿಮ್ಮ ಪ್ರೆಸ್ನಲ್ಲಿ ಇಲ್ವಾ.. ಕಾಲೇಜಲ್ಲಿ ಇಲ್ವಾ.. ಯಾವ ಕಡೆ ಇಲ್ಲ ಹೇಳಿ. ಎಲ್ಲ ಕಡೆಯೂ, ಕಚೇರಿಗಳಲ್ಲೂ ಇದೆ. ಸುಳ್ಳು ದೂರು ಕೊಟ್ಟು ರೇಪ್ ಕಾನೂನನ್ನೇ ದುರ್ಬಳಕೆ ಮಾಡಿಕೊಳ್ಳುವುದೂ ಇದೆ. ಇದರ ಬಗ್ಗೆ ಪ್ರಶ್ನೆ ಮಾಡೋರು ಕೆಲಸ ಇಲ್ಲದವರು. ಯಾರೂ ಕೆಲಸ ಇದ್ದವರು ಈ ರೀತಿ ಹೇಳೋದಿಲ್ಲ ಎಂದು ಮಾರ್ಮಿಕ ನುಡಿಗಳನ್ನಾಡಿದರು.
 
ಸಿಗರೇಟ್ ಸೇದಬಾರದು ಅಂತ ಇದೆ. ಅದನ್ನು ತೋರಿಸಬಾರದು ಅಂದ್ರೆ ಹೇಗೆ. ಯಾಕೆ ಅದನ್ನು ಸರ್ಕಾರ ಬ್ಯಾನ್ ಮಾಡಲ್ಲ. ಎಷ್ಟು ಕಾನೂನಲ್ಲಿ ಸಮಸ್ಯೆ ಇಲ್ಲ. ಸಿನಿಮಾದಲ್ಲಿ ಪ್ರಾಣಿಗಳನ್ನು ಯೂಸ್ ಮಾಡಕ್ಕಿಲ್ಲ ಅಂತ ಇದೆ. ಸುಮ್ಮನೆ ಆರೋಪ ಮಾಡುವುದೂ ಇರತ್ತೆ. ಎಲ್ಲದಕ್ಕೂ ಕಮಿಟಿ ಮಾಡ್ತಾ ಹೋದರೆ ಸಮಸ್ಯೆ ದೊಡ್ಡದಾಗತ್ತೆ. ಹಾಗೆಂದು ಯಾರೂ ಅಂದ್ಕೊಂಡ ರೀತಿ ಇಂಡಸ್ಟ್ರಿ ಇಲ್ಲ. ಈಗ ನ್ಯೂಸ್ ಕೂಡ ಸೋಲ್ಡ್ ಆಗಿದೆ. ಒಂದು ಚಾನೆಲಲ್ಲಿ ಒಂದು ಬಂದರೆ ಮತ್ತೊಂದರಲ್ಲಿ ಇನ್ನೊಂದು ಬರತ್ತೆ. ದರ್ಶನ್ ಒಬ್ಬನೇ ಈ ರೀತಿ ಮಾಡಿದ್ದಾ.. ದರ್ಶನ್ ಅಂದ್ರೆ ವೀವ್ಸ್ ಬರತ್ತೆ ಅಂತ ತೋರಿಸ್ತಿದಾರೆ.  ವಿಜಯಲಕ್ಷ್ಮಿ ಜೈಲಿಗೆ ಹೋದ್ರು ಅಂತ ಹೆಡ್ ಲೈನ್ ನ್ಯೂಸ್ ಕೊಡುತ್ತಾರೆ. ಯಾರೋ ಜೈಲಿಗೋಗಿ ಪಬ್ಲಿಸಿಟಿಗಾಗಿ ಹೇಳಿಕೆ ಕೊಡುತ್ತಾರೆ, ಎಲ್ಲವೂ ಮಾರ್ಕೆಟಿಂಗ್ ಅಷ್ಟೇ ಎಂದರು. 

ಮಂಗಳೂರು ಕನ್ನಡ ಜನ ಸ್ವೀಕರಿಸ್ತಿದಾರೆ

ಮಂಗಳೂರು ಕನ್ನಡ ಈಗ ಜನ ಸ್ವೀಕರಿಸ್ತಾ ಇದ್ದಾರೆ. ಒಂದು ವರ್ಷದಲ್ಲಿ ಹತ್ತು ಮೂವೀ ಮಂಗಳೂರು ಕನ್ನಡದಲ್ಲಿ ಬಂದಿದೆ. ಹಿಟ್ ಮೂವಿ ಆಗ್ತಾ ಇದೆ. ಸಿನಿಮಾದ ವ್ಯಾಖ್ಯಾನ ಬದಲಾಗ್ತಾ ಇದೆ. ಒಳ್ಳೆ ಚಿತ್ರ ಹೇಗೆ ಮಾಡಿದ್ರೂ ಓಡತ್ತೆ. ಮಂಗಳೂರು ಜನರು ಮಾತ್ರ ಸುಲಭದಲ್ಲಿ ಒಪ್ಪಿಕೊಳ್ಳಲ್ಲ. ಸ್ವಲ್ಪ ಲೇಟ್ ಆಗಿಯಾದ್ರೂ ಒಪ್ಕೋತಾರೆ. ಮೈಂಡ್ ಸೆಟ್ ಚೇಂಜ್ ಆಗ್ತಾ ಇದೆ. ನನ್ನ ಕೆರಿಯರಲ್ಲಿ 16 ಹೊಸ ಸಿಂಗರನ್ನು ಹಾಡಿಸಿದ್ದೇನೆ. ಶಮಿತಾ ಮಲ್ನಾಡ್, ಮೂಲ್ಕಿ ಶ್ರೀನಿವಾಸ್ ಸೇರಿ ಹಲವರಿಗೆ ಅವಕಾಶ ಕೊಟ್ಟಿದ್ದೇನೆ. ಅವಕಾಶ ಸಿಕ್ಕತ್ತೆ, ನಾವು ಅದನ್ನು ಹೇಗೆ ಬಳಸಿಕೊಳ್ತೀವಿ ಅನ್ನೋದು ಮುಖ್ಯ. ಒಳ್ಳೆದಾಗಿ ಮಾಡಿದ್ರೆ, ಹಿಟ್ ಆಗತ್ತೆ. ಡೆಫಿನಿಟ್ ಗೆಲ್ತಾರೆ. ಈಗಲೂ ಹೇಳುತ್ತೇನೆ, ನಮ್ಮಲ್ಲಿ ಟ್ಯಾಲೆಂಟ್ ಕಡಿಮೆ ಇದೆ. ಒಮ್ಮೆ ಪಬ್ಲಿಸಿಟಿ ಬಂದ ಕೂಡಲೇ ಕಲಿಯೋದು ಕಮ್ಮಿ ಆಗ್ತಾ ಇದೆ. ರಿಯಾಲಿಟಿ ಶೋ ಆಗ್ತಾ ಇರತ್ತೆ. ಹಾಗಂತ, ಅಲ್ಲಿ ಅವಕಾಶ ಸಿಕ್ಕದಿದ್ದರೂ, ಟ್ಯಾಲೆಂಟ್ ಇದ್ದವರು ಇವತ್ತಿನ ಸೋಶಿಯಲ್ ಮೀಡಿಯಾದಲ್ಲಿ ಮೇಲೆ ಬಂದೇ ಬರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಇಬ್ರಾಹಿಂ ಅಡ್ಕಸ್ಥಳ ಇದ್ದರು. ಮಂಗಳೂರಿನ ಹಲವಾರು ಸಂಗೀತ ಕಲಾವಿದರು ಆಗಮಿಸಿ ಗುರುಕಿರಣ್ ಅವರನ್ನು ಅಭಿನಂದಿಸಿದರು. ಖ್ಯಾತ ಚಿತ್ರ ಕಲಾವಿದ ಜಾನ್ ಚಂದ್ರನ್ ಅವರು ಕೈಯಲ್ಲಿ ಬಿಡಿಸಿದ ಕ್ಯಾರಿಕೇಚರ್ ಗುರುಕಿರಣ್ ಅವರಿಗೆ ಅರ್ಪಿಸಿದರು.

Mangalore music director Gurukiran says Actor Darshan should come out soon. All can't be Dr Rajkumar, darhana should loose his temper.