Love Jihad: ಬಲಿಪಶು ಆಸಿಯಾ ಮತ್ತೆ ಬೀದಿಗೆ ; ನ್ಯಾಯ ಕೇಳಿದ ವಜ್ರದೇಹಿ ಸ್ವಾಮೀಜಿಗೆ ಜೀವ ಬೆದರಿಕೆ !

10-12-20 08:34 pm       Mangaluru Correspondent   ಕರಾವಳಿ

ಆಸಿಯಾ ಪ್ರಕರಣದಲ್ಲಿ ನ್ಯಾಯ ಕೊಡಿಸಲು ಮುಂದಾಗಿರುವ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿವೆ.

ಮಂಗಳೂರು, ಡಿ.10: ಲವ್ ಜಿಹಾದ್ ಪ್ರಕರಣದಲ್ಲಿ ಬಲಿಪಶು ಆಗಿರುವ ಸುಳ್ಯದ ಕಟ್ಟೆಕಾರಿನ ಯುವತಿ ಶಾಂತಿಜೂಬಿ ಯಾನೆ ಆಸಿಯಾ ಮತ್ತೆ ಬೀದಿಗೆ ಬಂದಿದ್ದಾರೆ. ಆಸಿಯಾ ಕುಟುಂಬಸ್ಥರು ಆಕೆಯನ್ನು ಮತ್ತೆ ತಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದ ಭರವಸೆ ಹುಸಿಯಾಗಿದೆ. ಆಸಿಯಾ ತನ್ನ ಗಂಡನಿಗಾಗಿ ಮತ್ತೆ ಕಟ್ಟೆಕಾರ್ ಕುಟುಂಬದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾಳೆ.

ಈ ನಡುವೆ, ಆಸಿಯಾ ಪ್ರಕರಣದಲ್ಲಿ ನ್ಯಾಯ ಕೊಡಿಸಲು ಮುಂದಾಗಿರುವ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿವೆ. ನಿಮಗ್ಯಾಕೆ ಬೇಕ್ರಿ ನಮ್ ಸುದ್ದಿ.. ನೀವು ನಮ್ಮ ವಿಚಾರದಲ್ಲಿ ಎಂಟ್ರಿ ಕೊಟ್ಟರೆ ಕೈಕಾಲು ಮುರಿಯುತ್ತೇವೆ ಎಂದು ಒಬ್ಬ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ. ಮತ್ತೊಬ್ಬ ಫೋನ್ ಮಾಡಿ, ನಮ್ಮ ವಿಚಾರ ನಿಮಗೆ ಬೇಡ. ನೀವು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ಕೊಲ್ಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಈ ಎರಡೂ ಕರೆಗಳಿಗೂ ಸ್ವಾಮೀಜಿ, ಪ್ರತಿಕ್ರಿಯೆ ನೀಡಿದ್ದು ನೀವು ಕೈಕಾಲು ಮುರಿಯುವುದಿದ್ದರೆ ಗುರುಪುರದ ಮಠಕ್ಕೆ ಬನ್ನಿ. ನಾನು ಇರುತ್ತೇನೆ. ಆಸಿಯಾ ಹಿಂದು ಹೆಣ್ಮಗಳು. ಆಕೆಯನ್ನು ಮತಾಂತರಿಸಿ, ಈಗ ಬೀದಿಗೆ ತಂದಿದ್ದಾರೆ. ಈ ವಿಚಾರದಲ್ಲಿ ನಾವು ದನಿ ಎತ್ತಬೇಡಿ ಅಂದರೆ ನಿಮ್ಮ ಮುಸ್ಲಿಂ ಸಂಘಟನೆಗಳು ಈ ಕೆಲಸವನ್ನು ಮಾಡಲಿ. ಆಕೆಗೆ ನ್ಯಾಯ ಕೊಡಿಸಲಿ ಎಂದು ಮರು ಸವಾಲು ಹಾಕಿದ್ದಾರೆ.

ಎರಡು ಕರೆಗಳೂ ವಿದೇಶದಿಂದ ಬಂದಿರುವುದಾಗಿ ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ. ಅಲ್ಲದೆ, ಆಸಿಯಾ ಪ್ರಕರಣದಲ್ಲಿ ನಾವು ಹಿಂದು ಸಂಘಟನೆಗಳ ಜೊತೆ ಸೇರಿ ಹೊಸ ರೂಪದ ಆಂದೋಲನ ಮಾಡುತ್ತೇವೆ. ಇದು ಈಕೆಗೆ ಒಬ್ಬಳಿಗೆ ಆಗಿರುವ ಅನ್ಯಾಯ ಅಲ್ಲ. ಸಮಸ್ತ ಹಿಂದು ಸಮಾಜಕ್ಕೆ ಮಾಡಿರುವ ಅನ್ಯಾಯ. ಹೀಗೆ ನೂರಾರು ಮಂದಿ ಹೆಣ್ಮಕ್ಕಳನ್ನು ಮತಾಂತರಿಸಿ, ಬೀದಿಗೆ ತಳ್ಳಿರುವ ಪ್ರಕರಣ ಇದೆ. ಈ ಎಲ್ಲದರಲ್ಲಿ ನಾವು ಅವರನ್ನು ಮರಳಿ ಮಾತೃಧರ್ಮಕ್ಕೆ ತಂದ ಮಾತ್ರಕ್ಕೆ ಮುಗಿದು ಹೋಗಲ್ಲ. ಅವರು ಮುಂದೆ ಬದುಕಿ ಬಾಳಬೇಕು. ಈಗ ಆಸಿಯಾ ಇಸ್ಲಾಂ ಧರ್ಮದಲ್ಲೇ ಇರುತ್ತೇನೆ ಎನ್ನುತ್ತಾರೆ. ಆಕೆಯನ್ನು ನಾವು ಬಲವಂತ ಪಡಿಸುವುದಿಲ್ಲ. ಆದರೆ, ಬಿಟ್ಟು ಹೋದ ಗಂಡ ಜೊತೆಗೆ ಬಂದು ಬಾಳಬೇಕು. ಆಕೆಗೆ ಅನ್ಯಾಯ ಆಗಬಾರದು ಎಂದಷ್ಟೇ ನಮ್ಮ ಕೋರಿಕೆ ಎಂದು ಹೇಳಿದ್ದಾರೆ.

Read: ಪ್ರೀತಿ, ಮತಾಂತರ, ಮದುವೆ ; ಮುಸ್ಲಿಂ ಲವ್ ಜಿಹಾದ್ ಬಲಿಯಾದ ಯುವತಿ ಬೀದಿಪಾಲು !!

ಹತ್ತು ದಿನಗಳ ಹಿಂದೆ ಮಾಧ್ಯಮದಲ್ಲಿ ಆಸಿಯಾ ಬಗ್ಗೆ ಸುದ್ದಿಯಾದಾಗ ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಮತ್ತು ಕೆಲವು ಮುಸ್ಲಿಂ ಮುಖಂಡರು ಆಕೆಯ ಪತಿ ಖಲೀಲ್ ಇರುವ ಕಟ್ಟೆಕಾರ್ ಕುಟುಂಬಸ್ಥರನ್ನು ಮನವೊಲಿಸಿ ಮತ್ತೆ ಮನೆಗೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದರು. ಅದರಂತೆ, ಡಿ.10ರ ಮೊದಲು ತನ್ನನ್ನು ಮತ್ತೆ ಕುಟುಂಬಕ್ಕೆ ಸೇರಿಸಿಕೊಳ್ಳುತ್ತಾರೆ. ಪತಿಯೂ ನನ್ನ ಜೊತೆಗೆ ಬರುತ್ತಾರೆ ಎಂದು ಆಸಿಯಾ ಹೇಳಿಕೊಂಡಿದ್ದರು. ಆದರೆ, ಗಡುವಿನ ದಿನಾಂಕ ಹತ್ತಿರ ಬರುತ್ತಿದ್ದಂತೆ ಗಂಡನ ಕಡೆಯವರು ತಿರುಗಿ ಬಿದ್ದಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಪ್ರತಿಷ್ಠಿತ ಹಿಂದು ಮನೆತನದ ಹುಡುಗಿಯಾಗಿರುವ ಶಾಂತಿ ಜೂಬಿ ಯಾನೆ ಆಸಿಯಾಳನ್ನು ಬೆಂಗಳೂರಿನಲ್ಲಿ ಖಲೀಲ್ ಎಂಬಾತ ಮತಾಂತರಿಸಿ, ಮದುವೆಯಾಗಿದ್ದ. ಎರಡು ವರ್ಷಗಳ ಕಾಲ ಜೊತೆಗೆ ಬಾಳಿದ್ದು ಹುಟ್ಟೂರು ಸುಳ್ಯಕ್ಕೆ ಬಂದಿದ್ದ ಖಲೀಲ್ ನಾಪತ್ತೆಯಾಗಿದ್ದಾನೆ. ಖಲೀಲ್ ನನ್ನು ಆತನ ಕುಟುಂಬಸ್ಥರೇ ಸೇರಿ ನಾಪತ್ತೆ ಮಾಡಿದ್ದು ತನ್ನನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಆಸಿಯಾ ಹೇಳಿದ್ದರು.  

Video:

Mangalore Rajashekharananda Swamiji of Vajradehi Mata receives threat calls for interfering in love jihad case of Asiya Joobi Ibrahim Khaleel Kattekar, Sullia.