Mangalore, Ullal News: ಹಾಸಿಗೆ ಹಿಡಿದ ಯುವತಿ ಚಿಕಿತ್ಸೆಗಾಗಿ ದೃಶ್ಯರೂಪಕ, ಹಣ ಸಂಗ್ರಹ ; ಯುವಕರ ತಂಡದಿಂದ ಸಂತ್ರಸ್ತೆ ಕುಟುಂಬಕ್ಕೆ 1.43 ಲಕ್ಷ ರೂ. ನೆರವು ಹಸ್ತಾಂತರ 

21-10-24 09:23 pm       Mangalore Correspondent   ಕರಾವಳಿ

ಮೆದುಳಿನ ನರದ ಸಮಸ್ಯೆಯಿಂದ ಬಳಲುತ್ತಿರುವ ಯುವತಿಯ ಚಿಕಿತ್ಸೆಗಾಗಿ ಉಳ್ಳಾಲ ಧರ್ಮನಗರದ "ಟೀಮ್ ಹನುಮಾನ್ " ಸಂಘಟನೆಯ ವತಿಯಿಂದ ಉಳ್ಳಾಲ ಶಾರದೋತ್ಸವದಲ್ಲಿ ದೃಶ್ಯರೂಪಕದ ಟ್ಯಾಬ್ಲೋ ಮತ್ತು ಯಕ್ಷವೇಷ ಧರಿಸಿ ದಾನಿಗಳಿಂದ ಸಂಗ್ರಹಿಸಿದ 1,43,330 ರೂ.ಗಳ ಚೆಕ್ಕನ್ನ ಸಂತ್ರಸ್ತೆ ಕುಟುಂಬಕ್ಕೆ ಹಸ್ತಾಂತರಿಸಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಉಳ್ಳಾಲ, ಅ.20: ಮೆದುಳಿನ ನರದ ಸಮಸ್ಯೆಯಿಂದ ಬಳಲುತ್ತಿರುವ ಯುವತಿಯ ಚಿಕಿತ್ಸೆಗಾಗಿ ಉಳ್ಳಾಲ ಧರ್ಮನಗರದ "ಟೀಮ್ ಹನುಮಾನ್ " ಸಂಘಟನೆಯ ವತಿಯಿಂದ ಉಳ್ಳಾಲ ಶಾರದೋತ್ಸವದಲ್ಲಿ ದೃಶ್ಯರೂಪಕದ ಟ್ಯಾಬ್ಲೋ ಮತ್ತು ಯಕ್ಷವೇಷ ಧರಿಸಿ ದಾನಿಗಳಿಂದ ಸಂಗ್ರಹಿಸಿದ 1,43,330 ರೂ.ಗಳ ಚೆಕ್ಕನ್ನ ಸಂತ್ರಸ್ತೆ ಕುಟುಂಬಕ್ಕೆ ಹಸ್ತಾಂತರಿಸಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಉಳ್ಳಾಲ ಧರ್ಮನಗರದ "ಟೀಮ್ ಹನುಮಾನ್" ಸಂಘಟನೆಯ ಯುವಕರು ಪ್ರತೀ ವರುಷವೂ ನವರಾತ್ರಿ ಉತ್ಸವದಂದು ಯಕ್ಷ ವೇಷ ಧರಿಸಿ, ಉಳ್ಳಾಲ ಶಾರದೋತ್ಸವದಲ್ಲಿ ದೃಶ್ಯ ರೂಪಕದ ಟ್ಯಾಬ್ಲೋ ಇಳಿಸಿ ದಾನಿಗಳಿಂದ ಸಂಗ್ರಹಿಸಿದ ಹಣವನ್ನ ಸಮಾಜದ ಅಶಕ್ತ ವರ್ಗದ ಒಲಿತಿಗಾಗಿ ವಿನಿಯೋಗಿಸುತ್ತ ಬಂದಿದ್ದಾರೆ.

ಮಂಗಳೂರಿನ ನೀರುಮಾರ್ಗ, ಕಟ್ಟೆಂಜ ನಿವಾಸಿಗಳಾದ ಸಂತೋಷ್ - ಯುಮುನಾ ದಂಪತಿ ಪುತ್ರಿ ಕುಮಾರಿ ಪವಿತ್ರಾಳ ಮೆದುಳಿನ ನರದ ಚಿಕಿತ್ಸೆಗೆ ಲಕ್ಷಾಂತರ ರೂ.ಗಳ ಅವಶ್ಯಕತೆ ಎದುರಾಗಿದೆ. ಪವಿತ್ರಾಳ ಚಿಕಿತ್ಸೆಗೆ ಸಹಾಯ ನೀಡುವ ಸಲುವಾಗಿ "ಟೀಮ್ ಹನುಮಾನ್ " ಸಂಘಟನೆಯ ಯುವಕರು ಈ ಬಾರಿಯೂ ನವರಾತ್ರಿ ಸಂದರ್ಭ ಯಕ್ಷವೇಷ ಧರಿಸಿದ್ದರು. ಉಳ್ಳಾಲ ಶಾರದಾ ಮಹೋತ್ಸವದಲ್ಲಿ ತೃತೀಯ ವರ್ಷದ ದೃಶ್ಯರೂಪಕ ಪ್ರದರ್ಶನ ನೀಡಿ ದಾನಿಗಳಿಂದ ಸಂಗ್ರಹಿಸಿದ 1,43,330 ರೂ. ಮೊತ್ತದ ಚೆಕ್ಕನ್ನು ಪವಿತ್ರಾಳ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಉಳ್ಳಾಲ ಧರ್ಮನಗರದ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದಲ್ಲಿ ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ಸಂತ್ರಸ್ತ ಕುಟುಂಬಕ್ಕೆ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು ಸಣ್ಣ ವಯಸ್ಸಿನ ಹುಡುಗರು ಸಮಾಜಕ್ಕೆ ಮಾದರಿಯಾದ ಸಂಘಟನೆ ಕಟ್ಟಿದ್ದು ಮುಂದೆಯೂ ಈ ತಂಡದ ಸದಸ್ಯರು ಜತೆಯಾಗಿ ಮುಂದೆ ಸಾಗಬೇಕಿದೆ. ಕೆಲವೊಂದು ಸಂಘಟನೆಗಳು ಉತ್ಸವ ನೆಪದಲ್ಲಿ ಟ್ಯಾಬ್ಲೋ ಮಾಡಿ ಗಳಿಸಿದ ಹಣವನ್ನ ಮೋಜಿಗೆ ಬಳಸುತ್ತಾರೆ. ಆದರೆ ಟೀಮ್ ಹನುಮಾನ್ ತಂಡದ ಯುವಕರು ಪ್ರತೀ ವರುಷವೂ ಶಾರದೋತ್ಸವದಲ್ಲಿ ದೃಶ್ಯ ರೂಪಕದ ಟ್ಯಾಬ್ಲೋ ಮಾಡಿ ಸಮಾಜದ ಸಹೃದಯಿಗಳಿಂದ ಕ್ರೋಢೀಕರಿಸಿದ ಹಣವನ್ನ ಅಶಕ್ತರ ಕಣ್ಣೀರೊರೆಸುವ ಕಾರ್ಯಗಳಿಗೆ ಬಳಸುತ್ತಿರುವುದು ಎಲ್ಲಾ ಸಂಘಟನೆಗಳಿಗೂ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಯಲ್ಲಿ ಬಳಲುತ್ತಿರುವ ಅರ್ಹ ಕುಟುಂಬಗಳಿಗೆ ಟೀಮ್ ಹನುಮಾನ್ ತಂಡದಿಂದ ಸಹಾಯಧನ ವಿತರಿಸಲಾಯಿತು. ಅಶಕ್ತ ಕುಟುಂಬಗಳಿಗೆ ತಿಂಗಳ ದಿನಸಿ ಕಿಟ್ ವಿತರಿಸಲಾಯಿತು. ತೆಂಗಿನಹಿತ್ಲು ರಾಹುಗುಳಿಗ ಬನದ ಗೌರವಾಧ್ಯಕ್ಷ ನಾರಾಯಣ, ಧರ್ಮನಗರ ನಾಗಬ್ರಹ್ಮ ಪರಿವಾರ ದೈವಗಳ ಕ್ಷೇತ್ರದ ಗೌರವಾಧ್ಯಕ್ಷ ಗೋಪಾಲ ಧರ್ಮನಗರ, ಅಧ್ಯಕ್ಷ ಪ್ರಭಾಕರ ಧರ್ಮನಗರ, ರಾಹುಗುಳಿಗ ಬನದ ಗೌರವಾಧ್ಯಕ್ಷ ನಾರಾಯಣ ತೆಂಗಿನಹಿತ್ಲು, ಅಧ್ಯಕ್ಷ ಭಾಸ್ಕರ ತೆಂಗಿನಹಿತ್ಲು, ಮಹಿಳಾ ಮಂಡಳಿ ಅಧ್ಯಕ್ಷೆ ಸುರೇಖ ಧರ್ಮನಗರ, ಉಳ್ಳಾಲ ಬೈಲು ವೈದ್ಯನಾಥ ಕ್ಷೇತ್ರದ ಅರ್ಚಕ ಮುಂಡ ಯಾನೆ ದಾಮೋದರ ಪೂಜಾರಿ, ಉಳ್ಳಾಲ ಶಾರದಾ ಕುಣಿತ ಭಜನಾ ತಂಡದ ಅಧ್ಯಕ್ಷೆ ಮಂಗಳ, ಭಾಸ್ಕರ ಪೂಜಾರಿ ಧರ್ಮನಗರ, ಟೀಮ್ ಹನುಮಾನ್ ತಂಡದ ಅಧ್ಯಕ್ಷ ಪವನ್ ಕಟಿಗೇರ, ಜಗದೀಶ್ ಗೋಳಿಯಾಡಿ ಮೊದಲಾದವರು ಉಪಸ್ಥಿತರಿದ್ದರು.

Mangalore collection of funds for the treatment of a bedridden young woman by team Hanuman in ullal.