ಬಿಗ್ ಬಿಯ ಕರೋಡ್ ಪತಿ ಕಾರ್ಯಕ್ರಮಕ್ಕೆ ಉಡುಪಿಯ ಹಾಲುಗಲ್ಲದ ಹುಡುಗ !!

12-12-20 10:51 am       Udupi Correspondent   ಕರಾವಳಿ

‘ಕೌನ್ ಬನೇಗಾ ಕರೋಡ್‌ಪತಿ’ಯ ವಿದ್ಯಾರ್ಥಿ ವಿಶೇಷ ಸಂಚಿಕೆಯಲ್ಲಿ ಉಡುಪಿಯ ವಿದ್ಯಾರ್ಥಿಗೆ ಅವಕಾಶ ಲಭಿಸಿದೆ. 

ಉಡುಪಿ, ಡಿ.12: ಬಿಗ್ ಬಿ ಅಮಿತಾಭ್ ಸೋನಿ ಟಿವಿಯಲ್ಲಿ ನಡೆಸುತ್ತಿರುವ ಕ್ವಿಝ್ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯ (ಕೆಬಿಸಿ) ವಿದ್ಯಾರ್ಥಿ ವಿಶೇಷ ಸಂಚಿಕೆಯಲ್ಲಿ ಉಡುಪಿಯ ವಿದ್ಯಾರ್ಥಿಗೆ ಅವಕಾಶ ಲಭಿಸಿದೆ. 

ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಈ ಅವಕಾಶ ಪಡೆದಿದ್ದಾನೆ. ಡಿ.14ರಿಂದ 17ರ ವರೆಗೆ ಕೆಬಿಸಿಯ ‘ಸ್ಟುಡೆಂಟ್ ಸ್ಪೆಷಲ್’ ನಡೆಯಲಿದ್ದು ಅಮಿತಾಬ್ ಬಚ್ಚನ್ ಎದುರು ಹಾಟ್‌ ಸೀಟ್‌ನಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆದಿದ್ದಾನೆ. ಅಂದಹಾಗೆ, ದೇಶದ ಎಂಟು ಮಂದಿ ಫೈನಲಿಸ್ಟ್ ವಿದ್ಯಾರ್ಥಿಗಳಲ್ಲಿ ಅನಾಮಯ ಕೂಡ ಒಬ್ಬ. 

ಈ ಸ್ಪರ್ಧೆಗಾಗಿ ದೇಶಾದ್ಯಂತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 1.5 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೆಬಿಸಿಯ ಸ್ಟುಡೆಂಟ್ ಸ್ಪೆಷಲ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ವೇದಾಂತ ಆನ್‌ಲೈನ್ ಲರ್ನಿಂಗ್ ಆ್ಯಪ್ ಮೂಲಕ ಅಕ್ಟೋಬರ್ 5ರಿಂದ 25ರ ವರೆಗೆ ಆನ್‌ಲೈನ್ ಕ್ವಿಝ್ ಆಯೋಜಿಸಲಾಗಿತ್ತು. 

ಆರಂಭಿಕ ಸ್ಪರ್ಧೆಯ ಬಳಿಕ ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸರದಿ ಕ್ವಿಝ್ ಪರೀಕ್ಷೆಗೊಳಪಡಿಸಿದ್ದು, ಅಂತಿಮವಾಗಿ ‘ಕೆಬಿಸಿ ಸ್ಟುಡೆಂಟ್ ಸ್ಪೆಷಲ್’ಗೆ ಎಂಟು ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಕಾರ್ಯಕ್ರಮ ಸೋನಿ ಟಿವಿಯಲ್ಲಿ ಡಿ.14ರಿಂದ 17ರವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ.

ಹುಡುಗನಿಗೆ ಕಾರು ಕಂಪೆನಿ ಕಟ್ಟುವ ಕನಸು ! 

ಹಿಂದಿ, ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಮಾತನಾಡುವ ಅನಾಮಯನಿಗೆ ಕಾರುಗಳೆಂದರೆ ಏನೋ ಮೋಹ. ಆತ ಹೆಚ್ಚು ಕಾಲ ಕಾರುಗಳ ಕುರಿತಾಗಿಯೇ ಅಧ್ಯಯನದಲ್ಲಿ ತೊಡಗುತ್ತಾನೆ. ಸ್ವಂತ ಕಾರು ತಯಾರಿಕಾ ಸಂಸ್ಥೆ ಆರಂಭಿಸುವ ಕನಸು ಹೊಂದಿರುವ ಅನಾಮಯ, ಈಗಾಗಲೇ ಕನಸಿನ 72 ಕಾರುಗಳ ಹೆಸರುಗಳನ್ನು ಬರೆದಿಟ್ಟಿರುವುದಾಗಿ ಹೇಳುತ್ತಾನೆ. 

ಅಜ್ಜರಕಾಡಿನಲ್ಲಿ ತಂದೆ, ತಾಯಿ, ಅಕ್ಕ ಹಾಗೂ ಅಜ್ಜಿಯೊಂದಿಗೆ ವಾಸವಾಗಿರುವ ಅನಾಮಯ ದೊಡ್ಡವನಾಗಿ ತನ್ನದೇ ಕಂಪೆನಿ ಕಟ್ಟುವ ಕನಸು ಹೊಂದಿದ್ದಾನೆ. ಇದಕ್ಕಾಗಿ ಕೆಬಿಸಿಯಲ್ಲಿ ಚೆನ್ನಾಗಿ ಉತ್ತರಿಸಿ ಅತಿ ಹೆಚ್ಚು ಹಣವನ್ನು ಗೆಲ್ಲಬೇಕೆಂಬ ಗುರಿಯನ್ನು ಹೊಂದಿದ್ದಾನೆ.

Photo Credit: Sony

Video: 

Udupi Anamaya Yogesh of Vidyalaya public school is selected for students a special week at Kon Banega Karodpati with Big B.