Leopard, pilar, Deralakatte; ದೇರಳಕಟ್ಟೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ವದಂತಿ, ಸಿಸಿಟಿವಿಯಲ್ಲಿ ಅಸ್ಪಷ್ಟ ಪ್ರಾಣಿಯ ಚಹರೆ ಪತ್ತೆ, ಅರಣ್ಯಾಧಿಕಾರಿಗಳ ಪರಿಶೀಲನೆ, ವದಂತಿ ಹಬ್ಬಿಸಿದ ಪ್ರತ್ಯಕ್ಷದರ್ಶಿ ವಲಸೆ ಕಾರ್ಮಿಕ ನಾಪತ್ತೆ 

28-10-24 03:53 pm       Mangalore Correspondent   ಕರಾವಳಿ

ದೇರಳಕಟ್ಟೆ ಸಮೀಪದ ಪಾನೀರು ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವದಂತಿ ಹಬ್ಬಿದೆ. ಸ್ಥಳೀಯ ಕಾನ್ವೆಂಟ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಾಣಿಯೊಂದು ಓಡುತ್ತಿದ್ದು, ನಾಯಿಗಳು ಅದನ್ನ ಬೆನ್ನಟ್ಟುವ ಅಸ್ಪಷ್ಟ ವೀಡಿಯೋ ಚಿತ್ರಣ ಲಭಿಸಿದೆ.

ಉಳ್ಳಾಲ, ಅ.28: ದೇರಳಕಟ್ಟೆ ಸಮೀಪದ ಪಾನೀರು ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವದಂತಿ ಹಬ್ಬಿದೆ. ಸ್ಥಳೀಯ ಕಾನ್ವೆಂಟ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಾಣಿಯೊಂದು ಓಡುತ್ತಿದ್ದು, ನಾಯಿಗಳು ಅದನ್ನ ಬೆನ್ನಟ್ಟುವ ಅಸ್ಪಷ್ಟ ವೀಡಿಯೋ ಚಿತ್ರಣ ಲಭಿಸಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾನೀರು ಭಾಗದ ಕಾಂಗ್ರೆಸ್ ಮುಖಂಡ ಆಲ್ವಿನ್ ಡಿಸೋಜ ಅವರ ಮನೆಯ ಹಿಂಭಾಗದ ಕಾನ್ವೆಂಟ್ ಒಂದರ ಮುಂಭಾಗದಿಂದ ಚಿರತೆಯೊಂದು ಓಡಿರುವ ಬಗ್ಗೆ ವದಂತಿ ಹಬ್ಬಿದೆ. ಉತ್ತರ ಪ್ರದೇಶದ ವಲಸೆ ಕಾರ್ಮಿಕನೋರ್ವನು ಚಿರತೆ ಇರುವಿಕೆ ಬಗ್ಗೆ ವದಂತಿ ಹಬ್ಬಿಸಿದ್ದ ಎನ್ನಲಾಗುತ್ತಿದೆ. ಇಂದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳೀಯ ಕಾನ್ವೆಂಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಪ್ರಾಣಿಯೊಂದನ್ನ ನಾಯಿಗಳು ಅಟ್ಟಿಸಿಕೊಂಡು ಓಡುತ್ತಿರುವ ಅಸ್ಪಷ್ಟ ದೃಶ್ಯ ಕಂಡುಬಂದಿದೆ. ಪಾನೀರು ಪ್ರದೇಶದಲ್ಲಿ ಚಿರತೆಯನ್ನ ಕಂಡ ಪ್ರತ್ಯಕ್ಷದರ್ಶಿ ಎಂದು ಹೇಳಲಾಗಿದ್ದ ವಲಸೆ ಕಾರ್ಮಿಕ ಅರಣ್ಯಾಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ.

ಚಿರತೆಯ ಇರುವಿಕೆ ಬಗ್ಗೆ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿದ ಪರಿಣಾಮ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರು ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಕೋಟೆಕಾರು ಶಾಖಾ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ಭೇಟಿ ನೀಡಿ ಸಿಸಿಟಿವಿ ಮತ್ತು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿಯ ನಸುಕಿನ ವೇಳೆಯ ವೀಡಿಯೋದಲ್ಲಿ ನಾಯಿಗಳು ಅಟ್ಟಿಸುತ್ತಿರುವ ಪ್ರಾಣಿ ಯಾವುದೆಂದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಚಿರತೆಯನ್ನ ನೋಡಿದ್ದಾನೆಂಬ ಪ್ರತ್ಯಕ್ಷದರ್ಶಿ ಸಿಕ್ಕಿಲ್ಲ. ಚಿರತೆ ಇರುವಿಕೆ ದೃಢವಾದರೆ ಅದನ್ನ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸೋದಾಗಿ ಹೇಳಿದ್ದಾರೆ.

Rumours of Leopard being found at pilar in Deralakatte, Mangalore, video goes viral. Man who made the video viral stating he found leopard is now gone missing.